ಗುರುವಾರ , ಜನವರಿ 28, 2021
25 °C

ದೇವಾಲಯಗಳಿಗೆ ಹರಿದು ಬಂದ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಹೊಸ ವರ್ಷದ ಆಚರಣೆಗಾಗಿ ಜನಸಾಮಾನ್ಯರು ಕೋವಿಡ್-19 ಕರಿನೆರಳಿನ ನಡುವೆಯೂ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಸಾಗರದೋಪಾದಿಯಲ್ಲಿ ತೆರಳಿ ದರ್ಶನ, ಪೂಜೆ ಮಾಡಿಸುತ್ತಿದ್ದ ದೃಶ್ಯ ಶುಕ್ರವಾರ ಎಲ್ಲೆಡೆ ಕಾಣುತ್ತಿತ್ತು.

ದೇವಾಲಯಗಳ ನಗರಿ ಕೈವಾರದಲ್ಲಿ ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಸದ್ಗುರು ಯೋಗಿನಾರೇಯಣ ಮಠದಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ತಳಿರು ತೋರಣ ಹಾಗೂ ಹೂಗಳಿಂದ ದೇವಾಲಯಗಳನ್ನು ಶೃಂಗರಿಸಲಾಗಿತ್ತು. ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಕೈವಾರಕ್ಕೆ ಜನಸಾಗರವೇ ಹರಿದು ಬಂದಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಹೊಸವರ್ಷದ ಮೊದನೆಯ ದಿನ ದೇವರ ದರ್ಶನ ಪಡೆದರು.

ಸದ್ಗುರು ಯೋಗಿನಾರೇಯಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಘಂಟನಾದ, ಸುಪ್ರಭಾತ, ಗೋಪೂಜೆ, ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು. ತಾತಯ್ಯನವರ ಜೀವ ಸಮಾಧಿಯ ಮೂಲ ಬೃಂದಾವನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಯೋಗಿನಾರೇಯಣ ಉತ್ಸವ ಮೂರ್ತಿಯನ್ನು ನಗರದ ಮುಖ್ಯ ರಸ್ತೆಗಳಲ್ಲಿ ಭಜನೆ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮಠದ ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂಜೆ ವಿಶೇಷ ಮಹಾಮಂಗಳಾರತಿ ನೆರವೇರಿಸಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಮಠದಿಂದ ವಿಶೇಷ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಆಲಂಬಗಿರಿ: ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯ ಆಲಂಬಗಿರಿಯ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹಾಕೈಲಾಸಗಿರಿ: ನಗರದ ಹೊರವಲಯದ ಅಂಬಾಜಿದುರ್ಗ ಬೆಟ್ಟದ ಪ್ರಕೃತಿಯ ಮಡಿಲಲ್ಲಿರುವ ಮಹಾಕೈಲಾಸಗಿರಿ ಕ್ಷೇತ್ರಕ್ಕೂ ಭಕ್ತ ಸಮೂಹ ಹರಿದು ಬಂದಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತರು ಆಗಮಿಸಿ ಶಿವನ ಧರ್ಶನ ಪಡೆದರು. ಮಹಾಕೈಲಾಸ ಗಿರಿಯಲ್ಲೂ ಹೊಸವರ್ಷದ ಅಂಗವಾಗಿ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ಅಷ್ಟಾವಧಾನ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ನಗರದ ಹೃದಯ ಭಾಗದಲ್ಲಿರುವ ವರದಾದ್ರಿ ಬೆಟ್ಟ, ನಾಗನಾಥೇಶ್ವರಸ್ವಾಮಿ ದೇವಾಲಯ, ಮುರುಗಮಲೆಯ ಮಕ್ತೀಶ್ವರಸ್ವಾಮಿ ದೇವಾಲಯ, ಬೂರಗಮಾಕಲಹಳ್ಳಿಯ ವೀರಾಂಜನೇಯಸ್ವಾಮಿ, ಕುರುಟಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯ
ಗಳಲ್ಲೂ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಜನಜಂಗುಳಿ ಅಧಿಕವಾಗಿತ್ತು. ಬಹುತೇಕ ಭಕ್ತರು ಮಾಸ್ಕ್ ಧರಿಸಿರುವುದು ಕಂಡುಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.