ಬುಧವಾರ, ಜೂನ್ 29, 2022
23 °C
ಕರಾರು ಮಾಡಿಕೊಂಡು ನೋಂದಣಿಗೆ ಕಾದು ಕುಳಿತವರಿಗೆ ನಿರಾಸೆ

ನೋಂದಣಿ ಸ್ಥಗಿತ: ₹14 ಕೋಟಿ ನಷ್ಟ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

PV Photo

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಗಳು ಬಾಗಿಲು ಮುಚ್ಚಿವೆ. ಇದು ಈಗಾಗಲೇ ಮಾರಾಟ ಮತ್ತು ಖರೀದಿಗೆ ಕರಾರು ಮಾಡಿಕೊಂಡವರಿಗೆ ನಿರಾಸೆ ತಂದಿದೆ. ಮತ್ತೊಂದು ಕಡೆ ಸರ್ಕಾರದ ಬೊಕ್ಕಸಕ್ಕೆ ಸರಾಸರಿ ₹ 14 ಕೋಟಿ ನಷ್ಟವಾಗಿದೆ.

ಜಿಲ್ಲೆಗೆ ಸರ್ಕಾರವು ಕಳೆದ ವರ್ಷ ₹ 95 ಕೋಟಿ ನೋಂದಣಿ ಶುಲ್ಕ ಸಂಗ್ರಹದ ಗುರಿ ನಿಗದಿಪಡಿಸಿತ್ತು. ಆಗ ₹ 89 ಕೋಟಿ ಗುರಿಯನ್ನು ತಲುಪಲಾಗಿತ್ತು. ಈ ವರ್ಷವೂ ₹ 95 ಕೋಟಿ ಗುರಿ ಇದೆ. ಆದರೆ ಲಾಕ್‌ಡೌನ್, ಕೊರೊನಾ ಕರ್ಫ್ಯೂ ಸರ್ಕಾರದ ಆದಾಯಕ್ಕೆ ನಷ್ಟ ಉಂಟು ಮಾಡಿದೆ.

ಚಿಕ್ಕಬಳ್ಳಾಪುರ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಸ್ಥಳ. ಈ ಕಾರಣದಿಂದ ಇಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುವವರು ಸಹ ಹೆಚ್ಚಿದ್ದಾರೆ. ಇಲ್ಲಿ ಹೂಡಿಕೆ ಮಾಡಿದರೆ ಐದಾರು ವರ್ಷಗಳಲ್ಲಿ ಆ ಭೂಮಿ, ನಿವೇಶನಕ್ಕೆ ಹೆಚ್ಚಿನ ಬೆಲೆ ದೊರೆಯುತ್ತದೆ ಎನ್ನುವ ಆಶಾಭಾವ ಜನರಲ್ಲಿದೆ.

ಸಾಮಾನ್ಯವಾಗಿ ಮಾರ್ಚ್ ಮತ್ತು ಬಸವ ಜಯಂತಿ (ಮೇ) ಆಸುಪಾಸಿನಲ್ಲಿ ಖರೀದಿ ವ್ಯವಹಾರಗಳು ಉತ್ತಮವಾಗಿ ನಡೆಯುತ್ತವೆ. ಈ ಅವಧಿಯಲ್ಲಿ ಹೆಚ್ಚಿನ ಆದಾಯವೂ ಸರ್ಕಾರದ ಬೊಕ್ಕಸ ಸೇರುತ್ತದೆ. ಆದರೆ ಈ ಬಾರಿ ಈ ಆದಾಯ ಖೋತಾ ಆಗಿದೆ. ಜಿಲ್ಲಾ ನೋಂದಣೆ ಇಲಾಖೆ ಮೂಲಗಳ ಪ್ರಕಾರ ತಿಂಗಳಿಗೆ ಸರಾಸರಿ ₹ 6 ಕೋಟಿಯಿಂದ ₹ 7 ಕೋಟಿ ಆದಾಯ ಖೋತಾ ಆಗಿದೆ. ಮಾರ್ಚ್‌ನಲ್ಲಿಯೂ ನೋಂದಣಿ ಪ್ರಕ್ರಿಯೆಗಳು ಇಳಿಮುಖವಾದ ಕಾರಣ ಈ ಹಣದ ಲೆಕ್ಕಾಚಾರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

‘ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೋಂದಣಿ ಸ್ಥಗಿತವಾಗಿದೆ. ವರ್ಷದ ಹಣಕಾಸು ವ್ಯವಹಾರಗಳು ಮಾರ್ಚ್‌ನಲ್ಲಿ ಕೊನೆ ಆಗುತ್ತದೆ. ಆಗ ಕೆಲವರು ಮುಂದಿನ ವರ್ಷ ಶುಲ್ಕ ಹೆಚ್ಚಬಹುದು ಎಂದು ಅಥವಾ ಮುಂದಿನ ವರ್ಷ ವ್ಯವಹಾರಗಳು ಹೆಚ್ಚುತ್ತದೆ. ಹೂಡಿಕೆಗೆ ಪ್ರಶಸ್ತವಾಗುತ್ತದೆ ಎಂದು ಖರೀದಿ ನಡೆಸುವರು. ಆದರೆ ಈ ಬಾರಿ ಅಂತಹ ಖರೀದಿ ಪ್ರಕ್ರಿಯೆಗಳು ಇಳಿಮುಖವಾಗಿವೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸುವರು.

ಶ್ರಾವಣ, ಭಾದ್ರಪದ, ದಸರಾದಲ್ಲಿ ನೋಂದಣಿ ಹೆಚ್ಚು. ಆಷಾಢ, ಮಹಾಲಯ ಅಮಾವಾಸ್ಯೆಗಳ ಸಮಯದಲ್ಲಿ ನೋಂದಣಿ ಕಡಿಮೆ ಇರುತ್ತದೆ. ಸೋಮವಾರ ಮತ್ತು ಗುರುವಾರ ಜನರು ಹೆಚ್ಚು ನೋಂದಣಿಗೆ ಬರುವರು. ಶನಿವಾರ ಮತ್ತು ಮಂಗಳವಾರ ಕಡಿಮೆ ಇರುತ್ತದೆ. ಹೀಗೆ ನಂಬಿಕೆಗಳು ಸಹ ನೋಂದಣಿ ಪ್ರಕ್ರಿಯೆಯಲ್ಲಿ ಪ್ರಮುಖವಾಗಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಜೆ.ವಿ.ಯಶೋಧರ ಮಾಹಿತಿ ನೀಡಿದರು.

‘ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ನೋಂದಣಿಗಳು ಜರುಗುತ್ತವೆ. ಆ ಮೂಲಕ ಆದಾಯವೂ ಇಲ್ಲಿ ಹೆಚ್ಚಿದೆ. ನಂತರ ಗೌರಿಬಿದನೂರು ಮತ್ತು ಚಿಂತಾಮಣಿಯಲ್ಲಿ ನೋಂದಣಿಗಳು ನಡೆಯುತ್ತವೆ. ಕೋವಿಡ್‌ನಿಂದ ಕಚೇರಿಗಳು ಬಂದ್ ಆಗಿವೆ. ಅಂದ ಮೇಲೆ ನಷ್ಟವೇ ಅಲ್ಲವೇ’ ಎಂದರು.

ಎರಡನೇ ಅಲೆಯ ಪರಿಣಾಮ: ಕೋವಿಡ್ ಮೊದಲ ಅಲೆಯಲ್ಲಿಯೂ ಆದಾಯ ಕುಸಿದಿತ್ತು. ಆದರೆ ಸಂಪೂರ್ಣವಾಗಿ ನೋಂದಣಿ ಪ್ರಕ್ರಿಯೆ ಬಂದ್ ಆಗಿರಲಿಲ್ಲ. ಗಂಟೆಗೆ ನಾಲ್ಕು ನೋಂದಣಿ ಪ್ರಕ್ರಿಯೆಗೆ ಅವಕಾಶವಿತ್ತು. ಆದಾಯ ಸ್ವಲ್ಪ ಮಟ್ಟಿಗಾದರೂ ಬರುತ್ತಿತ್ತು. ಆದರೆ ಈಗ ‍ಆದಾಯವೇ ಬಂದ್ ಆಗಿದೆ.

‘ನಗರದಲ್ಲಿ ನಿವೇಶನ ಖರೀದಿಗೆ ಸಂಬಂಧಿಸಿದಂತೆ ಕರಾರು ಮಾಡಿಕೊಂಡು ಎರಡು ತಿಂಗಳಾಗಿತ್ತು. ಇನ್ನೇನು ನೋಂದಣಿ
ಮಾಡಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಜಾರಿ ಆಯಿತು. ಹಣ ಸಹ ವಂಚಿದ್ದೆ. ನಾವು ಅಂದುಕೊಂಡ ಸಮಯದಲ್ಲಿ ನಮ್ಮ ಹೆಸರಿಗೆ ನಿವೇಶನ ನೋಂದಣಿ ಆಗಲಿಲ್ಲವಲ್ಲ ಎನ್ನುವ ಬೇಸರ ಇದೆ. ಉಪನೋಂದಣಾಧಿಕಾರಿ ಕಚೇರಿ ಯಾವಾಗ
ತೆರೆಯುತ್ತದೆಯೋ ಎಂದು ಕಾದು ನೋಡುತ್ತಿದ್ದೇವೆ’ ಎನ್ನುವರು ನಗರದ ನಿವಾಸಿ ಶ್ರೀರಾಮ್.

ಕುಸಿತದ ಭಯ: ತುರ್ತು ಕಾರಣಕ್ಕೆ ನಿವೇಶನ ಮಾರಾಟಕ್ಕೆ ಮುಂದಾದವರಿಗೆ ಕೊರೊನಾ ದರ ಕುಸಿತದ ಬಿಸಿಯನ್ನೂ ತಟ್ಟಿಸಿದೆ. ಕೊರೊನಾ ಕಾರಣದಿಂದ ಜನರ ಆರ್ಥಿಕ ಶಕ್ತಿ ಸಹ ಕುಂಠಿತವಾಗಿದೆ. ಈ ಕಾರಣದಿಂದ ಖರೀದಿ ಪ್ರಕ್ರಿಯೆಗಳ ಮೇಲೆ ದುಷ್ಟಪರಿಣಾಮ ಬೀರುತ್ತದೆ. ನಗರದ ಸುತ್ತಮುತ್ತ ಲೇಔಟ್ ಮಾಡಿರುವವರು ಹಾಗೂ ನಿವೇಶನಗಳನ್ನು ಮಾರಾಟಕ್ಕೆ ಮುಂದಾಗಿರುವವರಿಗೆ ನಿರೀಕ್ಷಿತ ಬೆಲೆಗೆ ಮಾರಾಟ ಆಗುವುದೇ ಎನ್ನುವ ಅನುಮಾನಗಳು ಮೂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.