ಶಿಡ್ಲಘಟ್ಟ: ತಾಲ್ಲೂಕಿನ ಆನೂರು ಹಾಗೂ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ದಿಢೀರ್ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಅಧಿಕಾರಿಗಳ ಜತೆ ಸಂವಾದ ನಡೆಸಿದ ಅವರು ತಾಂತ್ರಿಕವಾಗಿ ಬಳಸುವ ಕ್ಲ್ಯಾಟ್ ಆ್ಯಪ್ ಬಳಕೆ ವಿಧಾನ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನೈಸರ್ಗಿಕ ಮತ್ತು ಪ್ರಾಯೋಜಿತವಾಗಿ ಯಾವ ರೀತಿ ಪಂಚಾಯಿತಿ ಅಭಿವೃದ್ಧಿ ಮಾಡಬಹುದು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದರು.
ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನಾಟಿ ಮಾಡಿರುವ ಸ್ಧಳ ಸೇರಿದಂತೆ ಹಿತ್ತಲಹಳ್ಳಿ ಹಾಗೂ ಬೆಳ್ಳೂಟಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿದರು.
ಆನೂರು ಗ್ರಾಮ ಪಂಚಾಯಿತಿ ಹಿತ್ತಲಹಳ್ಳಿಯಲ್ಲಿ ನಿರ್ಮಿಸಿರುವ ಪರಿಸರ ಸ್ನೇಹಿ ಶುದ್ಧ ನೀರಿನ ಘಟಕದಿಂದ ಹೊರಹೋಗುವ ತ್ಯಾಜ್ಯ ನೀರು ಪಕ್ಕದ ತೊಟ್ಟಿಯಲ್ಲಿ ಸಂಗ್ರಹಿಸಿ ಗ್ರಾಮಸ್ಥರು ಮತ್ತು ಎರಡು ದೇವಾಲಯಗಳಿಗಾಗಿ ಬಳಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಕಡೆ ಶುದ್ಧ ನೀರಿನ ಘಟಕಗಳ ಹತ್ತಿರ ಈ ರೀತಿ ತೊಟ್ಟಿ ಕಟ್ಟುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಸರ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಎಫ್ಇಎಸ್ ಸಂಸ್ಥೆಯವರ ಹೊಂದಾಣಿಕೆಯಿಂದ ಗ್ರಾಮಗಳ ಅಭಿವೃದ್ಧಿ ವಿಧಾನಗಳ ಬಗ್ಗೆ ಚರ್ಚಿಸಲಾಯಿತು. ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಬಳಿ ಇರುವ ಬೂದು ನೀರು ನಿರ್ವಹಣೆ ಕಾಮಗಾರಿ ವೀಕ್ಷಿಸಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಇಒ ಜಿ. ಮುನಿರಾಜ, ಆನೂರು ಪಂಚಾಯಿತಿ ಅಧ್ಯಕ್ಷ ಎಚ್.ಆರ್.ವೆಂಕಟೇಶ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ವಿಜಯೇಂದ್ರ, ವಿಶ್ವಾಸ್, ಸಂತೋಷ್, ಪ್ರಕಾಶ್, ಪಿಡಿಒ ಕಾತ್ಯಾಯಿನಿ, ಎಫ್ಇಎಸ್ ಸಂಸ್ಥೆಯ ರಮೇಶ್, ಮಳ್ಳೂರು ಪಂಚಾಯಿತಿ ಪಿಡಿಒ ಕೃಷ್ಣಪ್ಪ, ತಾಂತ್ರಿಕ ಸಿಬ್ಬಂದಿ, ನರೇಗಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.