ಗುರುವಾರ , ಜುಲೈ 29, 2021
24 °C
ಜಿಲ್ಲಾಡಳಿತ ಭವನದ ಎದುರು ರಾಜ್ಯ ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರ ಪ್ರತಿಭಟನೆ

ಬಾಕಿ ವೇತನ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಬಾಕಿಯಿರುವ ವೇತನ ಬಿಡುಗಡೆ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರ ಸಂಘದ ನೌಕರರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ‘ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಮಾರ್ಚ್‍ನಿಂದ ವೇತನ ನೀಡಿಲ್ಲ. ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.

‘ಕೂಡಲೇ ನೌಕರರಿಗೆ ಬಾಕಿ ವೇತನ, ಪಿಎಫ್ ಇಎಸ್‍ಐ ಕಾರ್ಡ್ ಒದಗಿಸಿ ನೆಮ್ಮದಿ ಜೀವನ ಕಲ್ಪಿಸಬೇಕಿದೆ. ಲಾಕ್‍ಡೌನ್ ಕಾರಣಕ್ಕೆ ಇತರೆ ಇಲಾಖೆಗಳ ನೌಕರರಿಗೆ ನೀಡಿರುವ ಪಡಿತರ ಕಿಟ್‍ಗಳನ್ನು ಅಡುಗೆ ನೌಕರರಿಗೂ ನೀಡಬೇಕು‘ ಎಂದು ಒತ್ತಾಯಿಸಿದರು.

‘ಕಳೆದ 12 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಕೆಲಸ ಕಳೆದುಕೊಂಡಿರುವ ಬಿಸಿಎಂ ಇಲಾಖೆ ನೌಕರರನ್ನು ನೂತನವಾಗಿ ಪ್ರಾರಂಭಿಸುವ ವಸತಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ನೇಮಿಸಿಕೊಳ್ಳಬೇಕು. ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ನೌಕರರ ವೇತನವನ್ನು ₹25 ಸಾವಿರಕ್ಕೆ ಏರಿಸಬೇಕು. ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಮುನಿಯಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಕದಿರಪ್ಪ, ನವೀನ, ಮಂಜುನಾಥ್, ವೆಂಕಟರವಣಪ್ಪ, ಶಿವಣ್ಣ, ವೆಂಕಟಲಕ್ಷ್ಮಮ್ಮ, ಆದಿಲಕ್ಷ್ಮಮ್ಮ, ರಮಾಮಣಿ, ಶೋಭಾ, ರತ್ನಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು