ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಕಲ್ಯಾಣಿಗಳ ಅಧ್ವಾನ

Published 21 ಫೆಬ್ರುವರಿ 2024, 6:24 IST
Last Updated 21 ಫೆಬ್ರುವರಿ 2024, 6:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಲ್ಯಾಣಿಗಳು ಐತಿಹಾಸಿಕ ಮಹತ್ವವಾದ ಜಲ ಸಂಗ್ರಹದ ಮೂಲ‌ಗಳು. ಕಲ್ಯಾಣಿಗಳು ಸಮೃದ್ಧವಾಗಿದ್ದರೆ ಆ ಸುತ್ತಲಿನ ಪರಿಸರ ಮತ್ತು ನೀರಿನ ಸೆಲೆ ಉತ್ತಮವಾಗಿರುತ್ತದೆ. ವಾತಾವರಣವೂ ಕಳೆಗಟ್ಟಿರುತ್ತದೆ. 

ಚಿಕ್ಕಬಳ್ಳಾಪುರ ನಗರದಲ್ಲಿ ಬೆರಳೆಣಿಕೆಯ ಕಲ್ಯಾಣಿಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಉತ್ತಮವಾಗಿವೆ. ಮತ್ತೆ ಕೆಲವು ಕಲ್ಯಾಣಿಗಳು ಅಧ್ವಾನ ಎನ್ನುವಂತಿದೆ. ನಗರದಲ್ಲಿರುವ ಬಹುತೇಕ ಕಲ್ಯಾಣಿಗಳಲ್ಲಿ ನೀರಿದೆ. ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ವಿಶೇಷ ಎಂದರೆ ನಗರದ ಪ್ರಮುಖ ಬಡಾವಣೆಗಳು ಮತ್ತು ಸ್ಥಳಗಳಲ್ಲಿಯೇ ಈ ಕಲ್ಯಾಣಿಗಳು ಇವೆ. 

ಇವುಗಳನ್ನು ಸೌಂದರ್ಯಗೊಳಿಸಿದರೆ ನಗರಕ್ಕೂ ಅಂದ ಮತ್ತು ಚೆಂದ. ಹೀಗೆ ಸೌಂದರ್ಯಕ್ಕೆ ಕಾರಣವಾಗಬೇಕಾಗಿದ್ದ ಕಲ್ಯಾಣಿಗಳು ಅಧ್ವಾನ ಎನ್ನುವಂತಿವೆ. ಕಲ್ಯಾಣಿಗಳಲ್ಲಿ ನೀರಿದ್ದರೂ ಸುತ್ತಲಿನ ಕಟ್ಟೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಗಿಡಗಂಟಿಗಳು, ಕಳೆ ಹುಲ್ಲುಗಳು ಬೆಳೆದಿವೆ. ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.

ಬಿಬಿ ರಸ್ತೆಯ ಕನ್ನಡ ಭವನದ ಬಳಿ ಇರುವ ಕಲ್ಯಾಣಿ ಮತ್ತು ಎಲ್‌ಐಸಿ ಕಚೇರಿಯ ಎದುರಿನ ರಸ್ತೆಯಲ್ಲಿರುವ ಕಲ್ಯಾಣಿಯು ನಗರದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕಲ್ಯಾಣಿಗಳಲ್ಲಿ ಪ್ರಮುಖವಾಗಿದೆ.  ಇಲ್ಲಿ ಆಗಾಗ್ಗೆ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯಗಳನ್ನು ನಡೆಸುವರು. ಆದ ಕಾರಣ ಕಲ್ಯಾಣಿಗಳು ಉತ್ತಮವಾಗಿವೆ. ಕನ್ನಡಭವನ ಉದ್ಘಾಟನೆಯಾದರೆ ಕಲ್ಯಾಣಿಗೆ ಮತ್ತಷ್ಟು ಮೆರುಗು ಬರಲಿದೆ. 

ಈ ಕಲ್ಯಾಣಿಯಿಂದ ಸ್ವಲ್ಪ ದೂರು ಮುಂದೆ ಸಾಗಿದರೆ ಶನಿಮಹಾತ್ಮ ದೇವಾಲಯದ ಹಿಂಬದಿಯಲ್ಲಿರುವ ಕಲ್ಯಾಣಿಯಲ್ಲಿ ನೀರಿದೆ. ಆದರೆ ಕಲ್ಯಾಣಿಯ ಆವರಣದಲ್ಲಿ ಗಿಡಗಂಟಿಗಳು ದೊಡ್ಡ ಪ್ರಮಾಣದಲ್ಲಿ ತುಂಬಿವೆ. ನಿರ್ವಹಣೆಯ ಕೊರತೆಯನ್ನು ಸಾರುತ್ತಿದೆ. ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಹುಲ್ಲು ಬೆಳೆದಿದೆ. ನೀರು ಪಾಚಿಯಂತೆ ಕಾಣುತ್ತದೆ. ಕಂದವಾರ ಬಾಗಿಲು ಬಳಿಯ ಕಲ್ಯಾಣಿಯದ್ದೂ ಇದೇ ಕಥೆ. ನೀರಿದ್ದರೂ ಕಲ್ಯಾಣಿಯ ಸುತ್ತ ಆಳೆತ್ತರದ ಗಿಡಗಳು ಬೆಳೆದಿವೆ. ಇದೂ ನಿರ್ವಹಣೆ ಇಲ್ಲದೆ ಸೊರಗಿರುವುದನ್ನು ಸಾರಿ ಹೇಳುತ್ತಿವೆ. 

ವಾಪಸಂದ್ರದಲ್ಲಿರುವ ಮತ್ತೊಂದು ಕಲ್ಯಾಣಿಯ ಸ್ಥಿತಿಯೂ ಅಧ್ವಾನ ಎನ್ನುವಂತಿದೆ. ಸುತ್ತಲೂ ಮರಗಿಡಗಳು ಬೆಳೆದಿವೆ. ಬಿಬಿ ರಸ್ತೆಯಲ್ಲಿಯೇ ಇದ್ದರೂ ಕಲ್ಯಾಣಿ ಬಳಿಗೆ ಹೋಗಲು ಕಷ್ಟ ಎನ್ನುವ ಸ್ಥಿತಿ ಇದೆ. ಕಲ್ಯಾಣಿಯ ಕಳೆಗಿಡಗಳಿಂದ ಆವೃತವಾಗಿದೆ.

ಅಮೃತ ಯೋಜನೆಯಡಿ ನಗರಸಭೆದ ಕಲ್ಯಾಣಿಗಳನ್ನು ಈ ಹಿಂದೆ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ನಿರ್ವಹಣೆ ಇಲ್ಲದ ಕಾರಣ ಕಲ್ಯಾಣಿಗಳು ಅಧ್ವಾನ ಎನ್ನುವಂತಿವೆ. 

ನಗರಸಭೆಯು ಇನ್ನಾದರೂ ಕಲ್ಯಾಣಿಗಳ ನಿರ್ವಹಣೆಗೆ ಕ್ರಮವಹಿಸಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.

ಶನಿಮಹಾತ್ಮ ದೇವಾಲಯದ ಹಿಂಬದಿಯ ಕಲ್ಯಾಣಿಯ ಕಲ್ಲಿನ ಕಟ್ಟೆಗಳ ಮೇಲೆ ಕಳೆ ಗಿಡಗಳು
ಶನಿಮಹಾತ್ಮ ದೇವಾಲಯದ ಹಿಂಬದಿಯ ಕಲ್ಯಾಣಿಯ ಕಲ್ಲಿನ ಕಟ್ಟೆಗಳ ಮೇಲೆ ಕಳೆ ಗಿಡಗಳು
ಕಂದವಾರ ಬಾಗಿಲು ಬಳಿಯ ಕಲ್ಯಾಣಿಯ ಸ್ಥಿತಿ
ಕಂದವಾರ ಬಾಗಿಲು ಬಳಿಯ ಕಲ್ಯಾಣಿಯ ಸ್ಥಿತಿ

‘ನಗರಸಭೆ ನಿರ್ವಹಣೆಗೆ ಗಮನ ನೀಡಲಿ’

ಕಲ್ಯಾಣಿಗಳನ್ನು ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಕನ್ನಡಭವನದ ಬಳಿಯ ಕಲ್ಯಾಣಿಯಲ್ಲಿ ಆಗಾಗ್ಗೆ ಸ್ವಯಂ ಸೇವಾ ಸಂಸ್ಥೆಗಳು ದೀಪೋತ್ಸವ ಸ್ವಚ್ಛತೆ ಸೇರಿದಂತೆ ವಿವಿಧ ರೀತಿಯ ಕಾರ್ಯಗಳನ್ನು ಮಾಡುತ್ತಿವೆ. ಇದರಿಂದ ಈ ಕಲ್ಯಾಣಿ ಉತ್ತಮವಾಗಿದೆ. ಆದರೆ ಬಹಳಷ್ಟು ಕಲ್ಯಾಣಿಗಳು ನಗರದಲ್ಲಿ ಉತ್ತಮ ಸ್ಥಿತಿಯಲ್ಲಿ ಇಲ್ಲ. ನಗರಸಭೆಯು ಕಲ್ಯಾಣಿಗಳ ನಿರ್ವಹಣೆಗೂ ಗಮನ ನೀಡಬೇಕು ಎನ್ನುತ್ತಾರೆ ನಾಗರಿಕ ಮಂಜುನಾಥ್. *** ನಾಗರಿಕರು ಜವಾಬ್ದಾರಿವಹಿಸಿ ಕಲ್ಯಾಣಿಗಳ ನಿರ್ವಹಣೆಯಲ್ಲಿ ನಗರಸಭೆಯ ಜವಾಬ್ದಾರಿ ಎಷ್ಟು ಇದೆಯೊ ನಾಗರಿಕರ ಜವಾಬ್ದಾರಿಯೂ ಇದೆ. ನಾಗರಿಕರು ಮತ್ತು ಸಂಘ ಸಂಸ್ಥೆಗಳವರು ಕಲ್ಯಾಣಿಗಳನ್ನು ಉತ್ತಮವಾಗಿ ಇಟ್ಟುಕೊಳ್ಳಲು ಮುಂದಾಗಬೇಕು. ಕಲ್ಯಾಣಿಗಳ ಸುತ್ತಮುತ್ತಲಿನ ಮನೆಯವರು ವಿಶೇಷವಾಗಿ ಈ ಬಗ್ಗೆ ಗಮನವಹಿಸುವುದು ಒಳ್ಳೆಯದು ಎನ್ನುತ್ತಾರೆ ನಾಗರಿಕ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT