ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣ; ತೆರೆಮರೆಗೆ ಸರಿದ ಮುಖಗಳು

ವಿಧಾನಸಭೆ, ಲೋಕಸಭೆ ಚುನಾವಣೆ; ರಾಜಕಾರಣದಲ್ಲಿ ಮಿಂಚಿದ್ದವರು ಈಗ ನೇಪಥ್ಯಕ್ಕೆ
ಡಿ.ಎಂ.ಕುರ್ಕೆ ಪ್ರಶಾಂತ್
Published 9 ಜುಲೈ 2024, 7:48 IST
Last Updated 9 ಜುಲೈ 2024, 7:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದು ಸಮಯದಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಮಿನುಗಿದ್ದ ರಾಜಕಾರಣಿಗಳು ಈಗ ಜಿಲ್ಲೆಗೆ ಅಪರೂಪದ ಅತಿಥಿ! ಕೆಲವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದರೆ, ಮತ್ತಷ್ಟು ಮಂದಿ ವಿದಾಯ ಹೇಳದಿದ್ದರೂ ಸಕ್ರಿಯವಾಗಿಲ್ಲ. 

ಹೀಗೆ ಒಂದು ಲೋಕಸಭೆ, ಒಂದು ವಿಧಾನಸಭೆ ಚುನಾವಣೆಯು ಜಿಲ್ಲೆಯ ರಾಜಕಾರಣದಲ್ಲಿ ನಾನಾ ಪಲ್ಲಟಗಳಿಗೆ ಕಾರಣವಾಗಿದೆ. ಕೆಲವು ನಾಯಕರನ್ನು ನೇಪಥ್ಯಕ್ಕೆ ಸರಿಸಿದೆ. ಕೆಲವು ನಾಯಕರು ಕ್ಷೇತ್ರದಿಂದಲೂ ದೂರವಾಗಿದ್ದಾರೆ. 

ಚಿಕ್ಕಬಳ್ಳಾಪುರ, ಕೋಲಾರ ಸ್ಥಳೀಯ ಸಂಸ್ಥೆಗಳಿಂದ ಗೆಲುವು ಸಾಧಿಸಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಆರ್.ಮನೋಹರ್ ಜಿಲ್ಲೆಯ ರಾಜಕಾರಣದಿಂದ ಪೂರ್ಣವಾಗಿ ದೂರವಾಗಿದ್ದಾರೆ. 

2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿ.ಆರ್.ಮನೋಹರ್ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. 1,86,075 ಮತಗಳನ್ನು ಪಡೆದಿದ್ದರು. ನಂತರ ಕೋಲಾರ, ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಪರಿಷತ್ ಪ್ರವೇಶಿಸಿದರು. 

ಆದರೆ ನಂತರ ದಿನಗಳಲ್ಲಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡರು. ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಲಿಜ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ವಾದಗಳು ಜೋರಾಗಿದ್ದವು. ಆ ಸಮಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಲಿಜ ಸಮುದಾಯದ ಮುಖಂಡರ ನಿಯೋಗ ಮನೋಹರ್ ಅವರನ್ನು ಭೇಟಿ ಮಾಡಿತ್ತು. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವಂತೆ ಕೋರಿತ್ತು. ಆದರೆ ಅವರು ಆ ಕೋರಿಕೆ ತಿರಸ್ಕರಿಸಿದ್ದರು.

ಸಮುದಾಯದ ಬಲದ ಕಾರಣಕ್ಕೆ ಸಿ.ಆರ್.ಮನೋಹರ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜಕಾರಣ ಮಾಡಲು ಉತ್ತಮ ಅವಕಾಶಗಳು ಇದ್ದವು. ಆದರೆ ಅವರು ಎರಡು ವರ್ಷಗಳಿಂದಲೂ ಜಿಲ್ಲೆಯ ರಾಜಕಾರಣದಿಂದ ದೂರವೇ ಇದ್ದಾರೆ. 

ಮಾಜಿ ಸಂಸದರ ಯುಗಾಂತ್ಯ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಘಟಾನುಘಟಿ ನಾಯಕರು ಎನಿಸಿದ್ದವರು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಮತ್ತು ಬಿ.ಎನ್.ಬಚ್ಚೇಗೌಡ. ಈ ಇಬ್ಬರು ನಾಯಕರು 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದವರು. 2014ರ ಚುನಾವಣೆಯಲ್ಲಿ ಮೊಯಿಲಿ ಗೆದ್ದರೆ 2019ರಲ್ಲಿ ಬಿ.ಎನ್.ಬಚ್ಚೇಗೌಡ ಸೋಲಿನ ಸೇಡು ತೀರಿಸಿಕೊಂಡು ಗೆಲುವಿನ ನಗೆ ಬೀರಿದ್ದರು. 

ಸಿ.ಆರ್.ಮನೋಹರ್
ಸಿ.ಆರ್.ಮನೋಹರ್

2024ರ ಲೋಕಸಭಾ ಚುನಾವಣೆಯು ಈ ಇಬ್ಬರು ಹಿರಿಯ ನಾಯಕರ ರಾಜಕೀಯ ಯುಗಾಂತ್ಯಕ್ಕೆ ಕಾರಣವಾಯಿತು. ಈ ಇಬ್ಬರು ನಾಯಕರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರು ಸಹ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾವ ಪಕ್ಷದ ಪರವಾಗಿಯೂ ಪ್ರಚಾರ ನಡೆಸದೆ ಮೌನವಾಗಿದ್ದರು. 

ಎಂ.ವೀರಪ್ಪ ಮೊಯಿಲಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಚುನಾವಣೆ ವೇಳೆ ಒಮ್ಮೆ ಚಿಕ್ಕಬಳ್ಳಾಪುರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿದ್ದು ಬಿಟ್ಟರೆ ಪ್ರಚಾರದಲ್ಲಿ ಭಾಗಿಯಾಗಲೇ ಇಲ್ಲ. ಇದರಿಂದ ಮೊಯಿಲಿ ಅವರ ಚಿಕ್ಕಬಳ್ಳಾಪುರ ರಾಜಕಾರಣ ಯುಗಾಂತ್ಯವಾಯಿತು ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದವು. ಇಂದಿಗೂ ಮಾಜಿ ಸಂಸದರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿಲ್ಲ.

ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ

ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗರಿಷ್ಠ ಬಾರಿ ಶಾಸಕರಾದ ಹೆಗ್ಗಳಿಕೆ ವಿ.ಮುನಿಯಪ್ಪ ಅವರ ಹೆಸರಿನಲ್ಲಿ ಇದೆ. ಶಿಡ್ಲಘಟ್ಟವಷ್ಟೇ ಅಲ್ಲ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿಯೂ ವಿ.ಮುನಿಯಪ್ಪ ಅವರದ್ದು ಪ್ರಮುಖ ಹೆಸರು. 

1983ರ ಚುನಾವಣೆಯ ಮೂಲಕ ವಿ.ಮುನಿಯಪ್ಪ ಶಿಡ್ಲಘಟ್ಟ ಶಾಸಕರಾದರು. ನಂತರ ಮತ್ತೆ 1989, 1994, 1999, 2008, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾದರು. ಹ್ಯಾಟ್ರಿಕ್ ಗೆಲುವು ಸಾಧಿಸಿದ ಮುನಿಯಪ್ಪ ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದರು. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮುನಿಯಪ್ಪ ಸ್ಪರ್ಧಿಸಲಿಲ್ಲ. ಈ ಮೂಲಕ ಮುನಿಯಪ್ಪ ಅವರ ಚುನಾವಣಾ ರಾಜಕಾರಣವೂ ಸಹ ಮುಗಿದಿದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ರಾಜೀವ್ ಗೌಡ ಮತ್ತು ಪುಟ್ಟು ಆಂಜನಪ್ಪ ‘ಕೈ’ ನಾಯಕರು ಎನಿಸಿದ್ದಾರೆ.

ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಸಹ ಪ್ರಮುಖವಾಗಿದ್ದರು. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಹೂಡಿಕೆ ಸಹ ಮಾಡಿದ್ದರು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲ. ವಿನಯ್ ಶ್ಯಾಮ್ ಯಾರ ಪರವೂ ಪ್ರಚಾರ ನಡೆಸಲಿಲ್ಲ. ತಟಸ್ಥರಾದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಾಯಕರು ಸಹ ವಿನಯ್ ಶ್ಯಾಮ್ ಅವರ ಮನೆಗೆ ಭೇಟಿ ನೀಡಿದ್ದರು. ಆಗಲೂ ಯಾರ ಪರವಾಗಿಯೂ ಅವರು ಪ್ರಚಾರಕ್ಕೆ ಮುಂದಾಗಲಿಲ್ಲ.‌ ತಟಸ್ಥವಾಗಿರುವ ಅವರು ಪಕ್ಷದ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದಾರೆ. 

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2008 ಮತ್ತು 2018ರ ವಿಧಾನಸಭೆ ಚುನಾ­ವಣೆಯಲ್ಲಿ ಬಹುಭಾಷ ನಟ ಸಾಯಿಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದರು. 2018ರ ಚುನಾವಣೆ ಪೂರ್ಣಗೊಳಿಸಿದ ತೆರಳಿದ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿದ್ದರು. ಅದನ್ನು ಹೊರತುಪಡಿಸಿದರೆ ಬಾಗೇಪಲ್ಲಿಯ ರಾಜಕಾರಣ ಸಾಯಿಕುಮಾರ್ ಹೆಸರು ಸಹ ನೇಪಥ್ಯಕ್ಕೆ ಸರಿದಿದೆ.

ವಿನಯ್ ಶ್ಯಾಮ್
ವಿನಯ್ ಶ್ಯಾಮ್

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ದಶಕಗಳ ಹಿಂದೆ ಉದ್ಯಮಿ ಜೈಪಾಲ್ ರೆಡ್ಡಿ ಹೆಸರು ಸಂಚಲನಕ್ಕೆ ಕಾರಣವಾಗಿತ್ತು. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅವರ ವಿರುದ್ಧ ಕೇವಲ 6,075 ಮತಗಳ ಅಂತರದಿಂದ ಸೋಲು ಅನುಭವಿಸಿದರು. ನಂತರ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡರು. ನಂತರ ಗೌರಿಬಿದನೂರು ರಾಜಕಾರಣದಿಂದಲೇ ದೂರವಾದರು.

ಕೆ.ಜೈಪಾಲ್ ರೆಡ್ಡಿ
ಕೆ.ಜೈಪಾಲ್ ರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT