ಮಂಗಳವಾರ, ನವೆಂಬರ್ 24, 2020
26 °C

ಓದುವ ಬೆಳಕು ಅನುಷ್ಠಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳು ಓದುವ ಹವ್ಯಾಸದಿಂದ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಓದುವ ಬೆಳಕು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಶಾಲಾ-ಕಾಲೇಜು ತೆರೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ. ಅವರನ್ನು ಪುನಃ ಓದಿನ ಕಡೆ ಸೆಳೆಯುವುದು ಈ ಕಾರ್ಯಕ್ರಮದ ಉದ್ದೇಶ. ಮಕ್ಕಳಿಗೆ ಇದು ಉಪಯುಕ್ತವಾಗಲಿದೆ’ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ. ತ್ಯಾಗರಾಜ್ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳ ಪಂಚಾಯಿತಿಯ ಗ್ರಂಥಾಲಯದಲ್ಲಿ ಶನಿವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಓದುವ ಬೆಳಕು ಕಾರ್ಯಕ್ರಮದಡಿ ಸಾಂಕೇತಿಕವಾಗಿ 20 ವಿದ್ಯಾರ್ಥಿಗಳನ್ನು ನೋಂದಾಯಿಸಿ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಮಕ್ಕಳ ಮಾನಸಿಕ, ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಓದುವ ಬೆಳಕು ಕಾರ್ಯಕ್ರಮವನ್ನು ರೂಪಿಸಿದೆ. ಡಿ. 15ರೊಳಗೆ ಪಂಚಾಯಿತಿಗಳ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಿರಬೇಕು. ಮಕ್ಕಳ ಸದಸ್ಯತ್ವ ಶುಲ್ಕವನ್ನು ಪಂಚಾಯಿತಿಗಳ ಸೆಸ್‌ನಿಂದ ಭರಿಸಲಾಗುವುದು ಎಂದು ತಿಳಿಸಿದರು.

ನವೆಂಬರ್‌ನಲ್ಲಿ ಮಕ್ಕಳ ಗ್ರಾಮಸಭೆ ನಡೆಸುವುದಕ್ಕಷ್ಟೆ ಸೀಮಿತಗೊಳ್ಳುತ್ತಿದ್ದ ಮಕ್ಕಳ ದಿನಾಚರಣೆಯನ್ನು ಇಲಾಖೆಯು ವಿಸ್ತರಿಸಿದೆ. ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಪ್ರಾರಂಭಿಸಿದೆ. ಜನವರಿ 24ರವರೆಗೆ ಈ ಅಭಿಯಾನ ಹಮ್ಮಿಕೊಂಡಿದೆ. 10 ವಾರಗಳ ಕಾಲ ಎಲ್ಲ ಪಂಚಾಯಿತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳೂ ಸೇರಿದಂತೆ ಹಲವು ಚಟುವಟಿಕೆಗಳು ನಡೆಯಲಿವೆ. ದಾನಿಗಳು ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ನೀಡಬಹುದಾಗಿದೆ ಎಂದರು.

ಹಂಡಿಗನಾಳ ಗ್ರಾಮ ಪಂಚಾಯಿತಿಯ ಗ್ರಂಥಪಾಲಕ ಮುನಿರಾಜು, ಕಾರ್ಯದರ್ಶಿ ಶ್ರೀನಿವಾಸ್, ಮೋಹನ್, ನಾರಾಯಣಸ್ವಾಮಿ, ರಾಮಾಂಜಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.