ಶನಿವಾರ, ನವೆಂಬರ್ 28, 2020
17 °C
ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರ ನೇತೃತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ

ಚಿಕ್ಕಬಳ್ಳಾಪುರ ಜಿ.ಪಂ. ಉಪಾಧ್ಯಕ್ಷೆ ನಿರ್ಮಲಾ ವಿರುದ್ಧ ಅವಿಶ್ವಾಸ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕಳೆದ ಕೆಲ ತಿಂಗಳಿಂದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಬಹುತೇಕ ಸದಸ್ಯರು ನಡೆಸಿದ ಪ್ರಯತ್ನ ಕೊನೆಗೂ ಕೈಗೂಡಿತು. ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಅವಿಶ್ವಾಸದ ಪರವಾಗಿ 25 ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಅಧಿಕಾರ ಹಂಚಿಕೆ ವಿಚಾರದಲ್ಲಿ ನಿರ್ಮಲಾ ಅವರು ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿಯ ಬಹುಪಾಲು ಸದಸ್ಯರು ಕಳೆದ ಮೇ ತಿಂಗಳಲ್ಲೇ ಅವರನ್ನು ಉಪಾಧ್ಯಕ್ಷೆ ಸ್ಥಾನದಿಂದ ಕೆಳಗಿಸಲು ಪಕ್ಷಾತೀತವಾಗಿ ಧ್ವನಿ ಎತ್ತಿದ್ದರು. ಮೇ ಮೊದಲ ವಾರದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಮನವಿ ಮಾಡಿದ್ದರು.

ಆ ಮನವಿಯ ಮೆರೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮೇ 20 ರಂದು ಅವಿಶ್ವಾಸ ಗೊತ್ತುವಳಿ ಸಭೆಯನ್ನೂ ನಿಗದಿಪಡಿಸಿದ್ದರು. ಆದರೆ, ಪಂಚಾಯತ್ ರಾಜ್ ಕಾಯ್ದೆಯ ಕೆಲ ಅಧಿನಿಯಮಗಳ ತಿದ್ದುಪಡಿಯಿಂದ ಉಂಟಾಗಿರುವ ಗೊಂದಲದ ಕಾರಣಕ್ಕೆ ಆ ಸಭೆ ಅಕ್ಟೋಬರ್ 9ಕ್ಕೆ  ಮುಂದೂಡಿಕೆಯಾಗಿತ್ತು. ಆ ಸಭೆ ಸಹ ನ್ಯಾಯಾಲಯದ ತಡೆಯಾಜ್ಞೆ ಕಾರಣಕ್ಕೆ ನವೆಂಬರ್ 5ಕ್ಕೆ ಮುಂದೂಡಿಕೆಯಾಗಿತ್ತು.

ಗುರುವಾರ ಬೆಳಿಗ್ಗೆ 11ಕ್ಕೆ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ 28 ಸದಸ್ಯರ ಪೈಕಿ ಪವಿತ್ರಾ ಚಂದ್ರಶೇಖರ್, ಗಾಯತ್ರಿ ನಂಜುಂಡಪ್ಪ ಅವರನ್ನು ಹೊರತುಪಡಿಸಿ ಉಳಿದೆಲ್ಲ ಸದಸ್ಯರು ಹಾಜರಿದ್ದರು. ಈ ಪೈಕಿ 25 ಸದಸ್ಯರು ಅವಿಶ್ವಾಸದ ಪರವಾಗಿ ಸಹಿ ಹಾಕಿದರು ಎನ್ನಲಾಗಿದೆ.

ಎರಡು ಬಾರಿ ತಾತ್ಕಾಲಿಕವಾಗಿ ಉಪಾಧ್ಯಕ್ಷೆ ಹುದ್ದೆಯಿಂದ ತಿರಸ್ಕೃತಗೊಳ್ಳುವ ತೂಗುಗತ್ತಿಯಿಂದ ಬಚಾವಾಗಿ ಕಳೆದ ಆರು ತಿಂಗಳಿಂದ ನಿರಾಳವಾಗಿದ್ದ ನಿರ್ಮಲಾ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಸುವಲ್ಲಿ ಸದಸ್ಯರು ಕೊನೆಗೂ ಮೇಲುಗೈ ಸಾಧಿಸಿದ್ದಾರೆ.

ಆರಂಭದಲ್ಲಿಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಂತೆ ನಿರ್ಮಲಾ ಅವರು ಎರಡೂವರೆ ವರ್ಷ ಅಧಿಕಾರದಲ್ಲಿದ್ದು, ಉಳಿದ ಅವಧಿಯನ್ನು ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಕ್ಷೇತ್ರದ ಸದಸ್ಯೆ ಸರಸ್ವಮ್ಮ ಅಶ್ವತ್ಥನಾರಾಯಣಗೌಡ ಅವರಿಗೆ ಬಿಟ್ಟು ಕೊಡಬೇಕಿತ್ತು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕುರ್ಚಿಗೆ ಅಂಟಿಕೊಂಡಿದ್ದರು ಎನ್ನುವುದು ಅನೇಕ ಸದಸ್ಯರ ಆರೋಪ.

ಆದರೆ, ಇದನ್ನು ಅಲ್ಲಗಳೆಯುತ್ತ ಬಂದಿದ್ದ ನಿರ್ಮಲಾ ಅವರು, ‘ಉಪಾಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಮಾಡಿದ್ದರು ಎನ್ನುವುದೇ ಶುದ್ಧ ಸುಳ್ಳು’ ಎಂದಿದ್ದರು. ಜತೆಗೆ, ಉಪಾಧ್ಯಕ್ಷೆ ಸ್ಥಾನ ಸರಸ್ವತಮ್ಮ ಅವರಿಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್, ಸಚಿವ ಡಾ.ಕೆ.ಸುಧಾಕರ್, ಅನೇಕ ಶಾಸಕರು ಹೇಳಿದರೂ ನಿರ್ಮಲಾ ಅವರು ಸೊಪ್ಪು ಹಾಕದೆ, ಸ್ವಪಕ್ಷೀಯರೇ ಸೆಡ್ಡು ಹೊಡೆದು ಅಧಿಕಾರದಲ್ಲಿ ಮುಂದುವರಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು