ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗೊಂದು ಕನ್ನಡ’ ರೂವಾರಿಗೆ ರಾಜ್ಯೋತ್ಸವ

ನಂದಿ ಗ್ರಾಮದ ಜ್ಞಾನಾನಂದರಿಗೆ ರಾಜ್ಯೋತ್ಸವ ಪ್ರಶಸ್ತಿ
Last Updated 1 ನವೆಂಬರ್ 2021, 7:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಜಿ.ಜ್ಞಾನಾನಂದ ಅವರು ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಗರಿಮೆಯನ್ನು ತಂದಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿರುವ ತಮ್ಮ ‍ಪುತ್ರಿಯ ಜತೆ ವಾಸಿಸುತ್ತಿದ್ದಾರೆ.

ನಂದಿ ಗ್ರಾಮದ ಪಾರಂಪರಿಕ ಶಿಲ್ಪಿಗಳ ಮನೆತನದಲ್ಲಿ 1940ರಲ್ಲಿ ಜನಿಸಿದ ಜ್ಞಾನಾನಂದ ಅವರು ಶಿಲ್ಪಶಾಸ್ತ್ರ ಪ್ರವೀಣರು. ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಸಂಸ್ಥೆಯಲ್ಲಿ 37 ವರ್ಷಗಳ ಕಾಲ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ಮಾಡಿ ನಿವೃತ್ತರಾದವರು. ತಮ್ಮ ಕೆಲಸದ ಜತೆಗೆ ಅನೇಕ ದಶಕಗಳಿಂದ ಕನ್ನಡದ ಪರಿಚಾರಿಕೆ ಮಾಡುತ್ತ ಬಂದಿದ್ದಾರೆ. ಅವರು ಶಿಲ್ಪಶಾಸ್ತ್ರದಿಂದ ಹಿಡಿದು ಮಕ್ಕಳ ಸಾಹಿತ್ಯದ ವರೆಗೆ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.

2018ರ ಮಾರ್ಚ್ 21ರಂದು ಚಿಕ್ಕಬಳ್ಳಾಪುರ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಜ್ಞಾನಾನಂದ ಅವರ ಪತ್ನಿ ಸರಿತಾ ಅವರು ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.

ಶಾಲಾ ದಿನಗಳಿಂದಲೂ ಸಾಹಿತ್ಯದ ಆಸಕ್ತಿ ಹೊಂದಿದ್ದ ಅವರು ಕಾಲೇಜು ದಿನಗಳಲ್ಲೇ ಹಲವು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದರು. ಈ ಕಾದಂಬರಿಗಳು ಕಥಾವಳಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದವು. ಅವರ ಹಲವಾರು ಸಣ್ಣಕತೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲೆಲ್ಲಾ ಪ್ರಕಟವಾಗಿವೆ.

ನಾಲ್ಕು ವರ್ಷ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಮೂರು ವರ್ಷ ಪಾರಂಪರಿಕ ಶಿಲ್ಪ ಮತ್ತು ಕನ್ನಡ ಶಾಸನ ಸಾಹಿತ್ಯ ವಿಭಾಗದಲ್ಲಿ ಸಲಹೆಗಾರರಾಗಿ, ಮೈಸೂರಿನ ಬ್ರಹ್ಮರ್ಷಿ ಶಿಲ್ಪ ಗುರುಕುಲಂ ಕಾಲೇಜಿನ ಪ್ರಾಂಶುಪಾಲರಾಗಿ, ಕರ್ನಾಟಕ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರುಗಳಾಗಿ (ಡೀನ್) ಕೆಲಸ ಮಾಡಿದ್ದಾರೆ.

ಅವಿಭಜಿತ ಕೋಲಾರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡು ಅವಧಿ ಸೇವೆ ಸಲ್ಲಿಸಿದ ಜ್ಞಾನಾನಂದ ಅವರು, ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’ ರೂಪಿಸಿ ಆ ಮೂಲಕ ಆ ಮೂಲಕ ಜಿಲ್ಲೆಯ 13 ತಾಲ್ಲೂಕುಗಳಲ್ಲಿ ಸಾವಿರಾರು ಕಾರ್ಯಕ್ರಮ ಆಯೋಜಿಸಿದ್ದರು.

ಜ್ಞಾನಾನಂದ ಅವರಿಗೆ ಪ್ರಶಸ್ತಿ ಬಂದಿರುವುದು ಸಂತೋಷದ ವಿಷಯ. ಅವರಿಗೆ ಈಗ 80ರ ಪ್ರಾಯ ಮೀರಿದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ನೋಡಿದರೆ ಅವರು ಪ್ರಶಸ್ತಿಗೆ ಭಾಜನರಾಗಿ ಹಲವು ವರ್ಷಗಳೇ ಆಗಬೇಕಾಗಿತ್ತು ಎಂದು ಚಿಕ್ಕಬಳ್ಳಾಪುರದ ಅವರ ಒಡನಾಡಿಗಳು ನುಡಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT