ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಎಂಟಿಬಿ, ಸುಧಾಕರ್ ಸ್ನೇಹ: ವಿಧಾನಸಭೆ ಚುನಾವಣೆ ಬಳಿಕ ದೂರವಾಗಿದ್ದ ಮುಖಂಡರು

Published 1 ಮಾರ್ಚ್ 2024, 6:15 IST
Last Updated 1 ಮಾರ್ಚ್ 2024, 6:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ನಂತರ ದೂರವಾಗಿದ್ದ ಮಾಜಿ ಸಚಿವರಾದ ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ನಡುವೆ ಮತ್ತೆ ‘ಸ್ನೇಹ’ ಏರ್ಪಟ್ಟಿದೆ. ಹಳಸಿದ ಸಂಬಂಧಗಳು ಮತ್ತೆ ಸ್ನೇಹದತ್ತ ಹೊರಳಿದೆ ಎನ್ನುತ್ತವೆ ಸುಧಾಕರ್ ಆಪ್ತ ಮೂಲಗಳು. 

ವಿಧಾನಸಭೆ ಚುನಾವಣೆ ನಂತರ ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಡಾ.ಕೆ.ಸುಧಾಕರ್ ವಿರುದ್ಧ ನಾಗರಾಜ್ ನೇರವಾಗಿ ವಾಗ್ದಾಳಿ ಸಹ ನಡೆಸಿದ್ದರು.   

ಇಬ್ಬರು ನಾಯಕರು ದೇವನಹಳ್ಳಿಯಲ್ಲಿ ಗುರುವಾರ ನಡೆದ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಅಕ್ಕಪಕ್ಕ ಕುಳಿತಿದ್ದಾರೆ. ಪರಸ್ಪರ ಮೌನಮುರಿದು ಮಾತನಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಡಾ.ಕೆ.ಸುಧಾಕರ್ ಸಹ ಉತ್ಸುಕರಾಗಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಮುಖವಾಗಿದ್ದಾರೆ. ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಡಾ.ಕೆ.ಸುಧಾಕರ್, ಎಂ.ಟಿ.ಬಿ ಅವರ ವಿಶ್ವಾಸಗಳಿಸಿದ್ದಾರೆ. ಸುಧಾಕರ್ ಅವರಿಗೆ ಟಿಕೆಟ್ ನೀಡಿದರೆ ಸಹಕಾರ ನೀಡಲಿದ್ದಾರೆ. ಇಬ್ಬರ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳಾಗಿವೆ ಎಂದು ಡಾ.ಕೆ.ಸುಧಾಕರ್ ಆಪ್ತರು ನುಡಿಯುವರು. 

ಎಂ.ಟಿ.ಬಿ ಮತ್ತು ಸುಧಾಕರ್ ಜೊತೆಯಲ್ಲಿಯೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರು. ಎಂ.ಟಿ.ಬಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮತ್ತು ಸುಧಾಕರ್ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾಗಿದ್ದಾಗ ಇಬ್ಬರ ಸಂಬಂಧ ಮಧುರವಾಗಿತ್ತು. ಆದರೆ ‘ಉಸ್ತುವಾರಿ’ ಅದಲು ಬದಲಾದ ನಂತರ ಸ್ನೇಹ ಮುರಿಯಿತು.  

ಸುಧಾಕರ್ ವಿರುದ್ಧ ಎಂಟಿಬಿ ಕಿಡಿ: ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ನಾಯಕರು ಸೋಲು ಅನುಭವಿಸಿದರು. 2023ರ ಜೂನ್‌ನಲ್ಲಿ ಹೊಸಕೋಟೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಎಂ.ಟಿ.ಬಿ ನಾಗರಾಜ್, ‘ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಡಾ.ಕೆ.ಸುಧಾಕರ್ ಮಾತ್ರವಲ್ಲ, ಬಸವರಾಜ ಬೊಮ್ಮಾಯಿ ಸಹ ಕಾರಣ’ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದರು. 

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್‌ ಅವರಿಗೆ ನೀಡಿದರು. ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಸುವರ್ಣ ಅವಕಾಶ ತಪ್ಪಿಸಿದರು’ ಎಂದು ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದರು. 

‘ಎಕ್ಸ್‌’ನಲ್ಲಿ ವಾರ್: 2023ರ ಮೇ ನಲ್ಲಿ ಡಾ.ಕೆ.ಸುಧಾಕರ್, ಸಿದ್ದರಾಮಯ್ಯ ವಿರುದ್ಧ ‘ಎಕ್ಸ್‌’ (ಟ್ವೀಟ್) ಮಾಡಿದ್ದರು. ಆ ‘ಎಕ್ಸ್‌’ ಎಂ.ಟಿ.ಬಿ ನಾಗರಾಜ್ ಮತ್ತು ಸುಧಾಕರ್ ನಡುವೆ ವಾರ್‌ಗೂ ವೇದಿಕೆ ಆಗಿತ್ತು.

‘2018ರಲ್ಲಿ ಅಂದಿನ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ. ನನ್ನ ಕ್ಷೇತ್ರದ ನನ್ನ ಜಿಲ್ಲೆ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳಿತ್ತಿದ್ದರು’ ಎಂದು ಸುಧಾಕರ್ ‘ಎಕ್ಸ್‌’ ಮಾಡಿದ್ದರು. 

ತಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಸಿದ್ದರಾಮಯ್ಯ ಅವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ನಿರಾಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. 

ಇದಕ್ಕೆ ‘ಎಕ್ಸ್‌’ನಲ್ಲಿಯೇ ಪ್ರತಿಕ್ರಿಯಿಸಿದ್ದ ಎಂ.ಟಿ.ಬಿ.ನಾಗರಾಜ್, ಬಿಜೆಪಿ ಸೇರಲು ಸಿದ್ದರಾಮಯ್ಯ ಪ್ರೇರಣೆಯಾಗಿದ್ದರು ಎಂದಿರುವ ಸುಧಾಕರ್‌, ಅವರ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳ್ತಾರಾ? ಎಂದು ಸವಾಲು ಹಾಕಿದ್ದರು.

ಡಾ.ಕೆ.ಸುಧಾಕರ್ ಹೇಳಿರುವ ಮಾತುಗಳು ಸತ್ಯಕ್ಕೆ ದೂರವಾಗಿವೆ. ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ರೀತಿ ಮಾತುಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಇಷ್ಟು ದಿನಗಳ ಕಾಲ ಯಾಕೆ ಮಾತನಾಡದೇ ಸುಮ್ಮನಿದ್ದರು ಎಂದು ಎಂಟಿಬಿ ಪ್ರಶ್ನಿಸಿದ್ದರು.

ಇದು ಚುನಾವಣೆಯ ನಂತರದ ವಿದ್ಯಮಾನವಾದರೆ ಸಚಿವರಾಗಿದ್ದ ವೇಳೆಯ ಈ ಇಬ್ಬರ ನಡುವೆ ಸಂಬಂಧ ಹಳಿ ತಪ್ಪಿತ್ತು. 

ಸುಧಾಕರ್ ಸಂಘಟಿಸಿದ ‘ಚಿಕ್ಕಬಳ್ಳಾಪುರ ಉತ್ಸವ’ದತ್ತ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾಗರಾಜ್, ಮುಖ ಮಾಡಲಿಲ್ಲ. ಚಿಕ್ಕಬಳ್ಳಾಪುರ ಕಸಾಪ ಪದಾಧಿಕಾರಿಗಳು ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಚಿತ್ರಾವತಿ ಬಳಿಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನವರು ಸುವರ್ಣ ಮಹೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ಹೋದಾಗ ‘ಎಲ್ಲವನ್ನೂ ಸುಧಾಕರ್ ಹತ್ತಿರ ಮಾಡಿಸಿಕೊಳ್ಳಿ’ ಎಂದಿದ್ದರು ಎಂ.ಟಿ.ಬಿ.

ಬಿಜೆಪಿಯ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಅಲೋಕ್ ಅವರ ತಂದೆಯೂ ಆದ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್, ಇತ್ತೀಚೆಗೆ ಎಂ.ಟಿ.ಬಿ ನಾಗರಾಜ್ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದರು. ಈ ಭೇಟಿ ವೇಳೆ ಸಹ ಸುಧಾಕರ್ ವಿರುದ್ಧ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನುತ್ತವೆ ಮೂಲಗಳು.

ಆದರೆ ಬದಲಾದ ಸನ್ನಿವೇಶದಲ್ಲಿ ಎಂ.ಟಿ.ಬಿ ನಾಗರಾಜ್ ಜೊತೆ ಹಳಸಿದ ಸಂಬಂಧಕ್ಕೆ ಸುಧಾಕರ್ ತೇಪೆ ಹೆಚ್ಚಿದ್ದಾರೆ. ಮತ್ತೆ ಸ್ನೇಹಿತರಾಗಿದ್ದಾರೆ ಎನ್ನುತ್ತವೆ ಮೂಲಗಳು. 

ಎಂ.ಟಿ.ಬಿ ನಾಗರಾಜ್‌
ಎಂ.ಟಿ.ಬಿ ನಾಗರಾಜ್‌
ಎಂ.ಟಿ.ಬಿ ನಾಗರಾಜ್ ಮನವೊಲಿಸುವಲ್ಲಿ ಸುಧಾಕರ್ ಯಶಸ್ವಿ ಸೋಲಿನ ತರುವಾಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ನಾಯಕರು ಸುಧಾಕರ್ ಅವರನ್ನು ನೇರವಾಗಿ ಟೀಕಿಸಿದ್ದ ಎಂ.ಟಿ.ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT