ಬುಧವಾರ, ಜನವರಿ 19, 2022
27 °C

ಚಿಂತಾಮಣಿ: ಅತಿವೃಷ್ಟಿಯಿಂದ ಕೃಷಿಕರ ಪರದಾಟ, ಮೇವಿನ ಕೊರತೆ ಎದುರಾಗುವ ಸಾಧ್ಯತೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಸಾವಿರಾರು ಹೆಕ್ಟೇರ್ ಆಹಾರ ಧಾನ್ಯ ಮತ್ತು ತೋಟಗಾರಿಕೆ ಬೆಳೆ ನಾಶವಾಗಿದೆ. ಅದರಲ್ಲೂ ಕೊಯ್ಲಿಗೆ ಬಂದಿದ್ದ ರಾಗಿ, ಶೇಂಗಾ ಬೆಳೆ ಸಂಪೂರ್ಣ ನೆಲಕಚ್ಚಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಮನೆಗಳು ಕುಸಿದುಬಿದ್ದಿವೆ.

ಅಳಿದುಳಿದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಟೊಮೆಟೊ ಮತ್ತಿತರ ತರಕಾರಿ ಬೆಳೆಗಳೂ ಸಂಪೂರ್ಣ ಹಾಳಾಗಿವೆ. ಮೂರು ದಿನಗಳಿಂದ ಮಳೆ ಬಿಡುವು ನೀಡಿದ್ದರೂ ಮತ್ತೆ ಚಂಡಮಾರುತದಿಂದ 3 ದಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಸೂಚನೆಯಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ನವೆಂಬರ್ 20ಕ್ಕೆ 751.4 ಮಿ.ಮೀ ವಾಡಿಕೆ ಮಳೆಯಾಗಿದ್ದು 1,256.4 ಮಿ.ಮೀ ಮಳೆಯಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಅಂದಾಜು 10,258 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಬೆಳೆಯೂ ಹಾಳಾಗಿದೆ. ಪ್ರಸ್ತುತ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿದ್ದಾರೆ.

ಚಿಂತಾಮಣಿ ತಾಲ್ಲೂಕಿನಲ್ಲಿ ರಾಗಿ, ಶೇಂಗಾ, ತೊಗರಿ ಪ್ರಮುಖ ಆಹಾರ ಧಾನ್ಯ ಬೆಳೆ. ಟೊಮೆಟೊ, ಆಲೂಗಡ್ಡೆ, ಬೀನ್ಸ್, ದಪ್ಪ ಮೆಣಸಿನ ಕಾಯಿ, ಬದನೆಕಾಯಿ, ಕ್ಯಾರೆಟ್, ಬೀಟ್ರೂಟ್, ಎಲೆಕೋಸು, ಹಸಿಮೆಣಸಿನಕಾಯಿ ಮುಂತಾದವು ತೋಟಗಾರಿಕೆ ಬೆಳೆಗಳು. ವಿವಿಧ ರೀತಿಯ ಹೂವು ಸಹ ಪ್ರಮುಖ ಬೆಳೆಯಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ನೀರು ಸಂಗ್ರಹಣೆಯಾಗಿದ್ದು ಟೊಮೆಟೊ ಮತ್ತಿತರ ತರಕಾರಿ ಬೆಳೆಗಳು ತೋಟಗಳಲ್ಲಿ ಕೊಳೆಯುತ್ತಿವೆ.

ರಾಗಿ, ಶೇಂಗಾ ಉತ್ತಮ ಬೆಳೆಯಾಗಿದ್ದು ಬಹುತೇಕ ಕಟಾವಿಗೆ ಬಂದಿತ್ತು. ಬೆಂಬಲ ಬೆಲೆಯು ಸಿಗುತ್ತಿತ್ತು. ಹೊಲಗಳಲ್ಲಿ ಉತ್ತಮ ಬೆಳೆಯನ್ನು ಕಂಡು ಅಧಿಕ ಇಳುವರಿ ಪಡೆದು ನಾಲ್ಕು ಕಾಸು ಕಾಣಬಹುದು ಎಂದು ಕನಸು ಕಾಣುತ್ತಾ ಕೊಯ್ಲಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮಳೆ ಎಡಬಿಡದೆ ಸುರಿದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಯಿತು.

ಮಳೆಯಿಂದಾಗಿ ಬೆಳೆದು ನಿಂತಿದ್ದ ರಾಗಿ ಬೆಳೆ ಸಂಪೂರ್ಣ ನೆಲಕ್ಕೆ ಬಾಗಿದೆ. ರಾಗಿ ಕಾಳು ಜಮೀನುಗಳಲ್ಲೇ ಮೊಳಕೆಯೊಡೆಯುತ್ತಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ತೆನೆ ಕಟಾವು ಮಾಡಿ ಒಣಗಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಅಳಿದುಳಿದ ರಾಗಿ ಕಪ್ಪಾಗಿ ತಿನ್ನಲು ಯೋಗ್ಯವಿಲ್ಲದಂತಾಗುತ್ತದೆ. ಹುಲ್ಲು ಕೊಳೆತು ನಾಶವಾಗಿದೆ. ಮುಂದಿನ ದಿನಗಳಲ್ಲಿ ದನಕರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಬರಪೀಡಿತ ತಾಲ್ಲೂಕು ಎಂದು ಹಣೆಪಟ್ಟಿ ಹೊತ್ತಿರುವ ಚಿಂತಾಮಣಿ ತಾಲ್ಲೂಕಿನಲ್ಲಿ ಈ ವರ್ಷ ಹೆಚ್ಚಿನ ಮಳೆಯಾಗಿತ್ತು. 2-3 ದಶಕಗಳಿಂದ ನೀರು ಕಾಣದ ಕೆರೆ ಕುಂಟೆಗಳು ಭರ್ತಿಯಾಗಿ ಕೋಡಿ ಹರಿದವು. ಅಂತರ್ಜಲ ಮಟ್ಟ ವೃದ್ಧಿಯಾಗಬಹುದು ಎಂಬ ಆಶಾಕಿರಣ ಮೂಡಿದೆ. ಆದರೆ ಬೆಳೆಗಳು ನಾಶವಾಗಿವೆ. ರಾಗಿ, ಟೊಮೆಟೊ ಫಸಲು ಸಂಪೂರ್ಣ ನೆಲಕಚ್ಚಿದೆ. ಸಾಲ ಮಾಡಿ ಕೃಷಿ ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು