ಗುರುವಾರ , ನವೆಂಬರ್ 26, 2020
19 °C
ಇ –ಸಂಜೀವಿನಿ ಟೆಲಿ ಮೆಡಿಸಿನ್ ಆ್ಯಪ್‌

ಮನೆಯಲ್ಲಿ ಕುಳಿತಲ್ಲೇ ವೈದ್ಯಕೀಯ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಪ್ರತಿಯೊಬ್ಬರೂ ಇ - ಸಂಜೀವಿನಿ ಒಪಿಡಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಮನೆಯಲ್ಲಿ ಕುಳಿತು ತಮ್ಮ ಕಾಯಿಲೆಗೆ ನುರಿತ ವೈದ್ಯರಿಂದ ಸಲಹೆ ಸೂಚನೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಹೇಳಿದರು.

ನಗರದ ತಾಲ್ಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಇ –ಸಂಜೀವಿನಿ ಟೆಲಿ ಮೆಡಿಸಿನ್ ಸೇವೆಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರಾಜ್ಯದಾದ್ಯಂತ ಸುಮಾರು 700ಕ್ಕೂ ಹೆಚ್ಚು ವೈದ್ಯರು ಟೆಲಿ ಮೆಡಿಸಿನ್ ಸೇವೆ ನೀಡುತ್ತಿದ್ದಾರೆ.

ಟೆಲಿ ಮೆಡಿಸಿನ್ ಸೇವೆಯಿಂದ ವಿನಾಕಾರಣ ಜನರು ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಫೋನ್‌ಗಳಲ್ಲಿ ಇ –ಸಂಜೀವಿನಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಮನೆಯಲ್ಲಿಯೇ ಕುಳಿತು ಆರೋಗ್ಯ ಸುಧಾರಿಸಿಕೊಳ್ಳಬಹುದು. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇ –ಸಂಜೀವಿನಿ ಮೂಲಕ ಟೆಲಿ ಮೆಡಿಸಿನ್ ಸೇವೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಮೊಬೈಲ್ ಮೂಲಕ ಚಿಕಿತ್ಸೆ: ಮೊಬೈಲ್‌ ಪ್ಲೇ ಸ್ಟೋರ್ ಮೂಲಕ ಇ–ಸಂಜೀವಿನಿ ಆ್ಯಪ್‌ ಡೌನ್ ಲೋಡ್ ಮಾಡಿಕೊಂಡಾಗ ಇ –ಸಂಜೀವಿನಿ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಮೊಬೈಲ್ ಸಂಖ್ಯೆ ನೀಡಿ ಒಟಿಪಿ ಮೂಲಕ ನೋಂದಣಿ ಪಡೆದುಕೊಳ್ಳಬೇಕು. ಬಳಿಕ ರೋಗಿಯ ಪ್ರಾಥಮಿಕ ಮಾಹಿತಿ ನಮೂದಿಸಿ ಕಾಯಿಲೆ ವಿಧ ಆಯ್ಕೆ ಮಾಡಿದಾಗ ರೋಗಿ ಐಡಿ ಹಾಗೂ ಟೋಕನ್ ಸಂಖ್ಯೆ ಸಿಗಲಿದೆ. ಇದನ್ನು ಬಳಸಿ ಲಾಗ್ ಇನ್ ಆದಲ್ಲಿ ಆ್ಯಪ್‌ ವಿಡಿಯೊ ಕಾಲ್ ಮುಖಾಂತರ ವೈದ್ಯರನ್ನು ಸಂಪರ್ಕಿಸಬಹುದು. ಪ್ರತಿನಿತ್ಯ ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ಸೇವೆ ಲಭ್ಯವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.