ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಅಂಗವಿಕಲರಿಗೆ ಮತಗಟ್ಟೆ ವ್ಯವಸ್ಥೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 17 ಫೆಬ್ರುವರಿ 2023, 5:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ನಡೆಯಲಿರುವ ಎಲ್ಲ ಮತಗಟ್ಟೆಗಳ ಕಟ್ಟಡಗಳಿಗೆ ಅಂಗವಿಕಲರ ಮತದಾನದ ಅನುಕೂಲಕ್ಕಾಗಿ ಕಡ್ಡಾಯವಾಗಿ ರೇಲಿಂಗ್ಸ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ 2023ರ ವಿಧಾನಸಭೆ ಚುನಾವಣೆ ಕುರಿತು ನಡೆದ ಪೂರ್ವ ಸಿದ್ಧತೆಗಳ ಸಭೆಯಲ್ಲಿ ಮಾತನಾಡಿದರು.

ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾದರೂ ನಾವು ಸಕಲ ಸಿದ್ಧರಿರಬೇಕು. ಈ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಮಾಡಿಕೊಳ್ಳಲಾಗಿದೆ. ಅದರಂತೆ ಜಿಲ್ಲಾ ಮಟ್ಟದ 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ತಮ್ಮ ಕಾರ್ಯ ವ್ಯಾಪ್ತಿಯ ಚುನಾವಣಾ ಕಾರ್ಯಗಳದ ಜವಾಬ್ದಾರಿ ಇವರದ್ದಾಗಿದೆ. ಮತಗಟ್ಟೆಗಳಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸುವುದು, ಸ್ವೀಪ್ ಚಟುವಟಿಕೆಗಳನ್ನು ಮಾಡುವುದು, ಇವಿಎಂ ಯಂತ್ರಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಪೂರ್ವ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದು. ತಮ್ಮ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚುನಾವಣಾ ಕಾರ್ಯಗಳ ಬಗ್ಗೆ ತರಬೇತಿ ನೀಡುವ ಎಲ್ಲ ಕಾರ್ಯಗಳನ್ನು ಮೇಲುಸ್ತುವಾರಿ ಮಾಡಬೇಕು. ಸೂಸೂತ್ರವಾಗಿ ಚುನಾವಣಾ ಕಾರ್ಯಗಳು ನಡೆಯುವಂತೆ ಸದಾ ಜಾಗೃತರಾಗಿರಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚುನಾವಣೆಗಳು ಸುಲಲಿತವಾಗಿ ಜರುಗಬೇಕಾದರೆ ನೆರೆ ಜಿಲ್ಲೆಗಳು ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಹೊರ ರಾಜ್ಯದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಅಗತ್ಯ. ಆದ್ದರಿಂದ ಜಿಲ್ಲೆಗೆ ಹೊಂದಿಕೊಂಡಿರುವ ಹೊರ ರಾಜ್ಯದ ಜಿಲ್ಲೆಗಳ ಪೊಲೀಸ್, ಅಬಕಾರಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅಗತ್ಯ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಜಿಲ್ಲಾಡಳಿತ ಭವನ, ತಾಲ್ಲೂಕು ಕಚೇರಿಗಳು ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಹಾಗೂ ಇತರ ಜನಸಂದಣಿ ಪ್ರದೇಶಗಳಲ್ಲಿ ಮತದಾನಕ್ಕೆ ಬಳಸುವ ಇವಿಎಂ ಯಂತ್ರಗಳ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಜಿ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT