ಭಾನುವಾರ, ಜೂಲೈ 12, 2020
29 °C
ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ, ನಗರಸಭೆ ಸಿಬ್ಬಂದಿಯಿಂದ ನಗರದಲ್ಲಿ ಕಾರ್ಯಾಚರಣೆ

ಚಿಕ್ಕಬಳ್ಳಾಪುರ | ಅನಾವಶ್ಯಕ ಅಲೆದರೆ ಬೀಳುತ್ತೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಗರಸಭೆ ಸಿಬ್ಬಂದಿ ಅನಾವಶ್ಯಕವಾಗಿ ಮನೆಯಿಂದ ಹೊರಬಂದ ನಾಗರಿಕರಿಗೆ ದಂಡ ವಿಧಿಸಿದರು

ಚಿಕ್ಕಬಳ್ಳಾಪುರ: ನಗರದಲ್ಲಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಕಾನೂನು ಉಲ್ಲಂಘಿಸಿ ಬೇಜವಾಬ್ದಾರಿತನ ತೋರುವವರಿಗೆ ದಂಢ ವಿಧಿಸಲು ಮುಂದಾಗಿದೆ. 

ನಗರದಲ್ಲಿ ಮೇ 1 ರಿಂದ ನಗರಸಭೆಯ ಸಿಬ್ಬಂದಿ ದಂಡ ವಿಧಿಸುವ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಎರಡು ದಿನಗಳಲ್ಲಿ ಸುಮಾರು ₹9,000 ದಂಡ ವಸೂಲಿ ಮಾಡಿದ್ದಾರೆ.

ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರುವುದು, ಮಾಸ್ಕ್‌ ಧರಿಸದಿರುವುದು, ಅಂತರ ಕಾಯ್ದುಕೊಳ್ಳದಿರುವುದು ಸೇರಿದಂತೆ ಕೊರೊನಾ ಸೋಂಕು ತಡೆಗಟ್ಟುವ ಕೇಂದ್ರದ ಮಾಗಸೂಚಿಗಳನ್ನು ಉಲ್ಲಂಘಿಸುವವರಿಗೆದಂಡ ವಿಧಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಕೂಡ ಮಾಸ್ಕ್ ಧರಿಸಿ ಓಡಾಡುವುದನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮಾಸ್ಕ್‌ ಕಡ್ಡಾಯಗೊಳಿಸಿ, ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶ ಹಾಗೂ ಪೊಲೀಸ್‌ ಇಲಾಖೆಗೆ ವಹಿಸಿದ್ದಾರೆ.

ದಂಡದ ಕಾರ್ಯಾಚರಣೆಗಾಗಿ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ನಿತ್ಯ ನಗರ ವ್ಯಾಪ್ತಿಯಲ್ಲಿ ಸಂಚರಿಸಲಿವೆ.

ಕೇಂದ್ರ ಸರ್ಕಾರ ನೀಡಿರುವ ಆದೇಶದಂತೆ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಪೌರಸಭೆಗಳ ಅಧಿನಿಯಮದ ಕಲಮು248 ಮತ್ತು 246 ಅಡಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

’ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ ₹ 100 ದಂಡ ವಿಧಿಸಲಾಗುವುದು. ಮತ್ತೆ ಅದೇ ವ್ಯಕ್ತಿ ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ ₹500, ಮೂರನೇ ಬಾರಿ ಪುನರಾವರ್ತನೆಯಾದರೆ ₹1,000 ದಂಡ ವಿಧಿಸಲಾಗುತ್ತದೆ‘ ಎಂದು ನಗರಸಭೆ ಆಯುಕ್ತ ಲೋಹಿತ್ ತಿಳಿಸಿದರು. 

’ಅಗತ್ಯ ವಸ್ತುಗಳ ಅಂಗಡಿ, ಔಷಧಿ ಅಂಗಡಿ, ಬೇಕರಿ ಇನ್ನಿತರ ಕಡೆ ಪರಸ್ಪರ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು. ಅಂಗಡಿ ಮಾಲೀಕರೇ ಗ್ರಾಹಕರಿಗೆ ಸ್ಯಾನಿಟೈಸರ್‌ ನೀಡಬೇಕು.ಇದರಲ್ಲಿ ವಿಫಲರಾದರೆ ಮಾಲೀಕರಿಗೂ ಮೊದಲ ಬಾರಿ ದಂಡ ವಿಧಿಸಲಾಗುತ್ತದೆ.  ಲೈಸೆನ್ಸ್‌ ರದ್ದು ಪಡಿಸಲು ಕ್ರಮಕೈಗೊಳ್ಳಲಾಗುತ್ತದೆ‘ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು