ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ತಿಂಗಳ ಉಪವಾಸಕ್ಕೆ ತೆರೆ: ರಂಜಾನ್‌ ಸಂಭ್ರಮ

Published 11 ಏಪ್ರಿಲ್ 2024, 7:55 IST
Last Updated 11 ಏಪ್ರಿಲ್ 2024, 7:55 IST
ಅಕ್ಷರ ಗಾತ್ರ

ಚಿಂತಾಮಣಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. 30 ದಿನಗಳಿಂದ ಕಠಿಣ ಉಪವಾಸ ವ್ರತ ಆಚರಿಸಿರುವ ಮುಸ್ಲಿಮರು ಹಬ್ಬದ ಸಂಭ್ರಮಕ್ಕೆ ಕಾತುರರಾಗಿದ್ದಾರೆ. ಗುರುವಾರ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಗುರುವಾರ ಬೆಳಿಗ್ಗೆ ಮುಸ್ಲಿಮರು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಅಲ್ಲಿ ವಿಶೇಷ ಪ್ರಾರ್ಥನೆ ಮಾಡುವರು. ಧರ್ಮಗುರುಗಳು ಉಪನ್ಯಾಸ ನೀಡುವರು.

ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಟ್ಟಾಗಿ ಭುಜಕ್ಕೆ ಭುಜ ತಾಗಿಸಿ ವಿನಮ್ರಭಾವದಿಂದ ಪ್ರಾರ್ಥನೆ ಸಲ್ಲಿಸುವ ದೃಶ್ಯ ವಿಹಂಗಮವಾಗಿರುತ್ತದೆ. ಪರಸ್ಪರ ಅಪ್ಪಿಕೊಂಡು ಶುಭಾಶಯಗಳನ್ನು ಕೋರುತ್ತಾರೆ.

ನಂತರ ಮನೆಗಳಿಗೆ ತೆರಳಿ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಭೋಜನ ಸವಿಯುವುದು ಹಬ್ಬದ ವಿಶೇಷವಾಗಿರುತ್ತದೆ.

ಈದ್ಗಾ ಮೈದಾನದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶಾಮಿಯಾನ ಮತ್ತಿತರ ಸಿದ್ಧತೆಗಳನ್ನು ಜಾಮಿಯಾ ಮಸೀದಿ ವತಿಯಿಂದ ಮಾಡಲಾಗಿದೆ.

ಉಪವಾಸ, ದಾನ-ಧರ್ಮ, ಶಾಂತಿ, ಸೌಹಾರ್ದದ ಸಂದೇಶ ಸಾರುವ ಈದ್ ಉದ್ ಫಿತ್ರ್ ಆಚರಣೆಗೆ ನಗರ ಮತ್ತು ತಾಲ್ಲೂಕಿನಾದ್ಯಂತ ಅಂತಿಮ ಸಿದ್ಧತೆ ನಡೆಸುತ್ತಿರುವುದು ಕಂಡು ಬಂತು. ಹಬ್ಬದ ಮುನ್ನಾ ದಿನವಾದ ಬುಧವಾರ ಮುಸ್ಲಿಮರು ಹೊಸ ಉಡುಪುಗಳು, ಆಹಾರ ಸಾಮಗ್ರಿಗಳು, ಅಲಂಕಾರಿಕ ವಸ್ತು ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ತಡರಾತ್ರಿಯವರೆಗೂ ವ್ಯಾಪಾರ, ವಹಿವಾಟಿನ ಭರಾಟೆ ನಡೆದಿತ್ತು.

ಪ್ರತಿ ದಿನ ಬೆಳಿಗ್ಗೆ 5 ಗಂಟೆಗೆ, ಮಧ್ಯಾಹ್ನ 1.30, ಸಂಜೆ 5, 6.30 ರಾತ್ರಿ 8ಕ್ಕೆ ನಮಾಜ್ ಮಾಡಿದ್ದರು. ರಾತ್ರಿ 9.30ಕ್ಕೆ ವಿಶೇಷ ತರಾವಿ ಪ್ರಾರ್ಥನೆ ಮಾಡುವುದು ವಿಶೇಷ. ಏಳು ವರ್ಷದ ಮಕ್ಕಳಿಂದ ವಯೋವೃದ್ಧ ರವರೆಗೆ ಪ್ರಾರ್ಥನೆ, ಉಪವಾಸ ಆಚರಣೆ ಇರುತ್ತಾರೆ. ಶಾಬಾನ್ ತಿಂಗಳ ಕೊನೆಯಲ್ಲಿ ಎಲ್ಲರ ದೃಷ್ಟಿ ಆಕಾಶದತ್ತ ನೆಟ್ಟಿರುತ್ತಾರೆ. ಕವಿದಿರುವ ಮೋಡಗಳ ನಡುವೆ ಬಾಲಚಂದ್ರನ ಮಿಂಚು ನೋಟಕ್ಕಾಗಿ ಕಾದಿರುತ್ತಾರೆ.

ತಾಲ್ಲೂಕಿನಲ್ಲಿ ಬರಗಾಲದ ನಡುವೆಯೇ ಹಿಂದೂಗಳು ಮಂಗಳವಾರ ಯುಗಾದಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದರು. ಗುರುವಾರ ಮುಸ್ಲಿಮರು ಸಂಭ್ರಮದಿಂದ ರಂಜಾನ್ ಆಚರಿಸುವ ಕಾತುರದಲ್ಲಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಿಗಳು ನಾಲ್ಕು ಕಾಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ.

ನಗರದ ಜೋಡಿರಸ್ತೆ, ಸ್ಟೇಡಿಯಂ ಕಾಂಪ್ಲೆಕ್ಸ್, ಅಜಾದ್‌ ಚೌಕ, ದೊಡ್ಡಪೇಟೆ ರಸ್ತೆ, ಮಸೀದಿಗಳ ಸುತ್ತಮುತ್ತ ಅಂಗಡಿಗಳಲ್ಲಿ ಬಟ್ಟೆಗಳು, ಗಾಜಿನ ಬಳೆಗಳು, ಸುಗಂಧ ದ್ರವ್ಯ, ಮನೆಯ ವಿವಿಧ ಅಲಂಕಾರಿಕ ವಸ್ತುಗಳು, ಮೆಹಂದಿ ಮಾರಾಟ ಭರ್ಜರಿಯಾಗಿ ನಡೆಯಿತು.

ಹಬ್ಬದ ಊಟಕ್ಕೆ ಬೇಕಾದ ಶ್ಯಾವಿಗೆ, ಖರ್ಜೂರ, ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ, ಲವಂಗ, ಒಣದ್ರಾಕ್ಷಿ, ಅಂಜೂರ, ತುಪ್ಪ, ವಿಶೇಷವಾಗಿ ಮಾಂಸದ ಆಹಾರಕ್ಕೆ ಬೇಕಾದ ಮಸಾಲ ಸಾಂಬಾರ ಪದಾರ್ಥಗಳ ವ್ಯಾಪಾರವೂ ಜೋರಾಗಿದೆ. ಹಬ್ಬವು ರಸ್ತೆ ಬದಿಯ ವ್ಯಾಪಾರಿಗಳಲ್ಲೂ ಸಂತಸ ಮೂಡಿಸಿದೆ.

ಖರೀದಿ ಜೋರು

ಚಿಕ್ಕಬಳ್ಳಾಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಗುರುವಾರ ರಂಜಾನ್ ಹಬ್ಬವನ್ನು ಆಚರಿಸುವರು. ಈ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಬುಧವಾರ ಖರೀದಿಸಿದರು. 

ನಗರದ ಬಜಾರ್ ರಸ್ತೆ, ಕಾರ್ಖಾನೆ ಪೇಟೆ ರಸ್ತೆಯ ಬಳೆ, ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಮುಸ್ಲಿಂ ಮಹಿಳೆಯರು ಖರೀದಿಸಿದರು. ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ ಸಹ ನಡೆಯಿತು.

ನಗರದ ಜಮ್ಮಾ ಮಸೀದಿ, ಮಜ್ಜೀದ್ ಈ ಕುದ್ರ, ಮಜ್ಜೀದ್ ಈ ನುರಾನಿ ಮಸೀದಿಯಲ್ಲಿ ಬೆಳಿಗ್ಗೆ 9ಕ್ಕೆ ಪ್ರಾರ್ಥನೆ ಜರುಗಲಿದೆ. ಮಜ್ಜೀದ್ ಈ ಹುಸೇನಿಯಾ, ಮಜ್ಜೀದ್ ಈ ರಜಿಯಾ ಮತ್ತು ಇಸ್ಲಾಂಪುರ ಮಸೀದಿಯಲ್ಲಿ ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆ ನಡೆಯಲಿದೆ. ನಂತರ 10.30ಕ್ಕೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT