ಮಂಗಳವಾರ, ಅಕ್ಟೋಬರ್ 19, 2021
24 °C
ಈಶಾ ಔಟ್‌ರೀಚ್ ಹಾಗೂ ಬೆಂಗಳೂರಿನ ಹಸಿರು ಸಂಸ್ಥೆಯ ನೇತೃತ್ವ

‘ನಮ್ಮ ನಂದಿ’ಗೆ ಸಂಭ್ರಮದ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮುಂದಿನ 10, 15 ವರ್ಷಗಳ ನಂತರ ನಂದಿಬೆಟ್ಟದ ವಾತಾವರಣದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದು ಸದ್ಗುರು ಜಗ್ಗಿ ವಾಸುದೇವ ಹೇಳಿದರು.

ನಂದಿಗಿರಿಧಾಮ ಹಾಗೂ ಸುತ್ತಲಿನ ಬೆಟ್ಟಗಳನ್ನು ಮತ್ತಷ್ಟು ಹಸಿರೀಕರಣಗೊಳಿಸುವ ಉದ್ದೇಶದಿಂದ ಈಶಾ ಔಟ್‌ರೀಚ್ ಸಂಸ್ಥೆ ಹಾಗೂ ಬೆಂಗಳೂರಿನ ಹಸಿರು ಸಂಸ್ಥೆಯ ನೇತೃತ್ವದಲ್ಲಿ ಶನಿವಾರ ನಂದಿಬೆಟ್ಟದ ತಪ್ಪಲಿನಲ್ಲಿ ‘ನಮ್ಮ ನಂದಿ’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪರಿಸರವನ್ನು ಮುಂದಿನ ತಲೆಮಾರಿಗೆ ಉಳಿಸಬೇಕು ಎನ್ನುವುದಲ್ಲ. ಇಂದಿನ ಜನರಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ. ಅರಣ್ಯ ಪ್ರದೇಶಗಳಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚುತ್ತಿದೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.

ಸರ್ಕಾರ ಮಾತ್ರವೇ ಪರಿಸರ ರಕ್ಷಣೆ ಮಾಡಲು ಸಾಧ್ಯವಿಲ್ಲ. ನಾಗರಿಕರು ಸಹ ಇದರಲ್ಲಿ ಭಾಗಿ ಆಗಬೇಕು. ನಂದಿಯ ವಾತಾವರಣ ಬೆಂಗಳೂರಿನ ಮೇಲೆ ಪರಿಣಾಮ ಬೀರುತ್ತದೆ. ನಂದಿ ಅತ್ಯುತ್ತಮವಾದ ಪ್ರಾಕೃತಿಕ ತಾಣ ಎಂದು ಹೇಳಿದರು.

ಆರ್ಥಿಕ ಅಭಿವೃದ್ಧಿಯ ಜತೆಗೆ ಪರಿಸರವೂ ಅಭಿವೃದ್ಧಿ ಆಗಬೇಕು. ಪರಿಸರ ಅಭಿವೃದ್ಧಿಗೆ ಎಲ್ಲರೂ ಭಾಗಿ ಆಗಬೇಕು. ನಾನು ಆರೇಳು ಸಲ ಪಶ್ಚಿಮಘಟ್ಟಗಳಲ್ಲಿ ಚಾರಣ ಮಾಡಿದ್ದೇನೆ. ಕಾರವಾರದಿಂದ ಕನ್ಯಾಕುಮಾರಿಯವರೆಗೆ 11 ಬಾರಿ ಚಾರಣ ಮಾಡಿದ್ದೇನೆ. ನನ್ನ ಅನುಭವದ ಪ್ರಕಾರ ಕರ್ನಾಟಕದ ಅರಣ್ಯ ಸಂಪನ್ಮೂಲ ಉತ್ತಮವಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ನಂದಿಬೆಟ್ಟ ಸೇರಿದಂತೆ ಗುಂಡುತೋಪುಗಳಲ್ಲಿಯೂ ಸಸಿ ನೆಡಲಾಗುತ್ತಿದೆ. ಸದ್ಗುರು ಅವರ ಕಾರ್ಯಗಳಿಗೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡುತ್ತದೆ. 10 ಸಾವಿರ ಯುವಕರನ್ನು ಈ ಅಭಿಯಾನದಲ್ಲಿ ಭಾಗಿ ಆಗುವಂತೆ ಮಾಡುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಇದು ಬಹಳ ಖುಷಿಯ ಸಮಯ. ಇಲ್ಲಿ ಪರಿಸರ ಅಭಿವೃದ್ಧಿ ಆಗುವುದರಿಂದ ಮತ್ತು ನಮ್ಮ ನಂದಿ ಚಟುವಟಿಕೆಗಳಿಂದ ಅಪರಾಧ ಕೃತ್ಯಗಳು ಸಹ ಕಡಿಮೆ ಆಗುತ್ತವೆ ಎಂದರು.

ಜಿಲ್ಲಾ ಪೊಲೀಸ್ ಇಲಾಖೆಯ 1,200 ಸಿಬ್ಬಂದಿಯೂ ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೇವೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರವನ್ನು ನಾವು ನೀಡುತ್ತೇವೆ ಎಂದು ಹೇಳಿದರು.

ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅರಸಲನ್ ಮಾತನಾಡಿ, ಜಿಲ್ಲೆಯಲ್ಲಿ ಶೇ 19ರಷ್ಟು ಅರಣ್ಯ ಪ್ರದೇಶವಿದೆ. ಅರಣ್ಯವನ್ನು ಉಳಿಸಿ ಬೆಳೆಸುವುದರಿಂದ ಮನುಕುಲಕ್ಕೆ ಉತ್ತಮ. ಪರಿಸರ ಮತ್ತು ಅರಣ್ಯ ಉಳಿಸುವ ವಿಚಾರದಲ್ಲಿ ಈಶಾ ಸಂಸ್ಥೆಗೆ ಅರಣ್ಯ ಇಲಾಖೆ ಸಹಕಾರ ನೀಡಲಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೊದಲಿಗೆ ನಂದಿ ನಾಡಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ನಂದಿಬೆಟ್ಟದ ತಪ್ಪಲಿನಲ್ಲಿ ಆರಂಭದಲ್ಲಿ ಸಸಿ ನೆಡಲಾಯಿತು. ನಂತರ ಯಲುವಳ್ಳಿಯ ಗುಂಡುತೋಪಿನಲ್ಲಿಯೂ ಸಸಿಗಳನ್ನು ನೆಡಲಾಯಿತು.

***

ಅಜ್ಜನ ಜತೆ ಬೆಟ್ಟಕ್ಕೆ

ಸದ್ಗುರು ಅವರ ತಾಯಿಯ ತವರು ಚಿಕ್ಕಬಳ್ಳಾಪುರ. ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನೂ ಅವರು ನೆನಪಿಸಿಕೊಂಡರು, ‘ನನ್ನ ಅಜ್ಜನ ಜತೆ ಚಿಕ್ಕಂದಿನಲ್ಲಿ ನಂದಿ ಬೆಟ್ಟಕ್ಕೆ ಬರುತ್ತಿದ್ದೆ. ಅಂದಿನ ವಾತಾವರಣಕ್ಕೂ ಇಂದಿನ ವಾತಾವರಣಕ್ಕೂ ಬದಲಾವಣೆ ಆಗಿದೆ’ ಎಂದು ಸದ್ಗುರು ಜಗ್ಗಿ ವಾಸುದೇವ ಹೇಳಿದರು.

**

ಸದ್ಗುರುವಿನ ನೃತ್ಯ

ಗಿಡ ನೆಡುವ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸ್ಥಳದಲ್ಲಿ ಹಾಜರಿದ್ದ ಸ್ವಯಂ ಸೇವಕರು ಪರಿಸರ ಪರವಾದ ಹಾಡುಗಳನ್ನು ಹಾಡಿದರು. ಗಿಡ ನೆಡಲು ಟ್ಯಾಂಕರ್‌ನಿಂದ ಬೆಟ್ಟದ ತಪ್ಪಲು ಹಾಗೂ ಮೇಲ್ಭಾಗಕ್ಕೆ ನೀರು ಕೊಂಡೊಯ್ಯುತ್ತಿದ್ದರು. ನಂತರ ಯಲುವಳ್ಳಿಯ ಗುಂಡುತೋಪಿನಲ್ಲಿ ಸಸಿಗಳನ್ನು ನೆಡುವ ಸ್ಥಳಕ್ಕೆ ಬಂದ ಸದ್ಗುರು ಅವರು ಸ್ವಯಂಸೇವಕರನ್ನು ಹುರಿದುಂಬಿಸಿದರು. ಚಪ್ಪಾಳೆ ತಟ್ಟುತ್ತ ಕ್ಷಣ ಕಾಲ ಹೆಜ್ಜೆ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.