ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಕ್ಷೇತ್ರದಲ್ಲಿ ಮನೆ ಮಾಡಿ, ಪಕ್ಷ ಸಂಘಟಿಸುವೆ: ಎನ್.ರಾಧಾಕೃಷ್ಣ

ಪತ್ರಿಕಾಗೋಷ್ಠಿ ಮೂಲಕ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ
Last Updated 14 ಡಿಸೆಂಬರ್ 2019, 10:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಉಪ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾದ ಕಾರಣ ಪಕ್ಷದ ಕಾರ್ಯಕರ್ತರು, ಮತದಾರರನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಸೋಲಾಯಿತು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿಯೇ ಮನೆ ಮಾಡಿ, ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕ್ಷೇತ್ರ ಬಿಡುವುದಿಲ್ಲ. ಚಿಕ್ಕಬಳ್ಳಾಪುರದಲ್ಲಿಯೇ ಮನೆ ಮಾಡಿ, ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ, ನಮಗೆ ಕ್ಷೇತ್ರ ಅಭಿವೃದ್ಧಿ ಮುಖ್ಯ, ಹೀಗಾಗಿ ಶಾಸಕ ಸುಧಾಕರ್ ಅವರ ಜತೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕೈ ಜೋಡಿಸುತ್ತೇವೆ. ಜನ ವಿರೋಧಿ ಧೋರಣೆ ಅನುಸರಿಸಿದರೆ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಉಪ ಚುನಾವಣೆಯಲ್ಲಿ ಜಿಲ್ಲಾಡಳಿತ ಏಕಪಕ್ಷೀಯವಾಗಿ ಕೆಲಸ ಮಾಡಿದೆ. ಪರಿಣಾಮ, ಸಾಕಷ್ಟು ಪ್ರಮಾಣದಲ್ಲಿ ಅಕ್ರಮಗಳು ನಡೆದು ನಮಗೆ ಸೋಲಾಯಿತು. ಉಪ ಚುನಾವಣೆಯಲ್ಲಿ ಆಡಳಿತರೂಢ ಪಕ್ಷಗಳು ಗೆಲುವು ಸಾಧಿಸುವುದು ಸಹಜ. ಮುಂದಿನ ದಿನಗಳಲ್ಲಿ ಉಪ ಚುನಾವಣೆ ಸೋಲಿನ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ ನಡೆಸಲಾಗುತ್ತದೆ’ ಎಂದರು.

‘ನಾವು ಸೋತ ಮಾತ್ರಕ್ಕೆ ಪಲಾಯನ ಮಾಡದೇ ಕ್ಷೇತ್ರದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುತ್ತೇವೆ. ಜೆಡಿಎಸ್‌ಗೆ ಮತ ನೀಡಿದ ಮತದಾರರಿಗೆ ಹಾಗೂ ಹಗಲಿರುಳು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಮುಖಂಡರಾದ ಭಾಸ್ಕರ್, ಅವುಲಕೊಂಡರಾಯಪ್ಪ, ಮಟಮಪ್ಪ, ರಾಜಕುಮಾರ್, ಬಾಲಕುಂಟಹಳ್ಳಿ ಮುನಿಯಪ್ಪ, ಶಿವಕುಮಾರ್, ಅಪ್ಪಿ, ಸಾದಿಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT