ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಾಸ್ಕ್‌ ಧರಿಸದಿದ್ದರೆ ಬೀಳುತ್ತೆ ದಂಡ

ಕಾನೂನು ಉಲ್ಲಂಘಿಸಿ ಬೇಜವಾಬ್ದಾರಿತನ ತೋರುವವರಿಗೆ ದಂಡ ವಿಧಿಸಲು ಮುಂದಾದ ನಗರಸಭೆ
Last Updated 26 ಸೆಪ್ಟೆಂಬರ್ 2020, 15:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಕೋವಿಡ್‌ 19 ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ನಗರಸಭೆ, ಕಾನೂನು ಉಲ್ಲಂಘಿಸಿ ಬೇಜವಾಬ್ದಾರಿತನ ತೋರುವವರಿಗೆ ದಂಡ ವಿಧಿಸುವುದನ್ನು ಪುನಃ ಆರಂಭಿಸಿದೆ.

ನಗರದಲ್ಲಿ ಮೇ ತಿಂಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾದ ಬೆನ್ನಲ್ಲೇ ನಗರಸಭೆಯ ಸಿಬ್ಬಂದಿ ಜೂನ್‌ನಲ್ಲಿ ದಂಡ ವಿಧಿಸುವ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಬಳಿಕ ಪರಿಸ್ಥಿತಿ ಹತೋಟಿಗೆ ಬಂದ ಕಾರಣಕ್ಕೆ ದಂಡದ ಪ್ರಯೋಗ ಸಡಿಲಗೊಳಿಸಿದ್ದರು.

ಆದರೆ, ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣಕ್ಕೆ ಮಾಸ್ಕ್‌ ಧರಿಸದೆ ತಿರುಗಾಡುವವರು, ಅಂತರ ಕಾಯ್ದುಕೊಳ್ಳದಿರುವುದು ಸೇರಿದಂತೆ ಕೊರೊನಾ ಸೋಂಕು ತಡೆಗಟ್ಟುವ ಮಾಗಸೂಚಿಗಳನ್ನು ಉಲ್ಲಂಘಿಸುವವರಿಗೆ ನಗರಸಭೆ ದಂಡದ ಬಿಸಿ ತೋರಿಸುತ್ತಿದೆ.

ದಂಡದ ಕಾರ್ಯಾಚರಣೆಗಾಗಿ ನಗರಸಭೆ ಸಿಬ್ಬಂದಿಗಳ ತಂಡಗಳನ್ನು ರಚನೆ ಮಾಡಲಾಗಿದ್ದು, ಈ ತಂಡಗಳು ನಿತ್ಯ ನಗರ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಕಳೆದ ಎರಡು ದಿನಗಳಲ್ಲಿ ನಗರಸಭೆ ಸಿಬ್ಬಂದಿ ನಗರದಲ್ಲಿ ಬೇಜಬ್ದಾರಿ ತೋರಿದವರಿಂದ ₹19 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ನೀಡಿರುವ ಆದೇಶದಂತೆ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಪೌರಸಭೆಗಳ ಅಧಿನಿಯಮದ ಕಲಮು248 ಮತ್ತು 246 ಅಡಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

‘ಇತ್ತೀಚೆಗೆ ಪುನಃ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ನಾಗರಿಕರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ. ಮನೆಯಿಂದ ಹೊರಗೆ ಹೋಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌, ಕೈಗಳಿಗೆ ಕೈಗವಸು ಧರಿಸಬೇಕು. ಮನೆಗೆ ವಾಪಾಸ್‌ ಆದಾಗ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ಒಳಗೆ ಹೋಗಬೇಕು. ಇದನ್ನು ನಿರ್ಲಕ್ಷಿಸಿದರೆ ಖಂಡಿತ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ’ ಎಂದು ನಗರಸಭೆ ಆಯುಕ್ತ ಲೋಹಿತ್ ತಿಳಿಸಿದರು.

‘ಅಗತ್ಯ ವಸ್ತುಗಳ ಅಂಗಡಿ, ಔಷಧಿ ಅಂಗಡಿ, ಬೇಕರಿ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಕೂಡ ಪರಸ್ಪರ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು. ಅಂಗಡಿ ಮಾಲೀಕರೇ ಗ್ರಾಹಕರಿಗೆ ಸ್ಯಾನಿಟೈಸರ್‌ ಒದಗಿಸಬೇಕು. ಇಲ್ಲದಿದ್ದೆ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಆಗಲೂ ತಪ್ಪು ತಿದ್ದಿಕೊಳ್ಳದಿದ್ದರೆ ಪರವಾನಗಿ ರದ್ದುಪಡಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT