ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮೊಯಿಲಿ, ರೆಡ್ಡಿ ಮುನಿಸು: ಪ್ರಚಾರದಿಂದ ದೂರ

Published 3 ಏಪ್ರಿಲ್ 2024, 23:37 IST
Last Updated 3 ಏಪ್ರಿಲ್ 2024, 23:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಎರಡು ಬಾರಿ ಚಿಕ್ಕಬಳ್ಳಾಪುರ ಸಂಸದರಾಗಿದ್ದ ಎಂ.ವೀರಪ್ಪ ಮೊಯಿಲಿ ಮತ್ತು ಕಾಂಗ್ರೆಸ್‌ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. 

ನಗರದಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ರೋಡ್ ಷೊ ಮತ್ತು ನಾಮಪತ್ರ ಸಲ್ಲಿಸುವ ವೇಳೆ ಈ ಇಬ್ಬರೂ ನಾಯಕರ ಗೈರು ಎದ್ದು ಕಾಣುತಿತ್ತು. ರೋಡ್ ಷೊ ವಾಹನದಲ್ಲಿ
ಇವರಿಬ್ಬರ ಚಿತ್ರಗಳು ರಾರಾಜಿಸುತ್ತಿದ್ದವು. ಆದರೆ, ಈ ನಾಯಕರು ಮಾತ್ರ ಸುಳಿಯಲಿಲ್ಲ.   

ಟಿಕೆಟ್ ಘೋಷಣೆಯಾದ ತಕ್ಷಣ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮತ್ತು ಅವರ ತಂದೆ ಎಂ.ಆರ್.ಸೀತಾರಾಂ ಸೇರಿ ಇಬ್ಬರೂ ನಾಯಕರನ್ನು ಭೇಟಿಯಾಗಿ ಸಹಕಾರ ಕೋರಿದ್ದರು. ಆದರೂ ಇಬ್ಬರೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿಲ್ಲ.

ರಕ್ಷಾ ರಾಮಯ್ಯ ಇತ್ತೀಚೆಗೆ ಬಾಗೇಪಲ್ಲಿಯ ಗಡದಿಂ ದೇವಾಲಯದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು. ಆಗಲೂ ಮೊಯಿಲಿ ಮತ್ತು ರೆಡ್ಡಿ ಅತ್ತ ಸುಳಿಯಲಿಲ್ಲ.

2009ರ ಲೋಕಸಭಾ ಚುನಾವಣೆ ಸಮೀಪ ಸಂಸದ ಆರ್‌.ಎಲ್.ಜಾಲಪ್ಪ ರಾಜಕೀಯ ನಿವೃತ್ತಿ ಪಡೆದರು. ಎಂ.ವೀರಪ್ಪ ಮೊಯಿಲಿ ಆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2014ರಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರು.

ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿದ್ದ ಮೊಯಿಲಿ ಅವರಿಗೆ ರಾಜಕೀಯ ಪುನರ್ಜನ್ಮ ಮತ್ತು ಪ್ರಭಾವಿ ಸ್ಥಾನ ನೀಡಿದ್ದು ಚಿಕ್ಕಬಳ್ಳಾಪುರ ಕ್ಷೇತ್ರ. 2019ರ ಚುನಾವಣೆಯಲ್ಲಿ ಸೋಲು ಕಂಡ ಅವರು ಈ ಬಾರಿ ಟಿಕೆಟ್‌ಗೆಗಾಗಿ ತೀವ್ರವಾಗಿ ಪ್ರಯತ್ನಿಸಿ ವಿಫಲರಾದರು. 

ಟಿಕೆಟ್‌ ತಮಗೆ ದೊರೆಯುವುದಿಲ್ಲ ಎನ್ನುವುದು ಖಚಿತವಾಗುತ್ತಲೇ ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರವಾದರು. ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದ ನಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಾವ ವಿಧಾನಸಭಾ ಕ್ಷೇತ್ರಕ್ಕೂ ಕಾಲಿಟ್ಟಿಲ್ಲ. 

ಶಿವಶಂಕರ ರೆಡ್ಡಿ ಅವರದ್ದೂ ಇದೇ ಕತೆ. ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲರಾದ ಬೇಸರ ಒಂದೆಡೆ ಇದ್ದರೆ ತಮ್ಮ ರಾಜಕೀಯ ವಿರೋಧಿ ಪಕ್ಷೇತರ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರ ಪ್ರಾಬಲ್ಯ ಕಾಂಗ್ರೆಸ್‌ನಲ್ಲಿ ಹೆಚ್ಚಿದೆ. ಗೌಡರು ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದಾರೆ.  

1999ರ ವಿಧಾನಸಭೆ ಚುನಾವಣೆಯಿಂದ 2018ರ ಚುನಾವಣೆವರೆಗೆ ಸತತ ಐದು ಬಾರಿ ಶಿವಶಂಕರ ರೆಡ್ಡಿ ಗೌರಿಬಿದನೂರು ಕ್ಷೇತ್ರದ ಶಾಸಕರಾಗಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರಿನಲ್ಲಿ ಪುಟ್ಟಸ್ವಾಮಿಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುವುದು ಅವರ
ಮುನಿಸಿಗೆ ಕಾರಣ.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಬೇಕು. ಕ್ಷೇತ್ರದಲ್ಲಿನ ಪಕ್ಷದ ಬೆಳವಣಿಗೆಗಳ ಬಗ್ಗೆ ನನ್ನ ವಿಚಾರಗಳನ್ನೂ ಪರಿಗಣಿಸಬೇಕು’ ಎಂದು ಶಿವಶಂಕರ ರೆಡ್ಡಿ ಪಟ್ಟು ಹಿಡಿದ್ದಾರೆ. ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ವರಿಷ್ಠರಿಂದ ರೆಡ್ಡಿ ಅವರ ಬೇಡಿಕೆಗೆ ಸ್ಪಂದನೆ ದೊರೆಯುತ್ತಿಲ್ಲ.

ಟಿಕೆಟ್ ಭರವಸೆ ದೊರೆಯದ ಹೊರತು ಲೋಕಸಭೆ ಚುನಾವಣೆಯಲ್ಲಿ ‘ಕೈ’ ಪರ ಕೆಲಸ ಮಾಡುವುದಿಲ್ಲ ಎಂದು ಆಪ್ತರಿಗೆ ತಿಳಿಸಿದ್ದಾರೆ. ಹೀಗೆ ವೀರಪ್ಪ ಮೊಯಿಲಿ ಮತ್ತು ಶಿವಶಂಕರ ರೆಡ್ಡಿ ಮುನಿಸು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ.

ಶಿವಶಂಕರ ರೆಡ್ಡಿ
ಶಿವಶಂಕರ ರೆಡ್ಡಿ

ಸುರ್ಜೇವಾಲ ಸಂಧಾನ

ಚಿಕ್ಕಬಳ್ಳಾಪುರ: ಮಾಜಿ ಸಚಿವ ಎನ್.ಎಚ್‌.ಶಿವಶಂಕರ ರೆಡ್ಡಿ ಅವರ ಮನವೊಲಿಕೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಾಗಿದ್ದಾರೆ. ಬುಧವಾರ ರಾತ್ರಿ ಬೆಂಗಳೂರಿಗೆ ಶಿವಶಂಕರ ರೆಡ್ಡಿ ಅವರನ್ನು ಸುರ್ಜೇವಾಲ ಕರೆಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಿವಶಂಕರ ರೆಡ್ಡಿ ಅವರ ಮನವೊಲಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT