ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೆಚ್ಚುತ್ತಲೇ ಇದೆ ಹೊಸ ಮತದಾರರ ಸಂಖ್ಯೆ

2014ರ ಲೋಕಸಭೆ ಚುನಾವಣೆಯಲ್ಲಿ 16.58 ಲಕ್ಷವಿದ್ದ ಮತದಾರರು; 2024ರ ಚುನಾವಣೆಗೆ 19.50 ಲಕ್ಷಕ್ಕೆ
ಡಿ.ಎಂ.ಕುರ್ಕೆ ಪ್ರಶಾಂತ್
Published 5 ಮಾರ್ಚ್ 2024, 5:01 IST
Last Updated 5 ಮಾರ್ಚ್ 2024, 5:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ 10 ವರ್ಷಗಳ ಹಿಂದೆ ಅಂದರೆ 2014ರ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ 16,58,039 ಮಂದಿ ಮತದಾರರು ಇದ್ದರು. ಆದರೆ ಈಗ ಸಿದ್ಧವಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ 19,50,443 ಮತದಾರರು ಇದ್ದಾರೆ. ಹೀಗೆ ಈ ಎರಡು ಚುನಾವಣೆಗಳ ನಡುವೆ ಲೋಕಸಭಾ ಕ್ಷೇತ್ರದಲ್ಲಿ 2,92,404 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 

ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಒಳಗೊಂಡಂತೆ, ನೆರೆಯ ಬೆಂಗಳೂರು ನಗರ ಜಿಲ್ಲೆಯ ಯಲಂಹಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ವಿಧಾನಸಭೆ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. 

ಅಗ್ರಸ್ಥಾನದಲ್ಲಿ ಯಲಹಂಕ: ಕಳೆದ ಎರಡು ಚುನಾವಣೆಗಳಲ್ಲಿಯೂ ಯಲಹಂಕ ವಿಧಾನಸಭಾ ಕ್ಷೇತ್ರ ಗರಿಷ್ಠ ಮತದಾರರನ್ನು ಹೊಂದಿದೆ. ಈ ಬಾರಿಯೂ ಈ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಮತದಾರರು ಇದ್ದಾರೆ. ಏರಿಕೆ ಆಗಿರುವ ಮತದಾರರ ಪ್ರಮಾಣವನ್ನು ವಿಧಾನಸಭೆ ಕ್ಷೇತ್ರಗಳವಾರು ಅವಲೋಕಿಸಿದಾಗ ಯಲಹಂಕ ಕ್ಷೇತ್ರದಲ್ಲಿ ಗಣನೀಯವಾಗಿ ಹೊಸ ಮತದಾರರ ಸೇರ್ಪಡೆಯಾಗಿರುವುದು ಕಂಡುಬರುತ್ತದೆ.

ಕ್ಷೇತ್ರವಾರು ಮತದಾರರ ಸಂಖ್ಯೆ: ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ 2014ರ ಲೋಕಸಭೆ ಚುನಾವಣೆ ವೇಳೆ 97,98 ಪುರುಷರು, 96,538 ಮಹಿಳೆಯರು ಸೇರಿ ಒಟ್ಟು 1,94,540 ಮತದಾರರು ಇದ್ದರು. 2019ರಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ ಎರಡು ಲಕ್ಷ ದಾಟಿದೆ. 1,01,006 ಪುರುಷರು, 1.01.559 ಮಹಿಳೆಯರು ಸೇರಿದಂತೆ 2,02,565 ಮತದಾರರು ಇದ್ದರು. 2024ರಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಈ ಕ್ಷೇತ್ರದ ಮತದಾರರ ಸಂಖ್ಯೆ 2,09,531 ಇದೆ. 

2014ರ ಚುನಾವಣೆಗೆ ಮತ್ತು 2024ಕ್ಕೆ ಹೋಲಿಸಿದರೆ ಈ ಕ್ಷೇತ್ರದಲ್ಲಿ 14,991 ಮಂದಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ.

ಬಾಗೇಪಲ್ಲಿ ತಾಲೂಕಿನಲ್ಲಿ 2014ರಲ್ಲಿ 91,644 ಪುರುಷರು, 90,669 ಮಹಿಳೆಯರು ಸೇರಿ 1,82,321 ಮತದಾರರು ಇದ್ದರು. 2019ರಲ್ಲಿ 97,871 ಪುರುಷರು ಹಾಗೂ 99,145 ಮಹಿಳೆಯರು ಸೇರಿ 1,97,016 ಮತದಾರರು ಹಾಗೂ ಈಗ 2,01,555 ಮತದಾರರು ಇದ್ದಾರೆ. ಈ ಬಾರಿ ಕ್ಷೇತ್ರದ ಮತದಾರರ ಸಂಖ್ಯೆ ಎರಡು ಲಕ್ಷ ದಾಟಿದೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ 19,234 ಮತದಾರರು ಹೆಚ್ಚಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 93,288 ಪುರುಷರು ಹಾಗೂ 90,940 ಮಹಿಳೆಯರು ಸೇರಿ 1,84,245 ರಷ್ಟಿದ್ದ ಮತದಾರರ ಪ್ರಮಾಣ ಪ್ರಸ್ತುತ 2014ರಲ್ಲಿ 99,202 ಪುರುಷರು ಹಾಗೂ 99,895 ಮಹಿಳೆಯರು ಸೇರಿ 1,99,097ಕ್ಕೆ ಏರಿಕೆ ಆಗಿತ್ತು. ಈಗ 2,08,428 ಮತದಾರರು ಇದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿಯೂ ಸಹ ಈ ಬಾರಿ ಮತದಾರರು ಎರಡು ಲಕ್ಷ ದಾಟಿದ್ದಾರೆ. 2014 ಮತ್ತು 2024ರ ನಡುವೆ 24,183 ಮತದಾರರು ಹೆಚ್ಚಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ 99,402 ಪುರುಷರು, 95,744 ಮಹಿಳೆಯರು ಸೇರಿದಂತೆ 1,95,159ರಷ್ಟಿದ್ದ ಮತದಾರರು 2019ರಲ್ಲಿ 1,07,729 ಪುರುಷರು, 1,04,708 ಮಹಿಳೆಯರು ಸೇರಿ 2,12,437ಕ್ಕೆ ಹೆಚ್ಚಳವಾಗಿತ್ತು. ಈಗ 2,35,886ಕ್ಕೆ ಏರಿಕೆ ಕಂಡಿದೆ. 2014ರ ಚುನಾವಣೆಗೆ ‌ಹೋಲಿಸಿದರೆ ಈ ಬಾರಿ 23,770 ಮತದಾರರು ಹೆಚ್ಚಳವಾಗಿದ್ದಾರೆ.

ನೆಲಮಂಗಲ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 97,790 ಪುರುಷರು, 94,973 ಮಹಿಳೆಯರು ಸೇರಿದಂತೆ 1,92,781 ಮತದಾರರು ಇದ್ದರು. 2019ರಲ್ಲಿ 1,00,872 ಪುರುಷರು ಹಾಗೂ 1,00,171 ಮಹಿಳೆಯರು ಸೇರಿ ಒಟ್ಟು 2,01,043 ಮತದಾರರು ಆಗಿದ್ದರು. 2023ರಲ್ಲಿ 2,18,929ಕ್ಕೆ ತಲುಪಿದೆ.

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 98,620 ಪುರುಷರು, 94,601 ಮಹಿಳೆಯರು ಸೇರಿದಂತೆ 1,93,234 ಮತದಾರರು ಇದ್ದರು. 2019ರಲ್ಲಿ 1,00,644 ಪುರುಷರು ಹಾಗೂ 99,472 ಮಹಿಳೆಯರು ಸೇರಿ 2,00,116 ಮತದಾರರು ಇದ್ದರೆ ಈ ಬಾರಿ 2,16,824 ತಲುಪಿದೆ.

ದೇವನಹಳ್ಳಿ ಕ್ಷೇತ್ರದಲ್ಲಿ ಕಳೆದ ಚುನಾವಣೆ ವೇಳೆ 96,964 ಪುರುಷರು, 94,324 ಮಹಿಳೆಯರು ಸೇರಿ ಒಟ್ಟು 1,91,300 ಮತದಾರರು ಇದ್ದರು. 2019ರಲ್ಲಿ 1,00,522 ಪುರುಷರು ಹಾಗೂ 98,784 ಮಹಿಳೆಯರು ಸೇರಿದಂತೆ 1,99,306 ಮತದಾರರು ಮತದಾನದ ಹಕ್ಕು ಹೊಂದಿದ್ದರು. 2024ರಲ್ಲಿ ಈ ಕ್ಷೇತ್ರದಲ್ಲಿಯೂ ಮತದಾರರು ಎರಡು ಲಕ್ಷ ದಾಟಿದ್ದಾರೆ.

ಹೀಗೆ ಚುನಾವಣೆಯಿಂದ ಚುನಾವಣೆಗೆ ಹೊಸ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳು ಈ ಹೊಸ ಮತದಾರರನ್ನು ಕೇಂದ್ರೀಕರಿಸಿ ಮತ ಬೇಟೆ ನಡೆಸುತ್ತವೆ. 

ಯಲಹಂಕದಲ್ಲಿಯೇ ಅತಿ ಹೆಚ್ಚು
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ 167 825 ಪುರುಷರು 156598 ಮಹಿಳೆಯರು ಸೇರಿದಂತೆ 324459 ಮತದಾರರು ಇದ್ದರು. 2014ರಲ್ಲಿ ಈ ಪ್ರಮಾಣ 194641 ಪುರುಷರು 184187 ಮಹಿಳೆಯರು ಸೇರಿದಂತೆ ಒಟ್ಟು 378828ಕ್ಕೆ ಏರಿಕೆ ಆಗಿತ್ತು. 2024ರಲ್ಲಿ 445861 ಮತದಾರರು ಇದ್ದಾರೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ 121402 ಮತದಾರರು ಹೆಚ್ಚಳವಾಗಿದ್ದಾರೆ. ಒಟ್ಟು ಹೆಚ್ಚಳದಲ್ಲಿ ಸಿಂಹ ಪಾಲು ಯಲಹಂಕ ಕ್ಷೇತ್ರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT