ಶನಿವಾರ, ಮೇ 28, 2022
26 °C
ಗೋಪುರದಲ್ಲಿ ದಶಾವತಾರದ ಮೂರ್ತಿಗಳು

ಲಕ್ಷ್ಮೀನರಸಿಂಹ ದೇವಾಲಯ: ನಾಳೆಯಿಂದ ಕುಂಭಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ನಾಲ್ಕು ತಲೆಮಾರುಗಳಿಂದ ನಡೆದಿದ್ದ ಪ್ರಯತ್ನದ ಫಲವಾಗಿ ಇದೀಗ ನಗರದ ಹೊರವಲಯದ ನಲ್ಲಿಮರದಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸುಂದರವಾಗಿ ನಿರ್ಮಾಣವಾಗಿದೆ. ಫೆ.16ರಿಂದ 18ರವರೆಗೂ ದೇವಾಲಯದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಸ್ಥಿರಬಿಂಬ, ಶಿವಲಿಂಗ, ನಾಗರಾಜ, ಧ್ವಜಸ್ತಂಭ, ವಿಮಾನಗೋಪುರ ಕಲಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ನಡೆಯಲಿದೆ.

ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯವನ್ನು ಗೋಪಾಲಸ್ವಾಮಿ ದೇವಾಲಯವೆಂದು ಹೆಸರಿಸಲಾಗಿದೆ. ಹಿರಿಯರು ಈ ದೇಗುಲ ಆರು ಶತಮಾನಕ್ಕೂ ಹಿಂದಿನದು ಎನ್ನುತ್ತಾರೆ. ಸುಮಾರು 70–80 ವರ್ಷಗಳ ಹಿಂದೆ ಅಜ್ಜಪ್ಪ ಎನ್ನುವವರು ತಮ್ಮ ಸ್ವಂತ ಹಣದಿಂದ ಇಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿದ್ದರು. ಹಲವು ದಶಕಗಳಿಂದ ಇಲ್ಲಿ ದೇವಾಲಯ ನಿರ್ಮಿಸಲು ಪ್ರಯತ್ನಿಸಿದ್ದರೂ ಹಲವಾರು ವಿಘ್ನಗಳು ತಲೆದೋರಿದ್ದವು. ಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ಒಗ್ಗೂಡಿ ಇದೀಗ ಹಳೆಯ ವಿಗ್ರಹವನ್ನು ಹಾಗೆಯೇ ಇದ್ದ ಸ್ಥಳದಲ್ಲಿಯೇ ಉಳಿಸಿಕೊಂಡು ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.

ಶಿವಾರಪಟ್ಟಣದ ಶಿಲ್ಪಿಗಳು ಕೆತ್ತಿರುವ ಆರು ಅದಿ ಎತ್ತರದ ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹ ಮತ್ತು 22 ಅಡಿ ಎತ್ತರದ ಧ್ವಜಸ್ತಂಭ ದೇವಲಯದ ಮುಕುಟಪ್ರಾಯವಾಗಿದೆ. ದೇವಾಲಯದ ಮೇಲೆ ದಶಾವತಾರದ ಶಿಲ್ಪಗಳು, ಗೋಪುರದ ಬಳಿ ಆಂಜನೆಯ, ಗರುಡ ಮತ್ತು ಲಕ್ಷ್ಮೀನರಸಿಂಹಸ್ವಾಮಿ, ದೇವಸ್ಥಾನದ ಒಳಗೆ ಜಯ ವಿಜಯರ ಮೂರ್ತಿಗಳು, ದ್ವಾರದಲ್ಲಿ ಸಿಂಹಗಳು, ಕಂಬಗಳ ಮೇಲೆ ಮಂಗಳ ವಾದ್ಯಗಳನ್ನು ನುಡಿಸುವವರ ಶಿಲ್ಪಗಳಿಗೆ ಬಣ್ಣಗಳನ್ನು ಬಳಿಯುವ ಮೂಲಕ ಆಕರ್ಷಕಗೊಳಿಸಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಪುರಾತನ ಅತ್ತಿ ಮರವನ್ನು ಸಂರಕ್ಷಿಸಿದ್ದಾರೆ.

ಕಲ್ಲಿನ ಮುಖ್ಯದ್ವಾರದ ಚೌಕಟ್ಟು, ಗರ್ಭಗುಡಿ, ಧ್ವಜಸ್ತಂಭವನ್ನು ಕಾರ್ಕಳದ ಶಿಲ್ಪಿಗಳು ಕೆತ್ತಿದ್ದರೆ, ಗೋಪುರದ ಶಿಲ್ಪಗಳನ್ನು ಸಿಮೆಂಟಿನಲ್ಲಿ ನಾಗಪಟ್ನಂ ಶಿಲ್ಪಿಗಳು ರೂಪಿಸಿರುವರು. ದಕ್ಷಿಣ ಕನ್ನಡ ಶೈಲಿಯ ದೇವಾಲಯದಂತೆ ಗರ್ಭಗುಡಿಗೆ ಒಂಬತ್ತು ಮೆಟ್ಟಿಲು ಹತ್ತಿ ಹೋಗುವಂತೆ ಕಟ್ಟಿಸಲಾಗಿದೆ.

ಭಕ್ತರಿಂದಷ್ಟೇ ಹಣ

‘ಇದೊಂದು ನೂರು ವರ್ಷದ ಪ್ರಯತ್ನ. ನಮ್ಮ ಟ್ರಸ್ಟ್ ವತಿಯಿಂದ 2016ರಲ್ಲಿ ದೇವಸ್ಥಾನದ ಕೆಲಸವನ್ನು ಪ್ರಾರಂಭಿಸಿದೆವು. ಸರ್ಕಾರದ್ದಾಗಲೀ, ರಾಜಕಾರಣಿಗಳದ್ದಾಗಲೀ ಹಣ ಪಡೆದಿಲ್ಲ. ಜಾತಿ ಮತ್ತು ರಾಜಕಾರಣವನ್ನು ಬದಿಗಿಟ್ಟು ಕೇವಲ ಭಕ್ತರಿಂದಷ್ಟೇ ಹಣ ಸಂಗ್ರಹಿಸಿ ಪಾರದರ್ಶಕವಾಗಿ ದೇವರ ಕೆಲಸ ಮಾಡಿದ್ದೇವೆ. ಸುಮಾರು ₹60 ಲಕ್ಷಕ್ಕೂ ಮೀರಿ ವೆಚ್ಚವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೂ ಒಂದಾಗಲಿದೆ’ ಎನ್ನುತ್ತಾರೆ ಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು