ಭಾನುವಾರ, ಜೂಲೈ 5, 2020
28 °C
ತಾಲ್ಲೂಕು ಕಚೇರಿ ಮುಂದೆ ಧರಣಿ

ಹಲ್ಲೆ ಆರೋಪಿ ಬಂಧಿಸದಿದ್ದರೆ ಕರ್ತವ್ಯ ಬಹಿಷ್ಕಾರ: ಆಶಾ ಕಾರ್ಯಕರ್ತೆಯರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೊರೊನಾ ಸಮೀಕ್ಷೆ ನಡೆಸಲು ತೆರಳಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು 3 ದಿನಗಳ ಒಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಕರ್ತವ್ಯ ಬಹಿಷ್ಕರಿಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.

ಮಂಗಳವಾರ ಆಶಾ ಕಾರ್ಯಕರ್ತೆಯರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಮುರುಗಮಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ ಮೇ 22ರಂದು ಕೊರೊನಾ ಸಮೀಕ್ಷೆಗಾಗಿ ಐಮರೆಡ್ಡಿಗೆ ತರಳಿದ್ದರು. ಗ್ರಾಮದ ನಿವಾಸಿ ನಾಗರಾಜ್ ಹಾಗೂ ಅವರ ಕುಟುಂಬದವರು ಹಲ್ಲೆ ನಡೆಸಿದ್ದರು. ವೆಂಕಟಲಕ್ಷ್ಮಮ್ಮ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು 4 ದಿನಗಳಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮಗಳಿಗೆ ಹೊರಜಿಲ್ಲೆ, ರಾಜ್ಯಗಳಿಂದ, ಅಪರಿಚಿತ ವ್ಯಕ್ತಿಗಳು ಬಂದರೆ ಕೂಡಲೇ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಆದೇಶಿಸಿದೆ. ವರದಿ ನೀಡದಿದ್ದರೆ ಕರ್ತವ್ಯಲೋಪ ಎಂದು ಕ್ರಮಕೈಗೊಳ್ಳುತ್ತಾರೆ.

ಸಮೀಕ್ಷೆಗೆ ತೆರಳಿ ಮಾಹಿತಿಯನ್ನು ಕೇಳಿದರೆ ಈ ರೀತಿ ಹಲ್ಲೆ ನಡೆಸುತ್ತಾರೆ. ಬೇರೆ ಸಮಯದಲ್ಲಿ ಕೊರೊನಾ ವಾರಿಯರ್ಸ್ ಸೇವೆ ಅನನ್ಯ, ಕಣ್ಣಿಗೆ ಕಾಣುವ ದೇವರುಗಳು ಎಂದು ಹೊಗಳುವ ಅಧಿಕಾರಿಗಳು ಹಲ್ಲೆ ನಡೆದು 4 ದಿನಗಳಾದರೂ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಸಂಘದ ಅಧ್ಯಕ್ಷೆ ಲಕ್ಷ್ಮಿ ತಿಳಿಸಿದರು.

ಸಂಘದ ಕಾರ್ಯದರ್ಶಿ ರೇಷ್ಮಾ, ಖಜಾಂಚಿ ಪಾರ್ವತಮ್ಮ, ಮಮತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು