ಬುಧವಾರ, ಸೆಪ್ಟೆಂಬರ್ 30, 2020
20 °C
ಮನೆಗಳಲ್ಲಿ ದೀಪ ಬೆಳಗಿ ಭಕ್ತಿ ಮೆರೆದ ಭಕ್ತರು, ಅಲ್ಲಲ್ಲಿ ಕರ ಸೇವಕರಿಗೆ ಸನ್ಮಾನ

ರಾಮಮಂದಿರ ಶಿಲಾನ್ಯಾಸ: ಎಲ್ಲೆಡೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದ ಪ್ರಯುಕ್ತ ಜಿಲ್ಲೆಯಾದ್ಯಂತ ರಾಮನ ಭಕ್ತರು, ಬಿಜೆಪಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಬುಧವಾರ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಅನೇಕರು ಮನೆಗಳಲ್ಲಿ ದೀಪ ಬೆಳಗಿ, ಮನೆಗಳ ಮೇಲೆ ಭಗವಾ ಧ್ವಜಗಳನ್ನು ಕಟ್ಟಿ ಅಭಿಮಾನ ಮೆರೆದರು. ಕೆಲವೆಡೆ ಕರಸೇವಕರು ಮತ್ತವರ ಕುಟುಂಬದವರನ್ನು ಸನ್ಮಾನಿಸಲಾಯಿತು.

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿ, ಕಟ್ಟೆಚ್ಚರ ವಹಿಸಿದ್ದರು. ಹೀಗಾಗಿ, ಸಾರ್ವಜನಿಕವಾಗಿ ಮೆರವಣಿಗೆ, ವಿಜಯೋತ್ಸವ ಆಚರಿಸಲು, ಸಿಹಿ ಹಂಚಲು ಪೊಲೀಸರು ಅವಕಾಶ ನೀಡಲಿಲ್ಲ.

ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಜನರ ಓಡಾಟದ ಮೇಲೆ ನಿಗಾ ಇರಿಸಲಾಗಿತ್ತು. ಭದ್ರತೆಗಾಗಿ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಮತ್ತು ಒಂದು ರಾಜ್ಯ ಮೀಸಲು ಪೊಲೀಸ್‌ ಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರದ 24ನೇ ವಾರ್ಡನಲ್ಲಿರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ನಗರ ಘಕಟದ ಕಾರ್ಯದರ್ಶಿ ನರೇಂದ್ರಬಾಬು ಮಾತನಾಡಿ, ‘ಅಯೋಧ್ಯೆಯಲ್ಲಿ ನಿರ್ಮಾಣ ಆಗುವ ಶ್ರೀರಾಮ ಮಂದಿರವು ಭಾರತೀಯ ಬಹುಸಂಖ್ಯಾತ ಹಿಂದೂಗಳ ಸ್ವಾಭಿಮಾನದ ಸಂಕೇತ’ ಎಂದು ಹೇಳಿದರು.

‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ಆಗುತ್ತಿರುವುದು ದೇಶದ ದೃಷ್ಟಿಕೋನ ಬದಲಾಗುತ್ತಿರುವ ಸಂಕೇತ. ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಮತ್ತು ಅನೇಕ ಸಂಘಟನೆಗಳು ಸಾಕಷ್ಟು ಚಳವಳಿ, ಹೋರಾಟಗಳು ನಡೆಸಿದ್ದವು. ಕರ ಸೇವಕರ ತ್ಯಾಗ ಬಲಿದಾನದಿಂದ ಪ್ರಸ್ತುತ ಮಂದಿರ ನಿರ್ಮಾಣವಾಗುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಅಶೋಕ್,  ಮುಖಂಡರಾದ ಕೆ.ಎಲ್.ಸುರೇಶ್, ಜೆಸಿಬಿ ಮಂಜುನಾಥ್, ಬೀಡ ಸ್ವಾಮಿ, ಮಧುಚಂದ್ರ, ದಿವಾಕರ್ ಬಾಬು ಕೆ.ಎನ್.ಟಿ ಲಕ್ಷ್ಮಣ್,ಕೆ.ಎಲ್. ಜಗನ್ನಾಥ್, ನೂತನ್, ವಿಚ್‌ಪಿ ಶಿವಕುಮಾರ್, ಭಜರಂಗದಳ ಸುನೀಲ್ ವಿವೇಕ್ ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು