ಶುಕ್ರವಾರ, ಜನವರಿ 24, 2020
21 °C

ಚಿಕ್ಕಬಳ್ಳಾಪುರ: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ಭಾನುವಾರ ರಾತ್ರಿ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ನಗರದಲ್ಲಿ ಸೋಮವಾರ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‌ಯುಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಎನ್‍ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ‘ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯಲ್ಲಿ ಎಬಿವಿಪಿ ಮೂಲಕ ಅದರ ಮಾತೃಸಂಸ್ಥೆ ಸಂಘ ಪರಿವಾರವು ಗೂಂಡಾಗಿರಿಗೆ ಪ್ರಚೋದನೆ ನಡೆಸುವ ಮೂಲಕ ಗೂಂಡಾ ಸಂಸ್ಕೃತಿಯನ್ನು ಬಿತ್ತುತ್ತಿದೆ. ಈ ಪ್ರಕರಣದ ಬಗ್ಗೆ ಕೂಡಲೇ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ಎಬಿವಿಪಿಯ ಗೂಂಡಾ ಸಂಸ್ಕೃತಿ ಕೊನೆಯಾಗಬೇಕು’ ಎಂದು ಹೇಳಿದರು.

‘ಜೆಎನ್‌ಯು ವಿದ್ಯಾರ್ಥಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಎಬಿವಿಪಿ ಸಂಘಟನೆಯ ಕಾರ್ಯಕರ್ತರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದಿದ್ದರೂ ದೆಹಲಿ ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಇದನ್ನು ಗಮನಿಸಿದಾಗ ಇದೊಂದು ಕೇಂದ್ರ ಸರ್ಕಾರದ ಪೂರ್ವಯೋಜಿತ ಸಂಚು ಎಂಬ ಸಂಶಯ ವ್ಯಕ್ತವಾಗುತ್ತದೆ’ ಎಂದು ತಿಳಿಸಿದರು.

‘ಜೆಎನ್‌ಯು ವಿದ್ಯಾರ್ಥಿಗಳು ಎಲ್ಲ ಅಡೆತಡೆಗಳನ್ನು ಮೀರಿ ಎರಡು ತಿಂಗಳಿನಿಂದ ಶುಲ್ಕ ಹೆಚ್ಚಳ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ. ಆಡಳಿತ ವರ್ಗದ ಸಹಕಾರದೊಂದಿಗೆ ಕೋಮುವಾದಿ ಎಬಿವಿಪಿ ನಡೆಸಿದ ಈ ದಾಳಿಯು ಆಡಳಿತವರ್ಗದ ಹೊಣೆಗೇಡಿತನವನ್ನು ತೋರಿಸುತ್ತದೆ. ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ದಿಕ್ಕು ತಪ್ಪಿಸಲು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಯ ಮೂಡಿಸಲು ಜೆಎನ್‌ಯು ಆಡಳಿತ ವರ್ಗ ಮತ್ತು ಎಬಿವಿಪಿ ಈ ಕುತಂತ್ರವನ್ನು ಹೆಣೆದಿವೆ’ ಎಂದು ಆರೋಪಿಸಿದರು.

‘ಕಿಡಿಗೇಡಿಗಳ ದಾಳಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಶಿಕ್ಷಕರು ಕೂಡ ಹಲ್ಲೆಗೆ ಒಳಗಾಗಿದ್ದಾರೆ. ವಿ.ವಿ.ಯ ಆಸ್ತಿಯನ್ನೂ ಹಾಳು ಮಾಡಲಾಗಿದೆ. ದೆಹಲಿ ಪೊಲೀಸರು ಮೂಕ ಪ್ರೇಕ್ಷಕರಾಗುವ ಮೂಲಕ ಈ ದುಷ್ಕೃತ್ಯಕ್ಕೆ ಸಹಕಾರ ನೀಡಿರುವುದು ಖಂಡನೀಯ’ ಎಂದರು.

‘ದೆಹಲಿಯ ಕಾನೂನು ಸುವ್ಯವಸ್ಥೆ ಯ ಜವಾಬ್ದಾರಿ ಹೊಂದಿರುವ ಕೇಂದ್ರ ಗೃಹ ಇಲಾಖೆ ಇದಕ್ಕೆ ಉತ್ತರ ಕೊಡಬೇಕು. ಗೂಂಡಾಗಿರಿ ನಡೆಸಿದವರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು. ವಿಶ್ವವಿದ್ಯಾಲಯದ ಕುಲಪತಿ ಈ ಕೃತ್ಯಕ್ಕೆ ಹೊಣೆ ಹೊರಬೇಕು’ ಎಂದು ಹೇಳಿದರು.

ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಆಯುಷ್, ನಂದೀಶ್‌, ರೂಪಾ, ನೇತ್ರಾ, ಮನೋಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು