ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟ: ಲಾಕ್‌ಡೌನ್‌ ನಡುವೆ 21 ಟಿನ್ ಕಾಣೆ;ಕೋತಿ ಕೊರಳಿಗೆ ಮದ್ಯದ ಗೋಲ್‌ಮಾಲ್!

ಕೆಎಸ್‌ಟಿಡಿಸಿ ಹೋಟೆಲ್‌
Last Updated 3 ಮೇ 2020, 1:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ‘ಮಯೂರ ಫೈನ್‌ಟಾಪ್‌’ಹೋಟೆಲ್‌ನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಕಳ್ಳತನವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

ಹೋಟೆಲ್‌ನ ಮದ್ಯದ ದಾಸ್ತಾನಿನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ 300 ಎಂ.ಎಲ್‌ನ 21 ಟಿನ್‌ಗಳು ಕಾಣೆಯಾಗಿವೆ. ಸೋಜಿಗದ ಸಂಗತಿ ಎಂದರೆ ಮದ್ಯದ ಟಿನ್‌ಗಳನ್ನು ಕೋತಿಗಳು ಹಾಳು ಮಾಡಿವೆ ಎಂದು ಹೋಟೆಲ್‌ ವ್ಯವಸ್ಥಾಪಕ ಮಂಜೇಗೌಡ ಅವರು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮದ್ಯದ ದಾಸ್ತಾನಿನ ಈ ಗೋಲ್‌ಮಾಲ್‌ ಬಗ್ಗೆ ಹೋಟೆಲ್‌ ವ್ಯವಸ್ಥಾಪಕ ಏಪ್ರಿಲ್ 28 ರಂದೇ ಬರೆದ ಪತ್ರ ಶನಿವಾರದವರೆಗೂ (ಮೇ 2) ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರಿಗೆ ತಲುಪಿಲ್ಲ.

ಮೌಖಿಕವಾಗಿ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಏನಿದು ಘಟನೆ?

ಕೊರೊನಾ ಸೋಂಕು ನಿಯಂತ್ರಿಸುವ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸುತ್ತಿದ್ದಂತೆ ಮಾರ್ಚ್‌ 21 ರಂದು ಹೋಟೆಲ್‌ನ ವ್ಯವಸ್ಥಾಪಕ ಮತ್ತು ಲೆಕ್ಕ ಪರಿಶೋಧಕರ ಸಮ್ಮುಖದಲ್ಲಿ ಹೋಟೆಲ್‌ನಲ್ಲಿದ್ದ ಮದ್ಯ ಮತ್ತು ತಂಪು ಪಾನೀಯಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಪರಿಶೀಲಿಸಿದಾಗ ಎಲ್ಲ ಸರಿಯಾಗಿತ್ತು.

ಮಾರ್ಚ್‌ 22 ರಂದು ಹೋಟೆಲ್‌ ವ್ಯವಸ್ಥಾಪಕ ಊರಿಗೆ ತೆರಳಿದ್ದರು. ಮಾರ್ಚ್‌ 31 ರಂದು ಲೆಕ್ಕ ಪರಿಶೋಧಕರು ದಾಸ್ತಾನು ಪರಿಶೀಲಿಸಿದಾಗಲೂ ಎಲ್ಲ ಸರಿಯಾಗಿತ್ತು. ಏಪ್ರಿಲ್ 24 ರಂದು ಕೆಲಸಕ್ಕೆ ಹಾಜರಾದ ವ್ಯವಸ್ಥಾಪಕ ಏ.26 ರಂದು ಹೋಟೆಲ್‌ ಸಿಬ್ಬಂದಿ ಸಮ್ಮುಖದಲ್ಲಿ ದಾಸ್ತಾನು ಪರಿಶೀಲಿಸಿದ ವೇಳೆ ಮದ್ಯ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ವಿಚಾರ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲು ಏ.28 ರಂದು ಪತ್ರ ಬರೆದಿರುವ ಹೋಟೆಲ್‌ ವ್ಯವಸ್ಥಾಪಕ, ಹೋಟೆಲ್‌ನ ಉಗ್ರಾಣ ಮತ್ತು ಮದ್ಯದ ದಾಸ್ತಾನು ಕೊಠಡಿಯ ಬೀಗ ಜಯಭೀಮಾ ಎಂಬುವರ ಬಳಿ ಇತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಪಡೆಯಲು ಹೋಟೆಲ್‌ ವ್ಯವಸ್ಥಾಪಕ ಮಂಜೇಗೌಡ ಅವರ ಎರಡು ಮೊಬೈಲ್‌ ಸಂಖ್ಯೆಗಳಿಗೆ ಸಂಪರ್ಕಿಸಿದರೆ ಅವು ಸ್ವಿಚ್ಡ್‌ಆಫ್‌ ಆಗಿದ್ದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕುಮಾರ್ ಪುಷ್ಕರ್, ‘ನಂದಿಬೆಟ್ಟದ ಮಯೂರ್‌ ಫೈನ್‌ಟಾಪ್‌ ಹೋಟೆಲ್‌ನಲ್ಲಿ ಮದ್ಯದ ದಾಸ್ತಾನು ಕಳುವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲಿರುವ ಸಿಬ್ಬಂದಿ ಮದ್ಯ ಸೇವಿಸಿರಬೇಕು ಅಥವಾ ಯಾರಿಗಾದರೂ ಮಾರಾಟ ಮಾಡಿರುವ ಶಂಕೆ ಇದೆ’ ಎಂದು ಹೇಳಿದರು.

‘ಲಾಕ್‌ಡೌನ್‌ ಕಾರಣಕ್ಕೆ ಇಡೀ ದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಿದ ವೇಳೆ ಸರ್ಕಾರಿ ಸಂಸ್ಥೆಯೊಂದರಲ್ಲಿ ರೀತಿ ಮಾಡಿರುವುದು ದೊಡ್ಡ ತಪ್ಪು. ಇದು ಸಂಪೂರ್ಣ ಕಾನೂನು ಬಾಹಿರ ಕೃತ್ಯ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

‘ನಂದಿಬೆಟ್ಟ ಹೊರತುಪಡಿಸಿದಂತೆ ಉಳಿದೆಡೆ ಇರುವ ಕೆಎಸ್‌ಟಿಡಿಸಿ ಬಾರ್‌ಗಳಿಗೆ ಅಬಕಾರಿ ಇಲಾಖೆಯವರೇ ಖುದ್ದಾಗಿ ಹೋಗಿ ಬೀಗಮುದ್ರೆ ಹಾಕಿದ್ದಾರೆ. ಇಲ್ಲಿ ಏಕೆ ಬೀಗ ಮುದ್ರೆ ಹಾಕಿಲ್ಲ ಎಂಬುದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.

ಚರ್ಚೆಗೆ ಎಡೆ

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ವ್ಯಸನಿಗಳು ಅಲ್ಲಲ್ಲಿ ಬಾರ್‌, ಮದ್ಯದಂಗಡಿಗಳನ್ನು ಕಳ್ಳತನ ಮಾಡುತ್ತಿರುವುದು ವರದಿಯಾಗುತ್ತಿರುವ ನಡುವೆಯೇ, ಸರ್ಕಾರಿ ಸಂಸ್ಥೆಯೊಂದರ ಹೋಟೆಲ್‌ನಲ್ಲೂ ಮದ್ಯದ ದಾಸ್ತಾನು ಕಡಿಮೆಯಾಗಿರುವುದು ಚರ್ಚೆಗೆ ಎಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT