ಶುಕ್ರವಾರ, ಮೇ 29, 2020
27 °C
ಜಿಲ್ಲೆಯಲ್ಲಿ ಸೋಂಕಿತರು 30ಕ್ಕೆ ಏರಿಕೆ: ಮುಂಬೈನಿಂದ ವಾಪಾಸಾದವರಿಂದ ಜಿಲ್ಲೆಯಲ್ಲಿ ಕೋವಿಡ್‌ ಉಲ್ಭಣಿಸುವ ಸಾಧ್ಯತೆ ದಟ್ಟ

ಚಿಕ್ಕಬಳ್ಳಾಪುರ | ಜಿಲ್ಲೆಗೆ ಕಂಟಕವಾಯ್ತು ‘ಮಹಾರಾಷ್ಟ್ರ’ ಸಂಪರ್ಕ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಕಾರಣಕ್ಕೆ ಮುಂಬೈನಲ್ಲಿ ಸಿಲುಕಿ, ಇತ್ತೀಚೆಗಷ್ಟೇ ಜಿಲ್ಲೆಗೆ 265 ಜನರು ವಾಪಾಸಾಗಿರುವುದು ಜಿಲ್ಲೆಯಲ್ಲಿ ಕೋವಿಡ್‌ 19 ಸ್ಫೋಟದ ಆತಂಕ ತಂದೊಡ್ಡಿದೆ. ಮಹಾರಾಷ್ಟ್ರದಿಂದ ವಾಪಾಸಾದವರ ಆರೋಗ್ಯ ಸ್ಥಿತಿ ಅರಿತು ಆರೋಗ್ಯ ಇಲಾಖೆ ಸಿಬ್ಬಂದಿಯೇ ತಲ್ಲಣಗೊಂಡಿದ್ದಾರೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಾಸಾಗಿರುವವರ ಸುಮಾರು 265 ಜನರ ಪೈಕಿ 130 ಜನರನ್ನು ಜಿಲ್ಲಾಡಳಿತ ಗೌರಿಬಿದನೂರು ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಇನ್ನುಳಿದವರು ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಕಸ್ತೂರಿ ಬಾ ಶಾಲೆ ಸೇರಿದಂತೆ ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮುಂಬೈನಿಂದ ವಾಪಾಸಾದವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‌ ಧೃಢಪಟ್ಟಿದೆ. 67 ಜನರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. 194 ಜನರ ಮಾದರಿಗಳ ಫಲಿತಾಂಶಕ್ಕೆ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.

ಜಿಲ್ಲೆಯಲ್ಲಿ ಆರಂಭದಲ್ಲಿ ಹಜ್ ಯಾತ್ರಿಕರಿಂದ ಗೌರಿಬಿದನೂರು ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಸರಣಿಯಲ್ಲಿ 12 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಅದರ ಬೆನ್ನಲ್ಲೇ ಸರ್ಕಾರ ಆ ತಾಲ್ಲೂಕಿಗೆ ವಿಶೇಷ ಅಧಿಕಾರಿ ನೇಮಕ ಮಾಡಿತ್ತು. ಜಿಲ್ಲಾಡಳಿತ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿ ತಹಬದಿಗೆ ತಂದಿತ್ತು.

ಗೌರಿಬಿದನೂರು ಕೋವಿಡ್‌ ಸೋಂಕಿನಿಂದ ಮುಕ್ತವಾಯಿತು ಎಂದು ಆ ತಾಲ್ಲೂಕಿನ ಜನರು ನಿಟ್ಟುಸಿರು ಬಿಡುವಾಗಲೇ, ಮಹಾರಾಷ್ಟ್ರದ ವಾಪಾಸಾದವರ ಪೈಕಿ ನಗರಗೆರೆ ಬಳಿಯ ತಾಂಡಾಗಳಿಗೆ ಸೇರಿದ ನಾಲ್ಕು ಜನರಲ್ಲಿ ಒಮ್ಮೆಲೇ ಕೋವಿಡ್ ಪತ್ತೆಯಾಗಿರುವುದು ಸ್ಥಳೀಯರನ್ನು ತತ್ತರಿಸುವಂತೆ ಮಾಡಿದೆ.

30ಕ್ಕೆ ಏರಿದ ಸೋಂಕಿತರ ಸಂಖ್ಯೆ
ಇನ್ನೊಂದೆಡೆ, ಗುರುವಾರ ಚಿಂತಾಮಣಿಯ 10ನೇ ವಾರ್ಡ್‌ನ 71 ವರ್ಷದ ಸೋಂಕಿತ ವ್ಯಕ್ತಿಯಿಂದ ಅವರ ಮಗಳು ಮತ್ತು ಅಳಿಯನಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿದ್ದು, ವಾಣಿಜ್ಯ ನಗರಿ ನಾಗರಿಕರನ್ನು ನಿದ್ದೆಗೆಡಿಸಿದೆ.

ಮೇ 10 ರಂದು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಅವರ 22ರ ಹರೆಯದ ಮೊಮ್ಮಗನಿಗೆ, ಮೇ 12 ರಂದು 45 ವರ್ಷದ ಮಗನಿಗೆ ಕೋವಿಡ್ ಅಂಟಿರುವುದು ಪತ್ತೆಯಾಗಿತ್ತು.

71 ವರ್ಷದ ಸೋಂಕಿತ ವ್ಯಕ್ತಿಯ ಪತ್ನಿಯು ಮೇ 4 ರಂದು ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿನ ವಿಜಯನಗರದಲ್ಲಿರುವ ಅವರ ಪುತ್ರಿ ಪತಿ ಸಮೇತ ಚಿಂತಾಮಣಿಗೆ ಬಂದಿದ್ದರು. ಲಾಕ್‌ಡೌನ್‌ ಮತ್ತು ಶ್ರಾದ್ಧಕಾರ್ಯಗಳಿಗಾಗಿ ತಂದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಆ ದಂಪತಿಗೂ ಕೋವಿಡ್ ತಗುಲಿರುವುದು ಸ್ಥಳೀಯ ಜನರನ್ನು ಆತಂಕದ ಮಡುವಿಗೆ ದೂಡಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 16, ಚಿಕ್ಕಬಳ್ಳಾಪುರದ ಒಂಬತ್ತು ಮತ್ತು ಚಿಂತಾಮಣಿಯ ಐದು ಜನರು ಸೇರಿದಂತೆ 30 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ.

ಈ ಪೈಕಿ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ 18 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಆರು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗೌರಿಬಿದನೂರಿನ 28 ಜನರಿಗೆ ಕೋವಿಡ್?
ಮುಂಬೈನಲ್ಲಿ ಬಾರ್‌, ಕ್ಲಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಿ, ಲಾಕ್‌ಡೌನ್‌ ನಡುವೆ ಸುಮಾರು ಒಂದೂವರೆ ತಿಂಗಳಿಂದ ಅಧಿಕ ಕಾಲ ಸಿಲುಕಿಕೊಂಡು ಹರಸಾಹಸ ಪಟ್ಟು ಊರಿಗೆ ವಾಪಾಸಾದವರ ಪೈಕಿ ಸಾಕಷ್ಟು ಜನರಿಗೆ ಕೋವಿಡ್‌ ತಗುಲಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈನಿಂದ ವಾಪಾಸಾದವರ ಪೈಕಿ ಗುರುವಾರದ ಸಂಜೆ ವರೆಗೆ 194 ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ಫಲಿತಾಂಶ ಬಾಕಿ ಇತ್ತು. ಇದರಲ್ಲಿ ಗೌರಿಬಿದನೂರು ತಾಲ್ಲೂಕಿನ 28 ಜನರಲ್ಲಿ ಕೋವಿಡ್‌ ಇದೆ ಎನ್ನುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ರೋಗಿಗಳ ಸಂಖ್ಯೆ ಸಿಗದ ಹೊರತು ಈ ಮಾಹಿತಿ ಅಧಿಕೃತವಾಗಿ ಪ್ರಕಟವಾಗುವುದಿಲ್ಲ. ಶುಕ್ರವಾರ ಈ ಮಾಹಿತಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

*
ಮುಂಬೈನಿಂದ ವಾಪಾಸಾದವರಲ್ಲಿ ನಾಲ್ಕು ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ‌67 ಜನರ ವರದಿ ನೆಗೆಟಿವ್ ಇದೆ. 194 ಮಾದರಿಗಳ ಫಲಿತಾಂಶ ಬರಬೇಕಿದೆ.
-ಡಾ.ಬಿ.ಎಂ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ 

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು