ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಐಜೂರು ಘಟನೆ ಖಂಡಿಸಿ ಮುಖ್ಯಮಂತ್ರಿಗೆ ಮನವಿ

Published 19 ಫೆಬ್ರುವರಿ 2024, 15:59 IST
Last Updated 19 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆಯಲ್ಲಿ 40 ವಕೀಲರ ವಿರುದ್ಧ ಪೊಲೀಸರು ಎಫ್‌ಐಆರ್ ಹಾಕಿರುವುದನ್ನು ಖಂಡಿಸಿ ಶಿಡ್ಲಘಟ್ಟ ವಕೀಲರು ಸೋಮವಾರ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ನ್ಯಾಯಾಲಯ ಸಂಕೀರ್ಣದಿಂದ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಬಂದ ವಕೀಲರು, ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ವಕೀಲರ ವಿರುದ್ಧ ಯಾವುದೇ ತನಿಖೆ ನಡೆಸದೆ ಏಕಾಏಕಿ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ‘ರಾಮನಗರದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವೊಂದರ ತೀರ್ಪಿಗೆ ಸಂಬಂಧಿಸಿದಂತೆ ವಕೀಲನೊಬ್ಬ ನ್ಯಾಯಾಧೀಶರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಫೋಸ್ಟ್‌ ಹಂಚಿಕೊಂಡಿದ್ದ. ಆ ವಕೀಲ ಎಸ್‌ಡಿಪಿಐ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದು, ಆತನನ್ನು ವಕೀಲರ ಸಂಘದಿಂದ (ಬಾರ್ ಅಸೋಸಿಯೇಷನ್) ಯಾಕೆ ಉಚ್ಚಾಟಿಸಬಾರದು ಎಂದು ರಾಮನಗರ ವಕೀಲರ ಸಂಘವು ಪ್ರಶ್ನಿಸಿದೆ. ಅಲ್ಲದೆ, ಆ ವಕೀಲನ ವಿರುದ್ಧ ಐಜೂರು ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ. ಆದರೆ ಐಜೂರು ಠಾಣೆಯ ಎಸ್‌ಐ ವಕೀಲನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಎಸ್‌ಡಿಪಿಐ ಸಂಘಟನೆ ನೀಡಿದ ದೂರಿನ ಮೇರೆಗೆ ಯಾವುದೇ ರೀತಿಯ ವಿಚಾರಣೆ ಮಾಡದೆ 40 ವಕೀಲರ ಮೇಲೆ ದೂರು ದಾಖಲಿಸಿದ್ದಾರೆ’ ಎಂದು ದೂರಿದರು.

ಈ ಕೂಡಲೇ ಐಜೂರು ಠಾಣೆಯ ಎಸ್‌ಐ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. 40 ವಕೀಲರ ಮೇಲೆ ಹಾಕಿರುವ ಪ್ರಕರಣವನ್ನು ರದ್ದುಪಡಿಸಬೇಕು. ವಕೀಲರ ಹಿತರಕ್ಷಣಾ ಕಾಯಿದೆಯನ್ನು ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಶಿರಸ್ತೇದಾರ್ ಆಸಿಯಾಬಿ ಅವರು ಮನವಿ ಸ್ವೀಕರಿಸಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಪಾಪಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲ ಅಶ್ವತ್ಥನಾರಾಯಣ, ಸತ್ಯನಾರಾಯಣಬಾಬು, ಬೂದಾಳ ವಿಶ್ವನಾಥ್, ಬಸವನಪರ್ತಿ ನಾಗರಾಜ್, ವೆಂಕಟೇಶ್, ವೇಣುಗೋಪಾಲರೆಡ್ಡಿ, ಲಕ್ಷ್ಮಿ, ದ್ಯಾವಪ್ಪ ಹಾಗೂ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT