ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆ

ಎರಡೇ ದಿನಗಳಲ್ಲಿ ದುಪ್ಪಟಾದ ಸೋಂಕಿತರ ಸಂಖ್ಯೆ
Last Updated 22 ಮೇ 2020, 8:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಕಾರಣಕ್ಕೆ ಮುಂಬೈನಲ್ಲಿ ಸಿಲುಕಿ, ಇತ್ತೀಚೆಗಷ್ಟೇ ಜಿಲ್ಲೆಗೆ ವಾಪಾಸಾಗಿರುವ ಜನರಿಂದ ಜಿಲ್ಲೆಯಲ್ಲಿ ಎರಡೇ ದಿನಗಳಲ್ಲಿ ಕೋವಿಡ್‌ 19 ಪ್ರಕರಣಗಳು ಏಕಾಏಕಿ ಸ್ಫೋಟಗೊಂಡು, ಸೋಂಕಿತರ ಸಂಖ್ಯೆ ಎರಡೇ ದಿನದಲ್ಲಿ 75ಕ್ಕೆ ಏರಿಕೆಯಾಗಿ ಜನರಲ್ಲಿ ತಲ್ಲಣ ಉಂಟು ಮಾಡಿದೆ.

ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ವಾಪಾಸಾಗಿರುವವರ 265 ಜನರ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‌ ಧೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 45 ಜನರಿಗೆ ಕೋವಿಡ್‌ ತಗುಲಿರುವುದು ಪತ್ತೆಯಾಗಿ ಜನರ ನಿದ್ದೆಗೆಡಿಸಿದೆ.

ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ 25 ಪುರುಷರು ಮತ್ತು 20 ಮಹಿಳೆಯರಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದೆ. ಇದರಲ್ಲಿ ಒಂದು ವರ್ಷದ ಮಗುವಿನಿಂದ ಹಿಡಿದು 55 ವರ್ಷದ ವಯೋಮಾನದವರೂಇದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮುಂಬೈನಿಂದ ವಾಪಾಸಾದವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದು, ಈವರೆಗೆ 67 ಜನರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಇನ್ನೂ 78 ಜನರ ಮಾದರಿಗಳ ಫಲಿತಾಂಶವನ್ನು ಅಧಿಕಾರಿಗಳು ಎದುರು ನೋಡುತ್ತಿದ್ದು, ಅದರಲ್ಲಿ ಎಷ್ಟು ಜನರಿಗೆ ಕೋವಿಡ್‌ ತಗುಲಿರುತ್ತದೆ ಎಂಬ ಭೀತಿ ಆವರಿಸಿದೆ.

ಸದ್ಯ ಮುಂಬೈನಿಂದ ಹಿಂದಿರುಗಿದವರಲ್ಲಿ ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಜಿಲ್ಲಾಡಳಿತವು ಗೌರಿಬಿದನೂರು ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಕಸ್ತೂರಿ ಬಾ ಶಾಲೆ ಸೇರಿದಂತೆ ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮಾತ್ರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಇದೀಗ ಬಾಗೇಪಲ್ಲಿಯಲ್ಲಿ ಕೂಡ ಕೋವಿಡ್‌ ಕಾಣಿಸಿಕೊಳ್ಳುವ ಭೀತಿ ದಟ್ಟವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಹೊಸದಾಗಿ ವರದಿಯಾದ 49 ಕೋವಿಡ್‌ ಸೋಂಕಿತರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಮಾರ್ಚ್‌ ಎರಡನೇ ವಾರದಲ್ಲಿ ಜಿಲ್ಲೆಯ ಗೌರಿಬಿದನೂರಿನಲ್ಲಿ ಹಜ್ ಯಾತ್ರಿಕರಿಂದ ಕೋವಿಡ್‌ ಪ್ರಕರಣಗಳು ಮೊದಲು ವರದಿಯಾಗಿ, ಸರಣಿಯಲ್ಲಿ 12 ಜನರಿಗೆ ಕೋವಿಡ್ ವ್ಯಾಪಿಸಿಕೊಂಡು ಒಬ್ಬ ವೃದ್ಧೆಯನ್ನು ಬಲಿ ಪಡೆದಿತ್ತು. ಪರಿಸ್ಥಿತಿ ಕೈಮೀರುತ್ತಿರುವುದು ಅರಿತ ಸರ್ಕಾರ ಗೌರಿಬಿದನೂರಿಗೆ ವಿಶೇಷ ಅಧಿಕಾರಿ ನೇಮಕ ಮಾಡಿ, ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತು ಸೀಲ್‌ಡೌನ್‌ ಜಾರಿಗೊಳಿಸಿ ಕೋವಿಡ್‌ ನಿಗ್ರಹಿಸಿತ್ತು.

ಅದರ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡ ಸೋಂಕಿಗೆ ಒಬ್ಬ ವ್ಯಕ್ತಿ ಮೃತಪಟ್ಟು ಒಂಬತ್ತು ಜನರು ಕೋವಿಡ್ ಪೀಡಿತರಾಗಿದ್ದರು. ಜಿಲ್ಲಾಡಳಿತ ಜಿಲ್ಲಾ ಕೇಂದ್ರದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಣಗುತ್ತಿರುವಾಗಲೇ ಕೋವಿಡ್‌ ವಾಣಿಜ್ಯ ನಗರಿ ಚಿಂತಾಮಣಿಗೆ ಅಡಿ ಇಟ್ಟಿತ್ತು. ಸದ್ಯ ಚಿಂತಾಮಣಿಯಲ್ಲಿ ಐದು ಜನರಿಗೆ ಕೋವಿಡ್‌ ತಗುಲಿದೆ.

ಮಾರ್ಚ್‌ನಿಂದ ಸುಮಾರು ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 26 ಜನರಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿತ್ತು. ಇದೀಗ ಮಹಾರಾಷ್ಟ್ರದಿಂದ ಹಿಂತಿರುಗಿದವರ ದೆಸೆಯಿಂದ ಎರಡನೇ ದಿನಗಳಲ್ಲಿ ಏಕಾಏಕಿ 49 ಜನರಿಗೆ ಕೋವಿಡ್ ಅಂಟಿರುವುದು ಬೆಳಕಿಗೆ ಬಂದು, ಪ್ರಕರಣಗಳ ಸಂಖ್ಯೆ ಗಗನಮುಖಿಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 61, ಚಿಕ್ಕಬಳ್ಳಾಪುರದ 9 ಮತ್ತು ಚಿಂತಾಮಣಿಯ 5 ಜನರು ಸೇರಿದಂತೆ 75 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 100 ಗಡಿ ದಾಟಲಿದೆ ಎಂಬ ಅಂದಾಜು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ 18 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 55 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT