ಶಿಡ್ಲಘಟ್ಟ: ಶಾಲೆಯ ಪಾಠ, ಪರೀಕ್ಷೆಗಳಲ್ಲಿ ಮುಳುಗಿರಬೇಕಾಗಿದ್ದ ಮಕ್ಕಳಿಗೆ ಈಗ ಬಿಡುವೋ ಬಿಡುವು. ಶಿಡ್ಲಘಟ್ಟ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಮಕ್ಕಳು ಸ್ವತಃ ಉತ್ಸಾಹದಿಂದ ಬೀಸೋ ಕಲ್ಲಿನ ಪಾಠ ಕಲಿಯಲು ಮಂದಾಗಿದ್ದಾರೆ.
ಇಲ್ಲಿನ ಅಪ್ಪೇಗೌಡನಹಳ್ಳಿಯಲ್ಲಿ ಅಜ್ಜಿ ರಾಮಕ್ಕ ಅವರೆ ಕಾಳು ಹಾಕಿ ಕಲ್ಲು ಬೀಸುತ್ತಿದ್ದರೆ, ಪುಟಾಣಿಗಳಾದ ಕುಸುಮ, ನಿಖಿತ ಮತ್ತು ನವನೀತ್ ಕೂಡ ಅವರಿಂದಿಗೆ ಕೈಜೋಡಿಸಿದ್ದಾರೆ. ಉತ್ಸಾಹದಿಂದ ತಿರುಗಿಸಲು ಮುಂದಾದ ಮಕ್ಕಳಿಗೆ, ‘ನಿಧಾನವಾಗಿ ಇಲ್ಲಿ ಕಾಳು ಹಾಕಬೇಕು. ಈ ರೀತಿ ತಿರುಗಿಸಬೇಕು, ನೋಡಿ ಈಗ ಕಲ್ಲನ್ನು ಮೇಲೆತ್ತಬೇಕು’ ಎಂದು ಅಜ್ಜಿ ಸೂಕ್ಷ್ಮವಾಗಿ ಹೇಳಿಕೊಡುತ್ತಿದ್ದಾರೆ.
“ನೆತ್ತಿಯಲಿ ಉಂಬುವುದು: ಸುತ್ತಲೂ ಸುರಿಸುವುದು ಎತ್ತಿದರೆ ಎರಡು ಹೋಳಹುದು: ಉತ್ತಮರು ಇದಕುತ್ತರವ ಹೇಳಿ ಸರ್ವಜ್ಞ” ಎಂಬುದಾಗಿ ಬೀಸುವ ಕಲ್ಲಿನ ಬಗ್ಗೆ ಸರ್ವಜ್ಞ ತನ್ನ ಒಗಟಿನ ತ್ರಿಪದಿಯಲ್ಲಿ ತಿಳಿಸಿದ್ದಾರೆ. ಲೆಕ್ಕವಿಲ್ಲದಷ್ಟು ಜನಪದ ಹಾಡುಗಳ ಹುಟ್ಟಿಗೆ ಕಾರಣವಾಗಿರುವ ಈ ಬೀಸುಕಲ್ಲುಗಳ ಜಾಗದಲ್ಲಿ ಗಿರಣಿಗಳು, ಮಿಕ್ಸರ್, ಗ್ರೈಂಡರ್‌ಗಳು ಆಗಮಿಸಿವೆ
ಹಿಂದೆ ಪ್ರತಿ ಮನೆಯಲ್ಲಿಯೂ ಬೀಸುವ ಕಲ್ಲುಗಳಿರುತ್ತಿದ್ದವು. ರಾಗಿ, ಜೋಳ, ಅಕ್ಕಿ, ಭತ್ತ, ತೊಗರಿ ಮೊದಲಾದ ಧಾನ್ಯಗಳ ಹಿಟ್ಟು ತೆಗೆಯಲು, ಅದರಲ್ಲಿನ ಹೊಟ್ಟನ್ನು ಬೇರ್ಪಡಿಸಲು ವಿಧವಿಧ ವಿನ್ಯಾಸದ, ಗಾತ್ರದ ಬೀಸುವ ಕಲ್ಲುಗಳನ್ನು ಹಿಂದೆ ಬಳಸಲಾಗುತ್ತಿತ್ತು. ಇವುಗಳ ಮುಂದೆ ಕುಳಿತಾಗ ಮಹಿಳೆಯರ ಬಾಯಲ್ಲಿ ಬರುತ್ತಿದ್ದ ಜನಪದ ಹಾಡುಗಳು ‘ಬೀಸುವ ಪದ’ ಗಳಾಗಿ ಜನಪದ ಸಾಹಿತ್ಯದಲ್ಲಿ ಹೆಸರಾಗಿವೆ. ಆದರೆ ಕಾಲ ಉರುಳುತ್ತಿದ್ದಂತೆ ಬೀಸುವ ಕಲ್ಲುಗಳ ಮೇಲಿದ್ದ ಒಲವು ಮಿಕ್ಸಿ, ಗ್ರ್ಯಾಂಡರ್‌ನತ್ತ ಮಾರ್ಪಟ್ಟಿದೆ.
ಆಧುನಿಕ ತಂತ್ರಜ್ಞಾನಗಳಿಂದ ಕೆಲಸ ಸುಲಭ ಆಗಿರುವಾಗ ಬೀಸುವ ಕಲ್ಲಿನ ಗೊಡವೆ ಏಕೆ ಎಂದು ಅಜ್ಜಿ ರಾಮಕ್ಕ ಅವರನ್ನು ಕೇಳಿದರೆ, ‘ನಮ್ಮ ಆರೋಗ್ಯದ ಗುಟ್ಟು ಈ ಬೀಸುವ ಕಲ್ಲಿನಲ್ಲಿದೆ’ ಎನ್ನುತ್ತಾರೆ. ‘ಬೀಸುವ ಕಾರ್ಯದ ಮೂಲಕವೇ ಹಳ್ಳಿ ಹೆಣ್ಣುಮಕ್ಕಳು ಕೈಕಾಲುಗಳಿಗೆ ವ್ಯಾಯಾಮ ದೊರಕಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಬೀಸುವ ಪ್ರಕ್ರಿಯೆಯಿಂದ ಇಡೀ ಮೈಗೆ ವ್ಯಾಯಾಮ ಲಭಿಸುತ್ತಿತ್ತು. ಕೈಕಾಲು, ಹೊಟ್ಟೆಯ ಭಾಗಕ್ಕೆ ಸಾಕಷ್ಟು ವ್ಯಾಯಾಮ ಸಿಗುತ್ತಿತ್ತು. ಇದರಿಂದ ಬೊಜ್ಜು ಮಹಿಳೆಯರ ಬಳಿ ಸುಳಿಯುತ್ತಿರಲಿಲ್ಲ. ಕಲ್ಲು ಬೀಸುವಾಗ ಹಾಡುತ್ತ ಇರುವ ಕಾರಣ, ಉಸಿರಾಟದ ಕ್ರಿಯೆಯೂ ಸುಗಮವಾಗುತ್ತಿತ್ತು’ ಎಂದು ಅವರು ವಿವರಿಸಿದರು.
‘ನಮಗೆ ಬೀಸುವ ಕಲ್ಲು ಅತ್ಯಂತ ಪೂಜನೀಯ ವಸ್ತು. ಈಗಿನ ಪುಟ್ಟ ಮಕ್ಕಳು ಬೀಸುವುದನ್ನು ಕಲಿಯಲು ಉತ್ಸಾಹ ತೋರುತ್ತಿರುವುದನ್ನು ಕಂಡು ಖುಷಿಯಾಗುತ್ತದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. ಕುಟ್ಟಲಾರದವಳಿಗೆ ಕೂಳಿಲ್ಲ. ಬೀಸಲಾರದವಳಿಗೆ ಹಿಟ್ಟಿಲ್ಲ ಎಂಬ ಗಾದೆ ಮಾತಿದೆ’ ಎಂದು ರಾಮಕ್ಕ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.