ಗುರುವಾರ , ಜೂನ್ 24, 2021
23 °C
ಜಿಲ್ಲೆಯಲ್ಲಿ ಸುಮಾರು 12 ಸಾವಿರ ಕುಟುಂಬಗಳ ಬದುಕಿಗೆ ಆಧಾರ

ಕುಸಿದ ಬೆಲೆ: ಹೂ ಬೆಳೆಗಾರರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಪ್ರಮುಖವಾಗಿ ಹೂ ಬೆಳೆಯುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವೂ ಪ್ರಮುಖವಾಗಿ ಕಾಣುತ್ತದೆ. ಇಲ್ಲಿನ ಬಹುತೇಕ ರೈತರು ಉಪಕಸುಬಾಗಿ, ಆರ್ಥಿಕ ಉನ್ನತಿಗಾಗಿ ಹೂ ಬೇಸಾಯ ಅವಲಂಬಿಸಿದ್ದಾರೆ. ಕೆಲವರು ರೈತರು ಹೂವನ್ನೇ ಪ್ರಮುಖವಾಗಿ ಬೆಳೆಯುವರು.

10, 20 ಗುಂಟೆ ಇಲ್ಲವೆ ಎಕರೆಗಳ ಲೆಕ್ಕದಲ್ಲಿ ಹೂ ಬೆಳೆದು ತಮ್ಮ ಬದುಕು ಸಾಗಿಸುತ್ತಿದ್ದಾರೆ. ಸೇವಂತಿಗೆ, ಮೇರಿಗೋಲ್ಡ್, ಸುಗಂಧರಾಜ, ಕನಕಾಂಬರ, ಗುಲಾಬಿ, ಚೆಂಡು ಹೂ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಈಗ ಕೋವಿಡ್ ಬಿಸಿ ತೀವ್ರವಾದಂತೆ ಬೆಲೆ ದಿಢೀರ್ ಕುಸಿದಿದೆ. ಬೆಳೆಗಾರರು ಕಂಗಾಲಾಗಿದ್ದಾರೆ. 

ಏಪ್ರಿಲ್, ಮೇ ನಲ್ಲಿ ಪ್ರಮುಖವಾಗಿ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳು ನಡೆಯುತ್ತವೆ. ಈ ವೇಳೆ ಹೂ ಗೆ ಬೇಡಿಕೆ ಹೆಚ್ಚು. ಈಗ ಶುಭ ಸಮಾರಂಭಗಳ ಮೇಲೆ ಕಠಿಣ ನಿರ್ಬಂಧಗಳಿವೆ.
ಇದು ಪ್ರಮುಖವಾಗಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.

‘ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಬೆಳೆಗಾರರಿಗೆ ತೀವ್ರ ಸಮಸ್ಯೆ ಆಯಿತು. ವಿದೇಶಗಳಿಗೆ ಗುಲಾಬಿ ರಫ್ತು ಆಗಿರಲಿಲ್ಲ. ಒಂದು ಸಾವಿರ ಹೆಕ್ಟೇರ್‌ನಲ್ಲಿ ಗುಲಾಬಿ, 500 ಹೆಕ್ಟೇರ್‌ನಲ್ಲಿ ಸೇವಂತಿ, 400 ಎಕರೆಯಲ್ಲಿ ಮೇರಿಗೋಲ್ಡ್ ಇದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ತಿಳಿಸುವರು.

‘ಕಳೆದ ವರ್ಷ ಲಾಕ್‌ಡೌನ್‌ನಿಂದ ಇಟ್ಟಿದ್ದ ಬೆಳೆಯನ್ನು ಯಾರೂ ಕೇಳದ ಪರಿಸ್ಥಿತಿ ಎದುರಾಗಿತ್ತು. ಈ ವರ್ಷವೂ ಹೆಚ್ಚಿನ
ಲಾಭವೇನೂ ಆಗಿರಲಿಲ್ಲ. ಈಗ ಕೊರೊನಾ ಕಾರಣದಿಂದ ಮತ್ತೆ ಕಷ್ಟಕ್ಕೆ ಸಿಲುಕಿದ್ದೇವೆ’ ಎನ್ನುವರು ಚಿಕ್ಕಬಳ್ಳಾಪುರ ರೈತ ನಾರಾಯಣಸ್ವಾಮಿ.

ಬೆಲೆ ಇಲ್ಲದ ಕಾರಣ ಹೂಗಳನ್ನು ರಸ್ತೆ ಬದಿ, ಮಾರುಕಟ್ಟೆಯಲ್ಲಿಯೇ ರೈತರು ಸುರಿಯುತ್ತಿದ್ದಾರೆ. ಶೀಥಲೀಕರಣ ಘಟಕದಲ್ಲಿ ಗುಲಾಬಿಯನ್ನು ಕೆಲವು ಕಾಲ ರಕ್ಷಿಸಿಡಬಹುದು. ಆದರೆ ಎಲ್ಲ ಹೂಗಳನ್ನು ಹೀಗೆ ರಕ್ಷಿಸಿಡಲು ಸಾಧ್ಯವಿಲ್ಲ. ಹೀಗೆ ಕೊರೊನಾ ಎರಡನೇ ಅಲೆ ಹೂ ಬೆಳೆಗಾರರನ್ನು ಕಂಗಾಲಾಗಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು