ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ; ರೈತರ ಸಭೆ ನಡೆಸಿ

ಅಧಿಕಾರಿಗಳಿಗೆ ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ
Last Updated 31 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾಹಿತಿ ಕೊರತೆಯಿಂದ ಸಾಕಷ್ಟು ರೈತರು ಬೆಳೆ ವಿಮೆ ಮಾಡಿಸಿಲ್ಲ. ಕೃಷಿ ಇಲಾಖೆ ಒಳಗೊಂಡಂತೆ ಸಂಬಂಧಪಟ್ಟ ಇತರ ಇಲಾಖೆ ಅಧಿಕಾರಿಗಳು ಬೆಳೆ ವಿಮೆ ಯೋಜನೆ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಈ ದಿಸೆಯಲ್ಲಿ ರೈತರ ಸಭೆ ನಡೆಸಬೇಕು ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಕೆ.ಸಿ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರೈತರ ಅನುಕೂಲಕ್ಕಾಗಿ ಬೆಳೆ ವಿಮೆ ಯೋಜನೆ ಇದೆ. ವಿಮಾ ಕಂಪನಿಗಳನ್ನು ನಾವು ಸಾಕುತ್ತಿದ್ದೇವೆ. ಆದರೆ ವಿಮೆ ಹಣ ಕಟ್ಟಿರುವುದರಲ್ಲಿ ಶೇ 50 ರಷ್ಟು ಹಣ ಸಹ ರೈತರಿಗೆ ಸಿಗುತ್ತಿಲ್ಲ. ಸರ್ವೆ ನಂಬರ್‌ ಬಗ್ಗೆ ಸ್ಥಳ ಪರಿಶೀಲಿಸಬೇಕು. ಅಧಿಕಾರಿಗಳ ಒಂದು ಸಣ್ಣ ತಪ್ಪಿನಿಂದ ರೈತರಿಗೆ ದೊಡ್ಡ ನಷ್ಟ ಆಗುತ್ತದೆ. ಈ ಬಗ್ಗೆ ಎಚ್ಚರಿಕೆವಹಿಸಿ ಎಂದು ನಿರ್ದೇಶನ ನೀಡಿದರು.

ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯ ಆಗುತ್ತಿದೆ. ಬೆಳೆ ನಷ್ಟ ಆಗಿದ್ದರೂ ಸರಿಯಾದ ಪರಿಶೀಲನೆ ನಡೆಸದೆ ವರದಿ ನೀಡುವ ಕಾರಣ ವಿಮೆ ಹಣ ಸಿಗುತ್ತಿಲ್ಲ. ತಕ್ಷಣ ಅಧಿಕಾರಿಗಳು ರೈತರ ಜೊತೆ ಸಭೆ ನಡೆಸಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಜಿಲ್ಲೆಯಲ್ಲಿ ₹ 21 ಕೋಟಿ ಹಣ ಪಿಡಿ ಖಾತೆಯಲ್ಲಿದೆ. ಶೇ 26 ರಷ್ಟು ಮಾತ್ರ ಕೆಲಸ ಆಗಿದೆ. ಹಣ ಬಳಸದಿದ್ದರೆ ವಾಪಸ್ ಪಡೆಯುತ್ತೇವೆ. ಶಾಸಕರು ಕ್ರಿಯಾಯೋಜನೆ ನೀಡಿ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕ್ರೀಡಾ ಹಾಸ್ಟೆಲ್ ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ ಇದೆ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲೇ ₹ 2.5 ಕೋಟಿ ವೆಚ್ಚದಲ್ಲಿ ಹೈಟೆಕ್ ಕ್ರೀಡಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿ.ಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಹಾಗೂ ಅಧಿಕಾರಿಗಳು ಇದ್ದರು.

ಸಭೆಯ ಬಳಿಕ ಕೆ.ಸಿ.ನಾರಾಯಣಗೌಡ ನಗರದ ಎರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಕ್ರೀಡಾಂಗಣದ ಸ್ವಚ್ಛತೆ, ಒಳಾಂಗಣ ಕ್ರೀಡಾಂಗಣ ಹಾಗೂ ಈಜುಕೊಳ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT