ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಚ್ಚಿದ ಹಾವು, ನಾಯಿ ಕಡಿತ

ರೇಬಿಸ್ ನಿಯಂತ್ರಣ ಕಾರ್ಯಕ್ರಮ; ಅಂತರ ಇಲಾಖಾ ಸಮನ್ವಯ ಸಭೆ
Published : 18 ಸೆಪ್ಟೆಂಬರ್ 2024, 14:17 IST
Last Updated : 18 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾವು ಕಡಿತ ಮತ್ತು ನಾಯಿ ಕಡಿತ ಪ್ರಕರಣಗಳು 2020 ಮತ್ತು 2021ರ ಕೋವಿಡ್ ವರ್ಷಗಳಲ್ಲಿ ಕಡಿಮೆ ಆಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿವೆ. ಸಾರ್ವಜನಿಕರು, ರೈತರು ಮನೆಯಿಂದ ಹೊರಗಡೆ ಕೆಲಸ ಮಾಡುವಾಗ ಮುಂಜಾಗ್ರತಾ ಮತ್ತು ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಆಯೋಜನೆಯ ಅಂತರ ಇಲಾಖಾ ಸಮನ್ವಯ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ಓಡಾಡುವಾಗ ಶೂ ಧರಿಸಬೇಕು. ಕೋಲು ಬಳಕೆ ಮೂಲಕ ಶಬ್ದ ಮಾಡಿಕೊಂಡು ನಡೆಯಬೇಕು ಎಂದರು.

ಇಷ್ಟೆಲ್ಲ ಕ್ರಮಗಳ ಮಧ್ಯೆ ಹಾವು ಕಡಿತಕ್ಕೆ ಒಳಪಟ್ಟರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಈ ಚಿಕಿತ್ಸೆಗೆ ಚುಚ್ಚು ಮದ್ದು ಹಾಗೂ ಆರೋಗ್ಯ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಔಷಧ ದಾಸ್ತಾನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾಕಾಲ ಲಭ್ಯವಿರುತ್ತದೆ ಎಂದರು.

ನಾಟಿ ಔಷಧಿ ಬಳಕೆ ಮಾಡುವುದು ಹಾಗೂ ಸ್ವ ಚಿಕಿತ್ಸೆ ಮಾಡಿಕೊಳ್ಳೂವುದನ್ನು ಬಿಟ್ಟು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಮಾಂಸ ಮಾರಾಟ ಮಾಡುವ ಅಂಗಡಿಯವರು, ಕೋಳಿಪಾರಂ, ಕುರಿಫಾರಂಗಳಲ್ಲಿ ಸತ್ತ ಪ್ರಾಣಿ, ಕೋಳಿಗಳನ್ನು  ಸಂಬಂಧಪಟ್ಟವರು ಸೂಕ್ತ ವಿಲೇವಾರಿ ಮಾಡಬೇಕು. ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ನಗರ, ಗ್ರಾಮ ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗಬೇಕು. ಬೀದಿ ನಾಯಿಗಳ ಹಾವಳಿಯನ್ನು ಆಗ ಮಾತ್ರ ತಪ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ನಾಯಿಗಳ ಹಾವಳಿ ಕಡಿಮೆಯಾದರೆ ಶೇ 99ರಷ್ಟು ರೇಬಿಸ್ ಪ್ರಕರಣಗಳು ಕಡಿಮೆ ಆಗಲಿವೆ. ಈ ಕಾಯಿಲೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಸೆ.28 ರಂದು ವಿಶ್ವ ರೇಬಿಸ್ ದಿನಾಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಬೇಕು ಎಂದು ಸೂಚಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು’
ರೇಬಿಸ್ ಕಾಯಿಲೆಯು ಮಾರಣಾಂತಿಕವಾದುದು. ನಾಯಿ ಕಡಿತಕ್ಕೆ ಒಳಗಾದ ಕೂಡಲೆ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಚುಚ್ಚು ಮದ್ದು ಪಡೆಯಬೇಕು. ವೈದ್ಯರು ಸೂಚಿಸಿದ ಪ್ರಕಾರವೇ ಚಿಕಿತ್ಸೆ ಪಡೆಯುವುದು ಮುಖ್ಯ. ಒಮ್ಮೆ ರೇಬಿಸ್ ಕಾಯಿಲೆ ಬಂದರೆ ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ಅರಿತು ಯಾವುದೇ ವ್ಯಕ್ತಿಗಳು ನಾಯಿ ಕಡಿತಕ್ಕೆ ಒಳಗಾದರೆ ಕೂಡಲೆ ಆರೋಗ್ಯ ಚಿಕಿತ್ಸೆ ಪಡೆಯಬೇಕು ಎಂದು ಪಿ.ಎನ್.ರವೀಂದ್ರ ಹೇಳಿದರು.

ಜಿಲ್ಲೆಯಲ್ಲಿ 2024 ರ ವರ್ಷದಲ್ಲಿ ಇಲ್ಲಿಯವರೆಗೆ ಮೂರು ತಾಯಿ ಸಾವು ಪ್ರಕರಣಗಳು ವರದಿಯಾಗಿವೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಆರೋಗ್ಯ ಸೇವೆಗಳ ಕೊರತೆ ಹಾಗೂ ನಿರ್ಲಕ್ಷ್ಯವು ಜರುಗಬಾರದು. ಹೈ ರಿಸ್ಕ ಪ್ರಕರಣಗಳಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ ರವಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT