ಶುಕ್ರವಾರ, ಏಪ್ರಿಲ್ 16, 2021
23 °C
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ

ಹೊಸ ವರ್ಷಾಚರಣೆ: ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಟ ಪ್ರವಾಸಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹೊಸ ವರ್ಷದ ಮೊದಲ ದಿನವಾದ ಬುಧವಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಪ್ರಮುಖ ದೇವಾಲಯಗಳಲ್ಲಿ ಜನದಟ್ಟಣೆ ಕಂಡುಬಂತು. ಹೊಸ ವರ್ಷದ ಮೋಜಿಗಾಗಿ ಸಾವಿರಾರು ಜನರು ನಂದಿಬೆಟ್ಟಕ್ಕೆ ಲಗ್ಗೆ ಇಟ್ಟಿದ್ದರು.

ನಂದಿಬೆಟ್ಟದ ಮೇಲಿರುವ ಯೋಗ ನಂದೀಶ್ವರ, ಬೆಟ್ಟದ ತಪ್ಪಲಲ್ಲಿರುವ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ, ಸುಲ್ತಾನ್‌ಪೇಟೆ ಸಮೀಪದ ಕಣಿವೆ ಬಸವಣ್ಣ ದೇವಾಲಯ ಸೇರಿದಂತೆ ನಗರದ ಅನೇಕ ದೇವಾಲಯಗಳಲ್ಲಿ ಜನರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಗೋಚರಿಸಿತು.

ಹೊಸ ವರ್ಷಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ನಂದಿಬೆಟ್ಟ, ಸ್ಕಂದಗಿರಿ ಮತ್ತು ಗುಡಿಬಂಡೆಯ ಆವಲಬೆಟ್ಟಕ್ಕೆ ಡಿಸೆಂಬರ್ 31ರ ಸಂಜೆ 4 ರಿಂದ ಜನವರಿ 1ರ ಬೆಳಿಗ್ಗೆ 8ರ ವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು. ಜತೆಗೆ ಈ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲು ಚೆಕ್‌ ಪೋಸ್ಟ್‌ಗಳನ್ನು ತೆರೆದಿತ್ತು.

ಆದರೆ ಹೊಸ ಸಂವತ್ಸರದ ಸೂರ್ಯೋದಯ ನೋಡುವ ಕಾತುರದಿಂದ ನೂರಾರು ವಾಹನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹೀಗಾಗಿ 8 ಗಂಟೆ ವರೆಗೆ ಇದ್ದ ನಿರ್ಬಂಧವನ್ನು ಸಡಿಲಗೊಳಿಸಿ ಬೆಳಿಗ್ಗೆ 7ಕ್ಕೆ ಬೆಟ್ಟದ ಮೇಲೆ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಸಾವಿರಾರು ಜನರು, ವಾಹನಗಳಿಂದ ಬೆಟ್ಟದ ದಾರಿಯಲ್ಲಿ ಮಧ್ಯಾಹ್ನದ ನಂತರ ಕಾಣಿಸಿಕೊಂಡ ವಾಹನ ದಟ್ಟಣೆಗೆ ಸಾಕಷ್ಟು ಪ್ರವಾಸಿಗರು ಹೈರಾಣಾದರು.

ಹೊಸ ವರ್ಷಾಚರಣೆ ವೇಳೆ ನಡೆಯುವ ಅವಘಡಗಳನ್ನು ಹಾಗೂ ಅನೈತಿಕ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಮಂಗಳವಾರ ನಂದಿಬೆಟ್ಟದಲ್ಲಿ ಸುಮಾರು 50 ಕಾನ್‌ಸ್ಟೆಬಲ್‌ಗಳನ್ನು, ಸುಮಾರು 10 ಸಂಚಾರ ಪೊಲೀಸರನ್ನು ನಿಯೋಜಿಸಿತ್ತು. ಸಂಜೆ 6ರ ವರೆಗೆ ಪ್ರವಾಸಿಗರಿಗೆ ಬೆಟ್ಟದಲ್ಲಿರಲು ಅವಕಾಶ ನೀಡಲಾಗಿತ್ತು.

ಬೆಳಿಗ್ಗೆ ಕಡಿಮೆ ಸಂಖ್ಯೆಯಲ್ಲಿದ್ದ ಪ್ರವಾಸಿಗರ ಸಂಖ್ಯೆ ಮಧ್ಯಾಹ್ನವಾಗುತ್ತಿದ್ದಂತೆ ಹೆಚ್ಚುತ್ತ ಬಂತು. ಮಧ್ಯಾಹ್ನ ಮೂರೂವರೆ ಸುಮಾರಿಗೆ ಬೆಟ್ಟದ ದಾರಿಯಲ್ಲಿ ವಾಹನದಟ್ಟಣೆ ಕಾಣಿಸಿಕೊಂಡಿತು. ನೂರಾರು ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತು ನಿಧಾನಗತಿಯಲ್ಲಿ ಸಾಗಿದವು. ವಾಹನ ದಟ್ಟಣೆ ನಿರ್ವಹಿಸಲು ಸಂಚಾರ ಪೊಲೀಸರು ಸುಸ್ತಾಗಿ ಹೋದರು.

ಬಹುತೇಕ ಪ್ರವಾಸಿಗರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದಿದ್ದರು. ಹಸಿರು ಸಸ್ಯ ಶ್ಯಾಮಲೆಯ ಮಡಿಲಲ್ಲಿ ಆಹ್ಲಾದಕರ ವಾತಾವರಣದ ನಡುವೆ ಎಲ್ಲಿ ನೋಡಿದರಲ್ಲಿ ಸಂಭ್ರಮ ಮನೆ ಮಾಡಿತ್ತು. ದಂಡಿ ದಂಡಿಯಾಗಿ ಬಂದಿದ್ದ ಪ್ರೇಮಿಗಳಂತೂ ಎಲ್ಲೆಂದರಲ್ಲಿ ತಿರುಗಿ ಹೊಸ ವರ್ಷದ ಮೊದಲ ದಿನದ ಸಂಭ್ರಮವನ್ನು ಅವಿಸ್ಮರಣೀಯವಾಗಿಸಿಕೊಳ್ಳುವ ತವಕದಲ್ಲಿದ್ದರು.

ಕುಟುಂಬ ಸಮೇತರಾಗಿ ಬಂದವರೆಲ್ಲ ಮಕ್ಕಳೊಂದಿಗೆ ವಿವಿಧ ಬಗೆಯ ಮೋಜಿನಾಟಗಳನ್ನು ಆಡುವಲ್ಲಿ ತಲ್ಲಿನರಾಗಿದ್ದರು. ಅನೇಕ ಕಡೆಗಳಲ್ಲಿ ವನಭೋಜನದ ದೃಶ್ಯಗಳು ಕಂಡುಬಂದವು. ಪೊಲೀಸರ ದಂಡು ಬೆಟ್ಟದ ತುಂಬಾ ಪಹರೆ ಕೆಲಸ ನಡೆಸಿತ್ತು. ಪಡ್ಡೆ ಹುಡುಗರ ತುಂಟಾಟಗಳನ್ನು ಕಂಡು ಎಚ್ಚರಿಕೆ ನೀಡುತ್ತ ಯಾವುದೇ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು.

ಅಬಾಲ ವೃದ್ಧರಾದಿಯಾಗಿ ಮೊಬೈಲ್‌ ಹಿಡಿದು ಬಂದವರೆಲ್ಲ ಬೆಟ್ಟದ ಮೂಲೆ, ಮೂಲೆಗೆ ನುಗ್ಗಿ ವಿವಿಧ ಭಂಗಿಗಳಲ್ಲಿ ‘ಸೆಲ್ಫಿ’ಗೆ ಮುಖವೊಡ್ಡುತ್ತಿದ್ದ ಪರಿಯಂತೂ ನಗೆ ಉಕ್ಕಿಸುತ್ತಿತ್ತು. ಇನ್ನು ಅನೇಕರು ಆಪ್ತರೊಂದಿಗೆ ಕೇಕ್‌ಗಳನ್ನು ತಂದು ಬೆಟ್ಟದಲ್ಲಿ ಕತ್ತರಿಸಿ, ಬಾಯಿ ಸಿಹಿ ಮಾಡಿಕೊಂಡು ಹೊಸ ವರ್ಷವನ್ನು ಸಂಭ್ರಮಿಸಿದರು.

ಇನ್ನು ಬೆಟ್ಟದಲ್ಲಿರುವ ಕೋತಿಗಳ ಕಪಿಚೇಷ್ಟೆ ದೊಡ್ಡವರಿಗೆ ಪೀಕಲಾಟ ತಂದಿಡುತ್ತಿದ್ದರೆ, ಮಕ್ಕಳಿಗೆ, ಪುಟಾಣಿಗಳಿಗೆ ಮೋಜಿನ ಸಂಗತಿಯಾಗಿತ್ತು. ಪ್ರವಾಸಿಗರ ಕೈಯಲ್ಲಿನ ಆಹಾರ ಪೊಟ್ಟಣಗಳನ್ನು ಕಸಿಯಲು ವಾನರ ಸೇನೆ ನಡೆಸಿದ ಕಸರತ್ತು ಕೆಲವರಿಗೆ ಮನರಂಜನೆ ಒದಗಿಸಿತ್ತು. ಬೆಟ್ಟದ ಮೇಲಿರುವ ಬೆರಳೆಣಿಕೆ ಹೊಟೇಲ್, ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ಕಂಡುಬಂತು. ಬಿಸ್ಕಿಟ್, ಐಸ್‌ಕ್ರಿಂ, ಕುಡಿಯುವ ನೀರು, ಸೌಂತೆಕಾಯಿ, ಎಳೆನೀರು ವಹಿವಾಟು ಜೋರಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು