ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ‘ಕೈ’ಗೆ ಗುದ್ದು; ಸುಧಾಕರ್‌ಗೆ ಗದ್ದುಗೆ

Published 5 ಜೂನ್ 2024, 0:08 IST
Last Updated 5 ಜೂನ್ 2024, 0:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಗೆಲ್ಲುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸುಧಾಕರ್ ಈಗ ಪುಟಿದು ನಿಂತಿದ್ದಾರೆ. ಆ ಮೂಲಕ ಬಿಜೆಪಿಯ ತೆಕ್ಕೆಯಲ್ಲಿಯೇ ಕ್ಷೇತ್ರವನ್ನು ಉಳಿಸಿದ್ದಾರೆ. 

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು ಗೆಲ್ಲುವ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಬಚ್ಚೇಗೌಡರ ರಾಜಕೀಯ ನಿವೃತ್ತಿ ಕಾರಣದಿಂದ ಡಾ.ಕೆ.ಸುಧಾಕರ್ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಅವರಿಗೆ ಇದು ಮೊದಲ ಲೋಕಸಭಾ ಚುನಾವಣೆಯಾಗಿತ್ತು. ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಪ್ರತಿಸ್ಪರ್ಧಿಯಾಗಿದ್ದರು. 

ಡಾ.ಕೆ.ಸುಧಾಕರ್ ಒಟ್ಟು 8,22,619 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಎಂ.ಎಸ್. ರಕ್ಷಾ ರಾಮಯ್ಯ 6,59,159 ಮತಗಳನ್ನು ಪಡೆದಿದ್ದಾರೆ. 1,63,460 ಮತಗಳ ಅಂತರದಿಂದ ಸುಧಾಕರ್ ಗೆಲುವು ಸಾಧಿಸಿದ್ದಾರೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಪೈಕಿ ದೊಡ್ಡಬಳ್ಳಾಪುರ ಮತ್ತು ಯಲಹಂಕದಲ್ಲಿ ಬಿಜೆಪಿ ಶಾಸಕರು, ದೇವನಹಳ್ಳಿ, ಹೊಸಕೋಟೆ, ಬಾಗೇಪಲ್ಲಿ, ನೆಲಮಂಗಲ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕರು ಇದ್ದಾರೆ. ಪಕ್ಷೇತರ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು, ಶಾಸಕರ ಬಲ ಮತ್ತು ಅಹಿಂದ ಮತಗಳ ಕಾರಣದಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿತ್ತು. ಲೋಕಸಭಾ ಕ್ಷೇತ್ರದ ಇತಿಹಾಸವನ್ನು ನೋಡಿದರೆ ಕಾಂಗ್ರೆಸ್‌ನ ಅಭ್ಯರ್ಥಿಗಳು ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. 

ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಕ್ಷೇತ್ರದಲ್ಲಿ ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಪ್ರಬಲವಾಗುತ್ತಿದೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಮಲ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಕಮಲದ ತೆಕ್ಕೆಗೆ ಮತ್ತೊಮ್ಮೆ ಜಾರುತ್ತದೆ ಎನ್ನುವ ಅಚಲ ವಿಶ್ವಾಸ ಬಿಜೆಪಿಯಲ್ಲಿತ್ತು. ಅದೇ ಪ್ರಕಾರ ಬಿಜೆಪಿ ಮತ್ತೊಮ್ಮೆ ಗೆದ್ದು ಬೀಗಿದೆ.

ಬಾಗೇಪಲ್ಲಿ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಆರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಡಾ.ಕೆ.ಸುಧಾಕರ್ ಮುನ್ನಡೆ ಪಡೆದಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಬಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಉತ್ತಮವಾದ ನೆಲೆ ಇದೆ. ತನ್ನದೇ ಆದ ಮತ ಬ್ಯಾಂಕ್ ಇದೆ. ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸಂಘಟಿತವಾಗಿ ಗೆಲುವಿಗೆ ಹೋರಾಟ ನಡೆಸಿದರು.

ಸುಧಾಕರ್‌ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್ ತೊರೆದರು. ಇದನ್ನು ಹೊರತುಪಡಿಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಿಯೂ ಜೆಡಿಎಸ್, ಬಿಜೆಪಿ ನಡುವೆ ಬಿರುಕು ಮೂಡಲಿಲ್ಲ. ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಬಿರುಸಿನ ಪ್ರಚಾರ ಜೆಡಿಎಸ್‌ಗಷ್ಟೇ ಅಲ್ಲ ಬಿಜೆಪಿಗೂ ಹುಮ್ಮಸ್ಸು ಮೂಡಿಸಿತು. ಹೀಗೆ ಜೆಡಿಎಸ್‌ ಬೆಂಬಲ  ಸುಧಾಕರ್ ಅವರ ಗೆಲುವಿಗೆ ಪ್ರಮುಖಅಂಶವಾಗಿದೆ.  

ಎಚ್ಚರಿಕೆಯ ಹೆಜ್ಜೆ: ವಿಧಾನಸಭೆ ಚುನಾವಣೆಯಲ್ಲಿನ ಸೋಲು ಸುಧಾಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಮಾಡಿತ್ತು. ಈ ಹಿಂದೆ ತಮ್ಮಿಂದ ಆದ ಲೋಪಗಳನ್ನು ಸರಿಪಡಿಸಿಕೊಂಡು ಮುನ್ನಡೆದರು. ‘ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಬಹಿರಂಗವಾಗಿಯೇ ಕ್ಷಮೆ ಕೋರಿದ್ದರು. ಕಣ್ಣೀರು ಸಹ ಹಾಕಿದ್ದರು.

ತಾವು ಗೆಲುವು ಸಾಧಿಸಿದರೆ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಮತ್ತು ವಿಷಯಗಳನ್ನು ‘ವಿಕಸಿತ ಚಿಕ್ಕಬಳ್ಳಾಪುರ‘ ಹೆಸರಿನ ಪ್ರಣಾಳಿಕೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಹೀಗೆ ತಮಗೆ ದೊರೆತ ಪ್ರತಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಲೇ ನಡೆದರು. ಈ ಎಲ್ಲವೂ ಡಾ.ಕೆ.ಸುಧಾಕರ್ ಅವರನ್ನು ಗೆಲುವಿನ ದಡ ಸೇರುವಂತೆ ಮಾಡಿದೆ.

ಮತ್ತೊಂದು ಕಡೆ ಕಾಂಗ್ರೆಸ್ ಅಹಿಂದ ಮತಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಪ್ರಮುಖವಾಗಿ ನೆಚ್ಚಿಕೊಂಡಿತ್ತು. ಆದರೆ ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಿಸುವಲ್ಲಿ, ಅಹಿಂದ ಸೇರಿದಂತೆ ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಫಲರಾದರು. 

ಹೀಗೆ ತಮಗೆ ದೊರೆತ ಪ್ರತಿ ಅವಕಾಶಗಳನ್ನು ಡಾ.ಕೆ.ಸುಧಾಕರ್‌ ಸದ್ಬಳಕೆ ಮಾಡಿಕೊಳ್ಳುತ್ತ ನಡೆದರೆ, ಕಾಂಗ್ರೆಸ್ ಇದಕ್ಕೆ ವ್ಯತಿರಿಕ್ತವಾಗಿ ಮುನ್ನಡೆಯಿತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗಟ್ಟಿಬೇರುಗಳಿದ್ದರೂ ಕಾಂಗ್ರೆಸ್‌ಗೆ ಗೆಲುವು ಸಾಧ್ಯವಾಗಲಿಲ್ಲ. 

.
.
ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂದೆ ಸೇರಿದ್ದ ಬಿಜೆಪಿ ಜೆಡಿಎಸ್ ಕಾರ್ಯಕರ್ತರು 
ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂದೆ ಸೇರಿದ್ದ ಬಿಜೆಪಿ ಜೆಡಿಎಸ್ ಕಾರ್ಯಕರ್ತರು 
ಸುಧಾಕರ್ ಗೆಲುವಿಗೆ ಕಾರಣವಾದ ಅಂಶಗಳು
lಸುಧಾಕರ್ ಬೆಂಬಲಕ್ಕೆ ನಿಂತ ಪ್ರಬಲ ಒಕ್ಕಲಿಗ ಸಮುದಾಯ l ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯ ಬಂಧಗಳು ಗಟ್ಟಿಯಾದುದು. ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ಸಂಘಟಿತ ಹೋರಾಟ  l ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿರುವ ಕಾರಣ ಕ್ಷೇತ್ರದ ನಾಡಿಮಿಡಿತ ಬಲ್ಲವರು l ಎರಡೂ ಜಿಲ್ಲೆಗಳಲ್ಲಿ ಅವರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು l ಚುನಾವಣಾ ತಂತ್ರಗಳನ್ನು ರೂಪಿಸುವಲ್ಲಿ ತೋರಿದ ನಿಪುಣತೆ l ವಿಧಾನಸಭೆ ಸೋಲಿನ ಅನುಕಂ‍ಪ. ಜೆಡಿಎಸ್ ಮತ್ತು ಬಿಜೆಪಿಯ ಎಲ್ಲ ನಾಯಕರನ್ನು ಒಟ್ಟಿಗೆ ಕೊಂಡೊಯ್ದ ಜಾಣ್ಮೆ  
ರಕ್ಷಾ ರಾಮಯ್ಯ ಸೋಲಿಗೆ ಕಾರಣವಾದ ಅಂಶಗಳು
lಚುನಾವಣಾ ಕಾರ್ಯತಂತ್ರಗಳನ್ನು ಉತ್ತಮವಾಗಿ ರೂಪಿಸುವಲ್ಲಿ ವಿಫಲ lಎಲ್ಲ ಹಿಂದುಳಿದ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸೋಲು lಅಸಮಾಧಾನಿತರಿಂದ ಒಳ ಏಟು. ಪಕ್ಷದಲ್ಲಿಯೇ ಇದ್ದರೂ ‘ಕೈ’ಕೊಟ್ಟ ನಾಯಕರು
‘ಸಂಸದ ಸ್ಥಾನ; ಜನರ ಭಿಕ್ಷೆ’
ಚಿಕ್ಕಬಳ್ಳಾಪುರ: ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣದ ಕನಸನ್ನು ನನಸು ಮಾಡಲು ಹಾಗೂ ಕ್ಷೇತ್ರದ ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.  ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿಸುವೆ. ನನ್ನನ್ನು ದೊಡ್ಡಮಟ್ಟದಲ್ಲಿ ಆಶೀರ್ವದಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನಸೇವಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಜನರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಕೆಲವರು ಅಪಮಾನಕರವಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಆದರೆ ನನಗೆ ಸಂಸದ ಸ್ಥಾನ ಎಂದರೆ ಜನರ ಭಿಕ್ಷೆಯೇ ಹೊರತು ವೈಯಕ್ತಿಕ ಆಡಂಬರವಲ್ಲ. ನಾನು ಸಂಸದನಾಗಿ ರಾಗ ದ್ವೇಷವಿಲ್ಲದೆ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷ ಯಾವುದೇ ಜಾತಿಯ ಜನರು ನನ್ನ ಬಳಿ ಬಂದರೆ ಅವರ ಕೆಲಸ ಮಾಡಿಕೊಡುತ್ತೇನೆ ಎಂದು ತಿಳಿಸಿದರು. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಕಾರ್ಯಕರ್ತರು ಮುಖಂಡರು ಹಾಗೂ ಹಿತೈಷಿಗಳಿಗೆ ಗೆಲುವನ್ನು ಸಮರ್ಪಿಸುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 10 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದೆ. ಇದೇ ಕ್ಷೇತ್ರದಲ್ಲಿ ಈಗ 21 ಸಾವಿರ ಹೆಚ್ಚು ಮತಗಳನ್ನು ಜನರು ನೀಡಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ 83 ಸಾವಿರ ಮತಗಳು ಹೆಚ್ಚು ಬಂದಿದೆ. ನೆಲಮಂಗಲ ಕ್ಷೇತ್ರದಲ್ಲಿ 33 ಸಾವಿರ ಅಧಿಕ ಮತಗಳು ಬಂದಿವೆ. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿಗೆ ಮತ ಬಂದಿದೆ. ಜೊತೆಗೆ ಜೆಡಿಎಸ್‌ ಸಹಯೋಗವಿದ್ದಿದ್ದರಿಂದ ಹೆಚ್ಚು ಬಲ ಬಂದಿದೆ ಎಂದರು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಎನ್‌ಡಿಎ ಗೆದ್ದಿದೆ. ಕೇಂದ್ರದಲ್ಲಿ ಸರ್ಕಾರ ರಚನೆಯಾದ ಬಳಿಕ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ಚಿಕ್ಕಬಳ್ಳಾಪುರದ ವೈದ್ಯಕೀಯ ಕಾಲೇಜು ನಿರ್ಮಾಣದ ನಂತರ ಗೋಪುರ ಕೆಲಸ ಬಾಕಿ ಉಳಿದಿದೆ. ಆ ಕೆಲಸ ಪೂರ್ಣಗೊಳಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕಿದೆ. ಎಚ್‌ಎನ್‌ ವ್ಯಾಲಿ ತೃತೀಯ ಹಂತದ ಸಂಸ್ಕರಣೆ ಕೈಗಾರಿಕೆ ಸ್ಥಾಪನೆ ಬೆಂಗಳೂರಿಗೆ ಪರ್ಯಾಯವಾಗಿ ಹೊಸ ನಗರಗಳ ಪ್ರಗತಿ ಕಾರ್ಯಗಳು ನಡೆಯಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT