ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷಾ ಅಧ್ಯಯನಕ್ಕೆ ಆದ್ಯತೆ ನೀಡಿ: ಸಚಿವ ಸುಧಾಕರ್‌

ಸರ್ ಎಂ.ವಿ ಕ್ರೀಡಾಂಗಣದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
Last Updated 1 ನವೆಂಬರ್ 2020, 16:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಯ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿದ್ದಾಗ ಮಾತ್ರ ಕನ್ನಡದ ಬಗ್ಗೆ ಜನರಿಗೆ ಒಲವು ಮೂಡಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.

ಭಾನುವಾರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

‘ಪ್ರಸ್ತುತ ರಾಜ್ಯದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿನ ಕನ್ನಡ ಭಾಷಾ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಮಕ್ಕಳಲ್ಲಿ ಈ ನೆಲದ ಭಾಷೆಯ ಬಗ್ಗೆ ಅರಿವನ್ನು ಮೂಡಿಸಿ ನಮ್ಮ ಪೂರ್ವಜರ ಪರಂಪರೆಯನ್ನು ಬೆಳೆಸಬೇಕು. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಪರೀಕ್ಷೆಗಳ ಮಾಧ್ಯಮ ಕನ್ನಡವಾಗಬೇಕು. ಆ ನಿಟ್ಟಿನಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲಿದ್ದಾಗ ಕನ್ನಡದ ಮಕ್ಕಳಲ್ಲಿ ಭಾಷೆಯ ಬಗ್ಗೆ ಹೆಚ್ಚಿನ
ಒಲವು ಮೂಡಲು ಸಾಧ್ಯ’ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ: ‘ಪ್ರಸ್ತುತ ಜಾರಿಗೆ ತರಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆ ಮೂಲಕ ಶಿಕ್ಷಣದ ಮೂಲಕ ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಆದಾಗ ಮಾತ್ರ ನಮ್ಮ ಆಲೋಚನೆ ಕನ್ನಡದಲ್ಲಿರಲು ಸಾಧ್ಯ ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶದಿಂದ 19 ಗಡಿ ಜಿಲ್ಲೆಗಳನ್ನು ಮತ್ತು 52 ಗಡಿ ತಾಲ್ಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆ ಮೂಲಕ 844 ಸ್ಮಾರಕಗಳನ್ನು ಸಮರ್ಪಕವಾಗಿ ಕಟ್ಟುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಆ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ’ ಎಂದು ತಿಳಿಸಿದರು.

‘ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು’
‘ಕನ್ನಡ ಸಾಹಿತ್ಯ ಅನೇಕ ಮಹತ್ವಪೂರ್ಣ ಕೃತಿಗಳನ್ನು ಹೊಂದಿರುವ ಶ್ರೀಮಂತ ಭಾಷೆ. ಕನ್ನಡ ಭಾಷೆಯನ್ನು ಕಟ್ಟುವ ನಿಟ್ಟಿನಲ್ಲಿ ಅನೇಕ ಕವಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡಿಗರು ಇಂದು ಅನೇಕ ದೇಶಗಳಲ್ಲಿ ತಮ್ಮದೇ ಆದ ಸಾಧನೆಯನ್ನು
ಕೈಗೊಂಡಿದ್ದಾರೆ. ಬೇರೆ ದೇಶಗಳಲ್ಲಿದ್ದರೂ ಅವರು ಕನ್ನಡವನ್ನು ಮರೆತಿಲ್ಲ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್
ಗ್ರಂಥಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ಸಚಿವ ಸುಧಾಕರ್‌ ಹೇಳಿದರು.

‘ಡಿಜಿಟಲ್ ಗ್ರಂಥಾಲಯಗಳ ಮೂಲಕ ಯುವಜನತೆಯಲ್ಲಿ ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡದ ಕಂಪು ಡಿಜಿಟಲ್ ತಂತ್ರಜ್ಞಾನದ ಮೂಲಕ ದೇಶ ವಿದೇಶಗಳಲ್ಲಿ ಪಸರಿಸುವಂತಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಶ್ರೀಮಂತಗೊಳ್ಳಲು ಸಾಧ್ಯ’ ಎಂದು ಕರೆ ನೀಡಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ 8 ಸಾಧಕರಿಗೆ 2020ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಕ್ಷೇತ್ರ ಶ್ರೀಮತಿ ಲೀಲಾ ಲಕ್ಮೀನಾರಾಯಣ, ಕನ್ನಡ ಸೇವ ಕ್ಷೇತ್ರದಲ್ಲಿ ಬಿ.ಎ.ಬಾಬಾಜಾನ್, ಪತ್ರಿಕೋದ್ಯಮದಲ್ಲಿ ದಯಾಸಾಗರ್, ಶಿಕ್ಷಣ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಟಿ.ನಾರಾಯಣಸ್ವಾಮಿ , ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಗೋವಿಂದಪ್ಪ, ನಾದಸ್ವರ ಮತ್ತು ದೂರದರ್ಶನ ಕಲಾವಿದರಾದ ಎ.ಆವಲಮೂರ್ತಿ, ಕವಿ ಲೇಖಕ ನಂಜಪ್ಪರೆಡ್ಡಿ, ಕಂಗಭೂಮಿ ಕಲಾವಿದರಾದ ಡಾ.ಸೋ.ಸು ನಾಗೇಂದ್ರನಾಥ್ ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಮರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT