ಮಂಗಳವಾರ, ಜೂನ್ 28, 2022
26 °C

ಖಾಸಗಿ ಉಪನ್ಯಾಸಕರಿಗೆ ಪ್ಯಾಕೇಜ್‌: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ರಾಜ್ಯದ ಎಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ನೀಡಿರುವ ₹5 ಸಾವಿರ ಪ್ಯಾಕೇಜ್‌ನಂತೆ ಎಲ್ಲಾ ಖಾಸಗಿ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರಿಗೆ ₹10 ಸಾವಿರ ವಿಶೇಷ ಪ್ಯಾಕೇಜ್ ಸರ್ಕಾರ ಘೋಷಣೆ ಮಾಡಬೇಕು’ ಎಂದು ಪಟ್ಟಣದ ವಿಕಾಸ ಪದವಿ ಕಾಲೇಜಿನ ಅಧ್ಯಕ್ಷ ಪಿ.ಎನ್.ಶಿವಣ್ಣ ಒತ್ತಾಯಿಸಿದರು.

ಪಟ್ಟಣದ ವಿಕಾಸ ಪದವಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಕಾಲೇಜಿನ ಉಪನ್ಯಾಸಕರಿಗೆ, ಸಿಬ್ಬಂದಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

‘ಸರ್ಕಾರ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಿದೆ. ಆದರೆ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸಹ ಪರೀಕ್ಷೆಯನ್ನು ರದ್ದು ಮಾಡಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದು ಮಾಡಬೇಕು. ತರಗತಿಗಳು ನಡೆದಿಲ್ಲ. ಆನ್‌ಲೈನ್‌ನಲ್ಲಿ ಬೋಧಿಸಿರುವ ಪಠ್ಯಗಳು ಕೆಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಥವಾಗಿಲ್ಲ. ಇದರಿಂದ ಪರೀಕ್ಷೆಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ರದ್ದು ಮಾಡಬೇಕು. ವಿದ್ಯಾರ್ಥಿವೇತನ ವಿತರಿಸಬೇಕು. ಪಠ್ಯ ಚಟುವಟಿಕೆಗಳು ಸಮರ್ಪಕವಾಗಿ ಆಗಿಲ್ಲ’ ಎಂದು ತಿಳಿಸಿದರು.

‘ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ವ್ಯವಸ್ಥೆ ಮಾಡಲು ಸರ್ಕಾರ ಹೊರಟಿದೆ. ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಿ, ಗ್ರೇಡಿಂಗ್ ಮಾರ್ಗಸೂಚಿಯನ್ನು ಪುನಃ ಪರಿಶೀಲಿಸಿ, ಕೆಲ ಮಾರ್ಪಾಡುಗಳನ್ನು ಮಾಡಬೇಕು. ಪಿಯುಸಿ, ಪದವಿ, ಉನ್ನತ ವ್ಯಾಸಂಗ ಪಡೆಯುತ್ತಿರುವ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಣೆ ಮಾಡಬೇಕು’ ಎಂದು ಮನವಿ ಮಾಡಿದರು.

ನಿಂದನೆ, ಕಾನೂನು ಕ್ರಮದ ಎಚ್ಚರಿಕೆ: ಸಬ್ ಇನ್‌ಸ್ಪೆಕ್ಟರ್‌ ಆರ್.ಗೋಪಾಲರೆಡ್ಡಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಪಡೆ ಅಧಿಕಾರಿಗಳು, ಸಿಬ್ಬಂದಿ ಕೊರೊನಾ ನಿಯಂತ್ರಣ ಮಾಡಲು ಹಗಲು-ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ ನಾರಾಯಣಸ್ವಾಮಿಕೋಟೆ, ಕೊಲಿಂಪಲ್ಲಿ ಗ್ರಾಮದಲ್ಲಿ ಕೋವಿಡ್ ಕೊರೊನಾ ವಾರಿಯರ್ಸ್ ಅವರನ್ನು ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆ ಮಾಡಿರುವವರನ್ನು ಕಾನೂನು ಕ್ರಮ ತೆಗೆದುಕೊಂಡು, ಜೈಲಿಗೆ ಕಳುಹಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಜಾಗೃತಿ ಮೂಡಿಸಲು ಬಂದಾಗ, ಕೆಲವರು ಕಿಡಿಗೇಡಿಗಳು ವಾರಿಯರ್ಸ್ ಅವರನ್ನು ವಿನಾಃಕಾರಣ ನಿಂದಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಡಿ.ವಿ.ದಿವಾಕರ್, ಹಿರಿಯರಾದ ಚಂದ್ರಪ್ಪ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್.ನಾರಾಯಣಸ್ವಾಮಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಬಿ.ಕೆ.ಗಿರೀಶ್ ಬಾಬು, ಕಾಲೇಜಿನ ಉಪನ್ಯಾಸಕರಾದ ವೈ.ಆರ್.ಬೈಯಪರೆಡ್ಡಿ, ಟಿ.ಎನ್.ರವಿ, ವೆಂಕಟಸ್ವಾಮಿ, ಸುಕೇಶ್, ರಿಜ್ವಾನ್ ಭಾಷ, ಬಿ.ಸಿ.ವೆಂಕಟರವಣ, ಗಂಗರಾಜು, ಮೈನುದ್ದೀನ್, ಉಷಾರಾಣಿ, ಮಾನಸ, ವೆಂಕಟರತ್ನ, ರುಕೀಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು