ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಬಂಡವಾಳ: ಸೋತ ಚಿಕ್ಕಬಳ್ಳಾಪುರ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಜಿಲ್ಲೆ
Last Updated 26 ಮೇ 2022, 5:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಮುದ್ರದ ನಂಟಸ್ತನ ಉಪ್ಪಿಗೆ ಬಡತನ’–ಈ ಗಾದೆ ಮಾತು ವಿದೇಶಿ ಬಂಡವಾಳ ಹೂಡಿಕೆ ಮತ್ತು ಆಕರ್ಷಣೆ ವಿಚಾರದಲ್ಲಿಚಿಕ್ಕಬಳ್ಳಾಪುರಕ್ಕೆ ಅನ್ವಯಿಸುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಸಮೀಪವೇ ಇದೆ.

ಹೀಗಿದ್ದರೂ ವಿದೇಶಿ ಬಂಡವಾಳ ಹೂಡಿಕೆಯ ವಿಚಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ಇಂದಿಗೂ ಪ್ರಾಶಸ್ತ್ಯ ದೊರೆತಿಲ್ಲ. ವಿದೇಶಿ ಬಂಡವಾಳ ಹೂಡಿಕೆ ವಿಚಾರವು ರಾಜ್ಯ ಸರ್ಕಾರ ಮಟ್ಟದ ವಿಚಾರ.ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು‌ ವಿದೇಶಿ ಬಂಡವಾಳ ಹೂಡಿಕೆ ಕುರಿತು ನಿರ್ಧಾರಗಳನ್ನು ಕೈಗೊಳ್ಳುತ್ತದೆ. ವಿಮಾನ ನಿಲ್ದಾಣಕ್ಕೆ ಹತ್ತಿರವಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ರಾಜ್ಯ ಸರ್ಕಾರವೂ ನಿರಾಸಕ್ತಿ ತಾಳಿದೆ ಎನ್ನುವ ಅನುಮಾನಗಳು ನಾಗರಿಕರಲ್ಲಿದೆ.

ವಿದೇಶಿ ಸಂಸ್ಥೆಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳಿಗೆ ಸಮೀಪ, ಮೂಲಸೌಲಭ್ಯಗಳು ದೊರೆಯುವ ಕಡೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿವಹಿಸುತ್ತವೆ. ಇಂತಹ ಕಡೆಗಳಲ್ಲಿ ಸರ್ಕಾರಗಳು ಸಹ ಹೂಡಿಕೆದಾರರಿಗೆ ರತ್ನಗಂಬಳಿ ಹಾಸುತ್ತವೆ. ದೇವನಹಳ್ಳಿ ಬಳಿಯ ಹರಳೂರು ಕೈಗಾರಿಕಾ ಪ್ರದೇಶ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು ಇಲ್ಲಿ ವಿದೇಶಿ ಕಂಪನಿಗಳು ಘಟಕಗಳನ್ನು ಹೊಂದಿವೆ. ಆದರೆ ನೆರೆಯ ಚಿಕ್ಕಬಳ್ಳಾಪುರವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಸೋತಿದೆ.

ಹೂಡಿಕೆಯಿಂದ ಸಹಜವಾಗಿ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಉತ್ತೇಜನಗೊಳ್ಳುತ್ತದೆ. ಸ್ಥಳೀಯರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಅವಕಾಶಗಳು ದೊರೆಯುತ್ತವೆ.

ಗಮನ ನೀಡಿದ ಸರ್ಕಾರ:ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅನುಕೂಲ ಆಗುವಂತೆ ನೋಡಲ್ ಏಜೆನ್ಸಿಯಾಗಿ ‘ಕರ್ನಾಟಕ ಉದ್ಯೋಗ ಮಿತ್ರ’ ಕೆಲಸ ಮಾಡುತ್ತಿದೆ. ಹೂಡಿಕೆಯ ಪ್ರಸ್ತಾವ ಹಂತದಿಂದ ಯೋಜನೆಯ ಅನುಷ್ಠಾನ ಮತ್ತು ಉಪಕ್ರಮಗಳನ್ನು ಜಾರಿಗೆ ತರುವುದು ಉದ್ಯೋಗ ಮಿತ್ರದ ಕೆಲಸ.

ಜಿಲ್ಲೆಯಲ್ಲಿ ಹೂಡಿಕೆಯ ಅವಕಾಶಗಳನ್ನು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಜಾಗ ದೊರಕಿಸಿಕೊಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಮನವಹಿಸುತ್ತಿಲ್ಲ ಎನ್ನುವ ಆರೋಪಗಳು ಸಹ ಇವೆ.

ಪ್ರತಿ ವರ್ಷ ದಾವೋಸ್‌ನಲ್ಲಿ ನಡೆಯುವವಿಶ್ವ ಆರ್ಥಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರು ಪಾಲ್ಗೊಳ್ಳುವರು. ಈ ಬಾರಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಹೂಡಿಕೆ ವಿಚಾರವಾಗಿ ವಿವಿಧ ಕಂಪನಿಗಳ ಜತೆ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ.

ದೇವನಹಳ್ಳಿಯ ಬಳಿ 10 ಎಕರೆಯಲ್ಲಿ ಜ್ಯುಬಿಲಿಯಂಟ್ ಬಯೋಸಿಸ್ ನೂತನವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದೆ. ತುಮಕೂರು, ಹುಬ್ಬಳ್ಳಿ, ಧಾರವಾಡ ಮತ್ತು ಮೈಸೂರಿನಲ್ಲಿ ಹೂಡಿಕೆ ಮಾಡುವ ಬಗ್ಗೆ ಸೀನನ್ಸ್ ಸಂಸ್ಥೆ ಅಧಿಕಾರಿಗಳು ಈ ಸಮ್ಮೇಳನದಲ್ಲಿ ಮಾತುಕತೆ ನಡೆಸಿದ್ದಾರೆ. ಯಥಾ ಪ್ರಕಾರ ಬೆಂಗಳೂರಿಗೆ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿದ್ದರೂ ಚಿಕ್ಕಬಳ್ಳಾಪುರ ಮಾತ್ರ ಹೂಡಿಕೆ ಆಕರ್ಷಣೆಯಲ್ಲಿ ವಿಫಲವಾಗಿದೆ.

ದೊರೆಯದ ಭೂಮಿ
ಕೊರಿಯಾ ಮೂಲದ ‘ಹುನೆಟ್’ ಕಂಪನಿ ಬಾಗೇಪಲ್ಲಿ ಬಳಿ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಸ್ಕೂಟರ್‌ಗಳ ಉತ್ಪಾದನಾ ಘಟಕವನ್ನು ಹೊಂದಲು ಆಸಕ್ತಿ ಹೊಂದಿತ್ತು. ಸರ್ಕಾರದ ಮಟ್ಟದಲ್ಲಿ ಕಂಪನಿಯು ಮಾತುಕತೆ ಸಹ ನಡೆಸಿತ್ತು. ಘಟಕ ನಿರ್ಮಾಣಕ್ಕೆ 200 ಎಕರೆ ಜಮೀನು ಅಗತ್ಯವಿದೆ. ಆದರೆ ಬಾಗೇಪಲ್ಲಿಯಲ್ಲಿ ಇಂದಿಗೂ ಜಮೀನು ದೊರೆಯುತ್ತಿಲ್ಲ.

ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಅವರು ನೆರೆಯ ಬಾಗೇಪಲ್ಲಿಯಲ್ಲಿ ತಮ್ಮ ನೆಲೆ ವಿಸ್ತರಿಸಲು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಆದರೆ ಈ ಯೋಜನೆಯೂ ಕಾರ್ಯಗತವಾಗಿಲ್ಲ.

ನೆರೆಯ ಜಿಲ್ಲೆಗಳಲ್ಲಿ ಬೃಹತ್ ಹೂಡಿಕೆ
ಚಿಕ್ಕಬಳ್ಳಾಪುರದ ನೆರೆಯ ಜಿಲ್ಲೆಗಳಾದ ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ವಿದೇಶಿ ಕಂಪನಿಗಳು ದೊಡ್ಡ ಮಟ್ಟದಲ್ಲಿಯೇ ಹೂಡಿಕೆ ಮಾಡಿವೆ. ಮುಂಬೈ–ಚೆನ್ನೈ ಕೈಗಾರಿಕಾ ಕಾರಿಡಾರ್‌ನಲ್ಲಿ ಬರುವ ತುಮಕೂರು ಜಿಲ್ಲೆಯ ವಸಂತ ನರಸಾಪುರ ಮತ್ತು ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT