ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದ ಸರ್ಕಾರಿ ಕಟ್ಟಡಗಳ ಮೇಲೆ ಮೂಡಲಿವೆ ಚಿತ್ರಗಳು; ₹ 3.5 ಲಕ್ಷ ವೆಚ್ಚ

ನಗರದ ಅಂದಕ್ಕೆ ಚಿತ್ರ ಸೊಬಗು
Last Updated 25 ಜೂನ್ 2021, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೆಲವೇ ದಿನಗಳಲ್ಲಿ ನಗರದ ಕ್ರೀಡಾಂಗಣ ರಸ್ತೆ, ಕಂದವಾರ ಹೆಬ್ಬಾಗಿಲು, ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ನ್ಯಾಯಾಲಯದ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಜಿಲ್ಲೆಯ ಬದುಕು, ಪ್ರವಾಸಿ ತಾಣಗಳನ್ನು ಬಿಂಬಿಸುವ ಚಿತ್ರಗಳ ದರ್ಶನವಾಗಲಿದೆ.

ಹೌದು, ನಗರದ ಅಂದವನ್ನು ಹೆಚ್ಚಿಸಲು ನಗರಸಭೆಯು ಇದೇ ಮೊದಲ ಬಾರಿಗೆ ಪ್ರಮುಖ ರಸ್ತೆಗಳಲ್ಲಿರುವ ಸರ್ಕಾರಿ ಕಟ್ಟಡಗಳು, ನಗರಸಭೆ ವಾಣಿಜ್ಯ ಮಳಿಗೆಗಳ ಗೋಡೆಗಳ ಮೇಲೆ ಚಿತ್ರಗಳನ್ನು ಮೂಡಿಸಲು ಮುಂದಾಗಿದೆ.

ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರದ ಹೆಸರನ್ನು ಮೆರೆಸಿದ ಸರ್‌.ಎಂ.ವಿಶ್ವೇಶ್ವರಯ್ಯ, ಪ್ರಸಿದ್ಧ ಪ್ರವಾಸಿ ತಾಣಗಳಾದ ನಂದಿಬೆಟ್ಟ, ಆವಲಬೆಟ್ಟ, ಜಕ್ಕಲಮಡುಗು ಜಲಾಶಯ, ಯೋಗ ನಂದೀಶ್ವರ ಮತ್ತು ಭೋಗನಂದೀಶ್ವರ ದೇವಸ್ಥಾನಗಳ ಕಲಾ ವೈಭವ ಹೀಗೆ ಜಿಲ್ಲೆಯ ಪ್ರಸಿದ್ಧ ತಾಣಗಳು ಚಿತ್ರಗಳಾಗಿ ಮೂಡಲಿವೆ. ಇದಿಷ್ಟೇ ಅಲ್ಲ ಜಿಲ್ಲೆಯ ಪ‍್ರಮುಖ ಬೆಳೆಯಾದ ದ್ರಾಕ್ಷಿ ತೋಟಗಳ ಸಾಲು, ತರಕಾರಿ, ಹೂ ಹಣ್ಣು ಸಹ ಗೋಡೆಗಳ ಮೇಲೆ ಚಿತ್ರಗಳಾಗಿ ಕಾಣಲಿವೆ.

ಸರ್ಕಾರಿ ಶಾಲೆಗಳ ಕಾಂಪೌಂಡ್‌ಗಳ ಮೇಲೂ ಸಹ ಚಿತ್ರಗಳು ಮೂಡಲಿವೆ. ಇಲ್ಲಿನ ಚಿತ್ರಗಳು ಮಕ್ಕಳ ಮನೋಭಿತ್ತಿಯನ್ನು ಅರಳಿಸುವ ಸಾಧ್ಯತೆಯೂ ಇದೆ. ಇದಕ್ಕಾಗಿ ಸ್ವಚ್ಛ ಭಾರತ ಯೋಜನೆಯಡಿ ₹ 3.5 ಲಕ್ಷವನ್ನು ನಗರಸಭೆ ಮೀಸಲಿಟ್ಟಿದೆ.

ಈಗಾಗಲೇ ರಾಜ್ಯದ ಪ್ರಮುಖ ನಗರಗಳಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳು ವರ್ಲಿ ಚಿತ್ತಾರಗಳು, ಸ್ಥಳೀಯ ಜನಜೀವನ ಪ್ರತಿಬಿಂಬಿಸುವ ಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳ ಕಾಂಪೌಂಡ್‌ಗಳು, ಸರ್ಕಾರಿ ಕಟ್ಟಡಗಳ ಮೇಲೆ ಬರೆಸಿವೆ. ಇದು ಆ ನಗರಗಳ ಅಂದ ಹೆಚ್ಚಿಸಲು ಸಹ ಸಹಕಾರಿ ಆಗಿವೆ.

ಹೀಗೆ ಚಿತ್ರಗಳನ್ನು ಬಿಡಿಸುವುದರಿಂದ ಬಸ್‌ನಲ್ಲಿ ಜಿಲ್ಲೆಯ ಮೂಲಕ ಹೊರಜಿಲ್ಲೆ, ರಾಜ್ಯಗಳಿಗೆ ಪ್ರಯಾಣಿಸುವವರಿಗೆ, ಹೊರ ಜಿಲ್ಲೆಗಳ ಜನರಿಗೆ ಚಿಕ್ಕಬಳ್ಳಾಪುರದ ‍ಪ್ರವಾಸಿತಾಣಗಳು ಮತ್ತು ಬೆಳೆಗಳ ಪರಿಚಯವಾಗುತ್ತದೆ. ನಗರಸಭೆಯು ಗುರುತಿಸಿರುವ ಸ್ಥಳಗಳು ಸದಾ ಜನಜಂಗುಳಿಯಿಂದ ಕೂಡಿವೆ. ಇಲ್ಲಿ ಚಿತ್ರಗಳು ಮೂಡುವುದರಿಂದ ನಗರದ ಅಂದ ಹೆಚ್ಚುತ್ತದೆ. ದಾರಿ ಹೋಕರು ಸಹ ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

ಯಾವ ಕಡೆ ಯಾವ ಚಿತ್ರಗಳನ್ನು ಬಿಡಸಬೇಕು ಎನ್ನುವ ಬಗ್ಗೆ ಈಗಾಗಲೇ ನಗರಸಭೆ ಯೋಜನೆ ರೂಪಿಸಿದೆ. ಚಿತ್ರ ಬಿಡಿಸುವವರು ಅವುಗಳ ನೀಲನಕ್ಷೆ ಸಿದ್ಧಗೊಳಿಸಿದ್ದಾರೆ. ಆ ಮಾದರಿಯಲ್ಲಿಯೇ ಗೋಡೆಗಳ ಮೇಲೆ ಚಿತ್ರಗಳು ಮೂಡಲಿವೆ.

‘ಕಂದವಾರ ಹೆಬ್ಬಾಗಿಲಿನ ಕೋಟೆಯ ಗೋಡೆಯ ಮೇಲೂ ‌ಚಿತ್ರಗಳನ್ನು ಬಿಡಿಸಲಾಗುವುದು. ಜಿಲ್ಲೆ ಐತಿಹಾಸಿಕ ಹಿನ್ನೆಲೆ ಇದೆ. ಐತಿಹಾಸಿಕ ವಿಚಾರಗಳ ಪರಿಚಯ, ಜನಜೀವನದ ರೀತಿ ನೀತಿಗಳು ಈ ಚಿತ್ರಗಳಲ್ಲಿ ಕಾಣಬಹುದು. ಶೀಘ್ರದಲ್ಲಿಯೇ ಈ ಕೆಲಸಗಳು ಆರಂಭವಾಗಲಿವೆ’ ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ತಿಳಿಸಿದರು.

ಸಚಿವರ ಕನಸಿಗೆ ಸಾಥ್

ಸರ್ಕಾರಿ ಕಟ್ಟಡಗಳ ಪ್ರಮುಖ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸ ಲಾಗುವುದು. ಚಿತ್ರಗಳನ್ನು ಬಿಡಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಗುತ್ತಿಗೆ ನೀಡಲಾಗಿದೆ. ಕೋವಿಡ್ ಇಲ್ಲದಿದ್ದರೆ ಈಗಾಗಲೇ ಈ ಪ್ರಕ್ರಿಯೆ ಪೂರ್ಣವಾಗುತ್ತಿತ್ತು. ಸಚಿವ ಡಾ.ಕೆ.ಸುಧಾಕರ್ ಅವರಿಗೆ ನಗರದ ಅಂದ ಹೆಚ್ಚಿಸಬೇಕು ಎನ್ನುವ ಉದ್ದೇಶವಿದೆ. ಅವರ ಸೂಚನೆಯಡಿ ಈ ಕೆಲಸ ಮಾಡುತ್ತಿದ್ದೇವೆ. ಇದರಿಂದ ನಗರದ ಅಂದವೂ ಹೆಚ್ಚಲಿದೆ ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಬಳ್ಳಾಪುರವನ್ನು ಮಾದರಿ ನಗರ ಮಾಡಬೇಕು ಎನ್ನುವುದು ಸಚಿವರ ಕನಸು. ಅವರ ಕನಸಿಗೆ ಸಾಥ್ ನೀಡುತ್ತಿದ್ದೇವೆ. ಸ್ವಚ್ಛ ಭಾರತ ಅನುದಾನವನ್ನು ಇದಕ್ಕೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT