ಚಿಕ್ಕಬಳ್ಳಾಪುರ: ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳುವಷ್ಟರಲ್ಲಿ ತಾಲ್ಲೂಕಿನ ನಂದಿಗಿರಿಧಾಮಕ್ಕೆ ರೋಪ್ ವೇ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಸಂಬಂಧ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಪ್ರವಾಸೋದ್ಯಮ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಜೊತೆ ಸಭೆ ನಡೆಸಲಾಗುವುದು. ಆ ಸಭೆಯನ್ನು ನಂದಿಯಲ್ಲಿ ಆಯೋಜಿಸಬೇಕೆ ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ’ ಎಂದರು.
‘ದೇವನಹಳ್ಳಿ ವಿಮಾನ ನಿಲ್ದಾಣ, ನಂದಿಗಿರಿಧಾಮ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ಸರ್ಕಿಟ್ ಮಾಡಬೇಕು ಎನ್ನುವ ಚಿಂತನೆ ಇದೆ. ನಂದಿ ಬೆಟ್ಟದಲ್ಲಿನ ಹೋಟೆಲ್‌ಗಳಲ್ಲಿ ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೊಸ ಆಹಾರ ಪದ್ಧತಿಗಳಿಗೆ ಅವಕಾಶ ನೀಡಬೇಕಾಗಿದೆ. ರೆಸ್ಟೋರೆಂಟ್‌ನಲ್ಲಿ ಎಲ್ಲ ರೀತಿಯ ಆಹಾರ ದೊರೆಯಬೇಕು’ ಎಂದರು.
‘ಈಗಾಗಲೇ ಗಿರಿಧಾಮದಲ್ಲಿ ರೋಪ್ ವೇಗೆ ಎರಡು ಎಕರೆ ಜಾಗ ನೀಡಿದ್ದೇವೆ. ಅದಕ್ಕೆ ಗಡಿ ನಿಗದಿ ಮಾಡಬೇಕು. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಈಗ ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ ಜಾಗದ ಕೊರತೆ ಆಗಲಿದೆ. ಆದ್ದರಿಂದ ವಾಹನಗಳನ್ನು ಕೆಳಭಾಗದಲ್ಲಿ ನಿಲ್ಲಿಸಿ ಅಲ್ಲಿಂದ ಪ್ರವಾಸಿಗರನ್ನು ಬಸ್‌ಗಳಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಈ ಹಿಂದೆ ಚುನಾವಣೆ ಪೂರ್ವದಲ್ಲಿ ರೋಪ್ ವೇ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದರು. ಆದರೆ ಕಾಮಗಾರಿಗೆ ಚಾಲನೆ ದೊರೆಯಲಿಲ್ಲ. ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ಸಂಬಂಧಿಸಿದ 3 ಎಕರೆ ಜಮೀನಿನ ಸಮಸ್ಯೆ ಪರಿಹಾರವಾಗಿದೆ. 20 ಗುಂಟೆ ಜಮೀನಿನ ಸಮಸ್ಯೆ ಮಾತ್ರವಿದೆ’ ಎಂದು ತಿಳಿಸಿದರು.
‘ಪ್ರಕೃತಿಯ ಸೊಬಗು ಈಗ ಯಾವ ರೀತಿಯಲ್ಲಿ ಇದೆಯೊ ಅದೇ ರೀತಿಯಲ್ಲಿ ಇರಬೇಕು. ನಿಮಗೆ ಕೊಟ್ಟಿರುವ ಜಾಗದಲ್ಲಿ ಮಾತ್ರ ರೋಪ್ ವೇ ಕಾಮಗಾರಿ ಮಾಡಿ ಎಂದು ಹೇಳಿದ್ದೇವೆ. ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳುವ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಬದ್ಧವಾಗಿದ್ದೇನೆ’ ಎಂದು ವಿವರಿಸಿದರು.
‘ಕನ್ನಡಭವನ ಪೂರ್ಣಕ್ಕೆ ₹ 6.25 ಕೋಟಿ ಅಗತ್ಯವಿತ್ತು. ಮಾರ್ಚ್‌ನಲ್ಲಿ ₹2 ಕೋಟಿ ಕೊಡಿಸಿದ್ದೇ. ಈಗ ಉಳಿದ ₹ 4.25 ಕೋಟಿ ಮಂಜೂರಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯ ಅಥವಾ 2025ರ ಜನವರಿಗೆ ಬಳಕೆಗೆ ಮುಕ್ತಗೊಳಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.