ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಮೇಧಾವಿಯ ಸ್ಮರಣೆ

ಸರ್‌.ಎಂ.ವಿಶ್ವೇಶ್ವರಯ್ಯ ಅವರ 160ನೇ ಜನ್ಮ ದಿನಾಚರಣೆ, ಮುದ್ದೇನಹಳ್ಳಿಯಲ್ಲಿರುವ ಸಮಾಧಿಗೆ ಗೌರವ ಸಮರ್ಪಣೆ
Last Updated 15 ಸೆಪ್ಟೆಂಬರ್ 2020, 15:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ ಮೇಧಾವಿ ಸರ್‌.ಎಂ.ವಿಶ್ವೇಶ್ವರಯ್ಯ ಅವರ 160ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಂಗಳವಾರ ದಕ್ಷ ಆಡಳಿತಗಾರ ಸ್ಮರಿಸುವ ಕಾರ್ಯಕ್ರಮಗಳು ನಡೆದವು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಸಮಾಧಿಗೆ ಅನೇಕ ಗಣ್ಯರು, ಮುಖಂಡರು, ವಿದ್ಯಾರ್ಥಿಗಳು, ನಾಗರಿಕರು ಗೌರವ ಸಲ್ಲಿಸಿದರು. ಪ್ರತಿ ವರ್ಷ ನಗರದ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾ ಸಂಸ್ಥೆ ವತಿಯಿಂದ ನಗರದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ಮೆರವಣಿಗೆ ನಡೆಸಲಿಲ್ಲ.

ತಾಲ್ಲೂಕಿನ ಅಂಗಟ್ಟ ಬಳಿ ಮಂಗಳವಾರ ನಡೆದ ‘ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಸೂಪರ್‌ ಟ್ರೈನರ್ಸ್‌ ಸಂಸ್ಥೆ’ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸೇರಿದಂತೆ ಅನೇಕ ಗಣ್ಯರು ವಿಶ್ವೇಶ್ವರಯ್ಯ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಜಿಲ್ಲೆಯಲ್ಲಿ ಮಂಗಳವಾರ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆಗೆ ಚಾಲನೆ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಮತ್ತು ಪಕ್ಷದ ಪದಾಧಿಕಾರಿಗಳು ಸಹ ವಿಶ್ವೇಶ್ವರಯ್ಯ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಮರ್ಪಿಸಿದರು.

ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಭಾವಚಿತ್ರವುಳ್ಳ ಮೆರವಣಿಗೆ ವಾಹನದೊಂದಿಗೆ ಬಿ.ಬಿ.ರಸ್ತೆ ಮೂಲಕ ಡಿಡಿಪಿಐ ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ವಿದ್ಯಾರ್ಥಿಗಳು ವಾಹನಗಳಲ್ಲಿ ಮುದ್ದೇನಹಳ್ಳಿಗೆ ತೆರಳಿ, ಅಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ವತಿಯಿಂದ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ಶಿಕ್ಷಕರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT