ಭಾನುವಾರ, ಫೆಬ್ರವರಿ 23, 2020
19 °C
ಪೂರ್ಣಪ್ರಜ್ಞಾ ಶಾಲಾ ವಾರ್ಷಿಕೋತ್ಸವದಲ್ಲಿ ವಿಜ್ಞಾನಿ ಜೆ.ಸಿ.ಗುರಪ್ಪ ಸಲಹೆ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಪ್ರೇರೇಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸಂಶೋಧನೆಯತ್ತ ಮುಂದಿನ ಪೀಳಿಗೆಯನ್ನು ಕರೆದೊಯ್ಯಲು ಭದ್ರಬುನಾದಿ ಹಾಕುವ ನಿಟ್ಟಿನಲ್ಲಿ ಮಕ್ಕಳಲ್ಲಿ ವ್ಶೆಜ್ಞಾನಿಕ ಮನೋಭಾವನೆ ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ’ ಎಂದು ಪೀಣ್ಯದ ಸತೀಶ್ ಧವನ್‌ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಆ್ಯಂಡ್‌ ಕಮಾಂಡ್‌ ನೆಟ್‌ವರ್ಕ್‌ ಕೇಂದ್ರದ (ಐಎಸ್‌ಟಿಆರ್‌ಎಸಿ) ಹಾರ್ಡ್‌ವೇರ್‌ ವ್ಯವಸ್ಥೆ ನಿರ್ವಹಣಾ ವ್ಯವಸ್ಥಾಪಕ, ವಿಜ್ಞಾನಿ ಜೆ.ಸಿ.ಗುರಪ್ಪ ಹೇಳಿದರು.

ನಗರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಕೂಡ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿದೆ. ವಿದ್ಯಾರ್ಥಿಗಳು ಶಿಸ್ತನ್ನು ರೂಢಿಸಿಕೊಂಡಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ. ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ, ಹಣ ಕೂಡಿಸುವ ಬದಲು ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡುವ ಮೂಲಕ ತಮ್ಮ ದೇಶದ ಆಸ್ತಿಯನ್ನಾಗಿಸಬೇಕು’ ಎಂದು ತಿಳಿಸಿದರು.

‘ಪೋಷಕರು ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ನಡವಳಿಕೆಗಳ ಮೇಲೆ ನಿರಂತರ ನಿಗಾ ವಹಿಸುವ ಜವಾಬ್ದಾರಿ ನಿರ್ವಹಿಸಬೇಕು. ಭಾಷೆಯು ಮುಂದಿನ ದಿನಗಳಲ್ಲಿ ತೊಡಕಾಗುವುದಿಲ್ಲ. ಇತ್ತೀಚೆಗೆ ಗ್ರಾಮೀಣ ಭಾಗದ ಮಕ್ಕಳು ಕೂಡ ಇಂಗ್ಲೀಷ್ ಭಾಷೆಯಲ್ಲಿ ಪ್ರಾವಿಣ್ಯತೆ ಗಳಿಸುತ್ತಿದ್ದಾರೆ’ ಎಂದರು.

ಹಿರಿಯ ನಟ ಮನ್‌ದೀಪ್‌ ರೈ ಮಾತನಾಡಿ, ‘ಹಿರಿಯ ನಿರ್ದೇಶಕ ಶಾಂತಾರಾಮ್ ಅವರಂತಹ ಮೇಧಾವಿಗಳನ್ನು ಚಿತ್ರರಂಗಕ್ಕೆ ಕೊಡಗೆಯಾಗಿ ನೀಡಿದ ಚಿಕ್ಕಬಳ್ಳಾಪುರ ಎಲ್ಲಾ ಕ್ಷೇತ್ರಗಳಲ್ಲಿಯೂ ದೇಶದ ಗಮನ ಸೆಳೆದಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ಮಕ್ಕಳನ್ನು ತಿದ್ದಿ ತೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಜವಾಬ್ದಾರಿ ಇದೆ. ಸಿನಿಮಾ ರಂಗವು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಬೇಕೇ ವಿನಾ ಹಾಳು ಮಾಡಬಾರದು. ಸದಭಿರುಚಿಯ ಸಿನಿಮಾಗಳ ನಿರ್ಮಾಣ ಹೆಚ್ಚಬೇಕಿದೆ’ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಹನಿಯೂರು ಚಂದ್ರೇಗೌಡ ಮಾತನಾಡಿ, ‘ಗ್ರಾಮೀಣ ಭಾಗದ ಜನತೆಯ ಸೊಗಡು ಜಾನಪದದಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಅದನ್ನು ಜೋಪಾನವಾಗಿ ಉಳಿಸಿ ಬೆಳೆಸಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ’ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ನಗರಸಭೆಯ ನೌಕರ ಹರೀಶ್, ನಿವೃತ್ತ ಯೋಧ ನಾಗರಾಜ್, ಭಾರತ ಸೇವಾದಳದ ಅಧಿಕಾರಿ ಪ್ರಕಾಶ್, ಇತಿಹಾಸ ತಜ್ಞ ಷಫಿ ಅಹ್ಮದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನಸೂರೆಗೊಂಡವು.

ಸಂಸ್ಥೆಯ ಅಧ್ಯಕ್ಷೆ ಶೈಲಜಾ ವೆಂಕಟೇಶ್, ದಿಬ್ಬೂರಹಳ್ಳಿಯ ಸಾಯಿರಾಂ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್, ಇಂದಿರಾ ನಾರಾಯಣ್, ಎಜುಕೇಷನ್ ಟ್ರಸ್ಟ್ ಸದಸ್ಯೆ ಸುನಂದಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು