ಗುರುವಾರ , ಆಗಸ್ಟ್ 11, 2022
23 °C
‘ವಿಶ್ವ ಆತ್ಮಹತ್ಯೆ ತಡೆ ಸಪ್ತಾಹ’ದ ನಿಮಿತ್ತ ನಗರದಲ್ಲಿ ಅರಿವು ರಥಕ್ಕೆ ಚಾಲನೆ

ಜೀವನ ಅಮೂಲ್ಯ, ಆತ್ಮಹತ್ಯೆ ಮಾಡಿಕೊಳ್ಳದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸರ್ಕಾರದ ಸೌಲಭ್ಯಗಳು ಸಮರ್ಪಕ ರೀತಿಯಲ್ಲಿ ಸೂಕ್ತ ವ್ಯಕ್ತಿಗಳಿಗೆ ತಲುಪಿದಾಗ ಆರ್ಥಿಕ ಸಫಲತೆ ಉಂಟಾಗಿ ಆ ಮೂಲಕ ಸಮಾಜದ ಆರೋಗ್ಯ ಸ್ವಸ್ಥವಾಗಿರುತ್ತದೆ. ಆಗ ಆತ್ಮಹತ್ಯೆ ಪ್ರಕರಣಗಳೂ ಕಡಿಮೆಯಾಗುತ್ತವೆ. ಆದ್ದರಿಂದ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಭೈರಪ್ಪ ಶಿವಲಿಂಗ ನಾಯಕ ಹೇಳಿದರು.

‘ವಿಶ್ವ ಆತ್ಮಹತ್ಯೆ ತಡೆ ಸಪ್ತಾಹ’ದ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಅರಿವು ರಥಕ್ಕೆ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಒಂದು ನಿಮಿಷ ಯೋಚಿಸಿ, ಜೀವನವನ್ನು ಬದಲಾಯಿಸಿ ಮಾನಸಿಕ ರೋಗ ತಡೆಗಟ್ಟಿ, ಆತ್ಮಹತ್ಯೆಯೇ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಜೀವನದಲ್ಲಿ ಮನುಷ್ಯನಿಗೆ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಮೂಲಕ ಉತ್ತಮ ಜೀವನ ನಡೆಸಬೇಕು. ಮಾನಸಿಕ ಖಿನ್ನತೆಗೆ ಒಳಗಾಗಬಾರದು’ ಎಂದು ತಿಳಿಸಿದರು.

‘ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿ ಶೇ 70 ರಷ್ಟು ಜನರು ಕೃಷಿ ಅವಲಂಬಿಸಿ ಬದುಕುತ್ತಾರೆ. ಮಳೆಯ ಜೂಜಾಟ, ಸಕಾಲಕ್ಕೆ ಸಾಲ ದೊರೆಯದಿರುವುದು ಮುಂತಾದ ಕಾರಣಗಳಿಗೆ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇದನ್ನು ತಡೆಯುವ ದಿಸೆಯಲ್ಲಿ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ರೈತರಿಗೆ, ಕೂಲಿ ಕಾರ್ಮಿಕರಿಗೆ ತಲುಪುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು’ ಎಂದರು.

‘ಖಿನ್ನತೆಯೇ ಆತ್ಮಹತೆಗೆ ಪ್ರಮುಖ ಕಾರಣ. ಶೇ 70 ರಷ್ಟು ಜನ ಖಿನ್ನತೆ ಎಂಬ ಮಾನಸಿಕ ಅನಾರೋಗ್ಯಕ್ಕೆ ಗುರಿಯಾಗಿರುತ್ತಾರೆ. ಖಿನ್ನತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ಬದುಕಿನಲ್ಲಿ ನಿರಾಸೆ ಭಾವನೆಯಿಂದ ಆತ್ಮಹತ್ಯೆಗಳು ನಡೆಯುತ್ತಿವೆ. ಭಾರತ ಆತ್ಮಹತ್ಯೆ ಪ್ರಕರಣಗಳಲ್ಲಿ 21ನೇ ಸ್ಥಾನದಲ್ಲಿರುವುದು ಕಳವಳದ ವಿಚಾರ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ‘ಮನುಷ್ಯನ ಜೀವ ಅಮೂಲ್ಯವಾಗಿದ್ದು, ಯಾರೂ ಆತ್ಮಹತ್ಯೆಗೆ ಪ್ರಯತ್ನಿಸಬಾರದು. ಆತ್ಮಹತ್ಯೆಗೆ ಪ್ರಯತ್ನಿಸುವವರು ಕೇವಲ ಆ ಒಂದು ಕ್ಷಣದಲ್ಲಿ ಖಿನ್ನತೆಗೆ ಒಳಗಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ತಾಳ್ಮೆಯಿಂದ ಯೋಚನೆ ಮಾಡಿದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆದ್ದರಿಂದ ಜೀವನದಲ್ಲಿ ಭರವಸೆ ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.

‘ಸಮಸ್ಯೆಯು ಜೀವನದ ಒಂದು ಭಾಗ. ಅದನ್ನು ಎದುರಿಸಿ ಜೀವಂತವಾಗಿರಿ. ಪ್ರತಿ ಮನುಷ್ಯನಿಗೂ ಸಮಸ್ಯೆಗಳು ಇರುತ್ತವೆ. ಅದನ್ನು ಎದುರಿಸುವ ಶಕ್ತಿ ಸಹಾ ಅವರಿಗೆ ಇರುತ್ತದೆ. ಅದನ್ನು ತಿಳಿಯದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಎಂಬ ಪೈಶಾಚಿಕ ಕೃತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳು, ಸಂಘ ಸಂಸ್ಥೆಗಳು ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗಟ್ಟುವ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭಾನುಮತಿ, ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಶಿವಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.