ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಹೊಲದಲ್ಲೇ ಕೊಳೆಯುತ್ತಿರುವ ಟೊಮೆಟೊ

ಕಳಪೆ ಬಿತ್ತನೆ ಬೀಜದಿಂದಲೂ ಕೈಸುಟ್ಟುಕೊಂಡ ರೈತರು ಕಂಗಾಲು: ಕೇಳುವವರಿಲ್ಲ ಬೆಳೆಗಾರರ ಗೋಳು
Last Updated 17 ಆಗಸ್ಟ್ 2021, 2:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಟೊಮೆಟೊ ಸಹ ಪ್ರಮುಖ ಬೆಳೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬಹಳಷ್ಟು ರೈತರು ಟೊಮೆಟೊ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಬೆಲೆ ಅನಿಶ್ಚಿತತೇ ರೈತರನ್ನು ತೀವ್ರವಾಗಿಯೇ ಬಾಧಿಸುತ್ತಿದೆ. ಇದು ಸಹಜವಾಗಿ ರೈತರನ್ನು ಕಂಗಾಲು ಮಾಡಿದೆ.

15 ಕೆ.ಜಿ ತೂಕದ ಹ್ರೈಬ್ರೀಡ್ (ಸೀಡ್) ಟೊಮೆಟೊ ಬೆಲೆ ಗರಿಷ್ಠ ₹ 120 ಇದೆ. ನಾಟಿ ಟೊಮೆಟೊ ₹ 130 ಇದೆ. ಕೆಲವು ದಿನಗಳ ಹಿಂದೆ ಬೆಲೆ ₹ 100ರ ಒಳಗಿತ್ತು. ಬೆಲೆ ಕುಸಿತದಿಂದ ಕೆಲವು ಬೆಳೆಗಾರರು ಕೊಯ್ಲಿನ ಕಾಸು ಸಹ ದೊರೆಯುವುದಿಲ್ಲ ಎಂದು ಹೊಲಗಳಲ್ಲಿ ಟೊಮೆಟೊವನ್ನು ಕೊಳೆಯಲು ಬಿಟ್ಟಿದ್ದಾರೆ.

ಮತ್ತೊಂದು ಗುಲಾಬಿ ಬಣ್ಣದ ಟೊಮೆಟೊ ಬೆಳೆದಿರುವ ಬೆಳೆಗಾರರು ಮತ್ತಷ್ಟು ಕೈಸುಟ್ಟುಕೊಂಡಿದ್ದಾರೆ. ಈ ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕಡಿಮೆ ಇದೆ. ಬಿತ್ತನೆ ಬೀಜದ ಸಮಸ್ಯೆಯಿಂದ ಹಣ್ಣು ಈ ಬಣ್ಣಕ್ಕೆ ತಿರುಗಿದೆ. ಈ ಟೊಮೆಟೊ ಕೇಳುವವರೇ ಇಲ್ಲ ಎಂದು ರೈತರು ಹೇಳುವರು.

ಒಂದೂವರೆ ಎಕರೆಯಲ್ಲಿ ₹ 3 ಲಕ್ಷ ವೆಚ್ಚ ಮಾಡಿ ಟೊಮೆಟೊ ಬೆಳೆದಿರುವ ಚಿಕ್ಕಬಳ್ಳಾಪುರದ ಕಿರಣ್ ಬೆಲೆ ಇಲ್ಲದ ಕಾರಣ ಕಂಗಾಲಾಗಿದ್ದಾರೆ. ಹಣ್ಣನ್ನು ಕೊಯ್ಲು ಮಾಡದೆ ಗಿಡಗಳಲ್ಲಿಯೇ ಬಿಟ್ಟಿದ್ದಾರೆ.

‘ಮಾರುಕಟ್ಟೆಗೆ ಟೊಮೆಟೊ ಕೊಂಡೊಯ್ಯುವುದನ್ನೇ ಬಿಟ್ಟಿದ್ದೇನೆ. ಕೊರೊನಾ ಬಂದ ದಿನದಿಂದಲೂ ಸರಾಸರಿ ಬೆಲೆಯೂ ಇಲ್ಲವಾಗಿದೆ. ಕನಿಷ್ಠ ಒಂದು ಕ್ರೇಟ್ (15 ಕೆ.ಜಿ) ₹ 250 ಬೆಲೆ ಇದ್ದರೆ ಬಂಡವಾಳ ವಾಪಸ್ ಬರುತ್ತದೆ. ಇಲ್ಲದಿದ್ದರೆ ನಷ್ಟ’ ಎನ್ನುತ್ತಾರೆ ಕಿರಣ್.

‘ಒಮ್ಮೆ 120 ಬಾಕ್ಸ್ ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ದೆವು. 20 ಬಾಕ್ಸ್ ಹಣ್ಣು ಸರಿ ಇಲ್ಲ ಎಂದು ತಿರಸ್ಕರಿಸಿದವು. 100 ಬಾಕ್ಸ್ ಖರೀದಿಸಿದರು. ಮಾರುಕಟ್ಟೆಗೆ ಕೊಂಡೊಯ್ದ ಹಣ, ಕೂಲಿಯೂ ದೊರೆಯಲಿಲ್ಲ. ಅಂದಿನಿಂದ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದೇವೆ’ ಎಂದು ಹೇಳುವರು.

‘ಡಿ.ಹೊಸೂರಿನಲ್ಲಿ ಟೊಮೆಟೊ ಬೀಜ ಖರೀದಿಸಿದ್ದೆವು. ಆದರೆ ಬೀಜ ಗುಣಮಟ್ಟದ್ದಾಗಿಲ್ಲ. ಎಲ್ಲವೂ ಗುಲಾಬಿ ಬಣ್ಣಕ್ಕೆ ತಿರುಗಿದೆ. ಈ ಹಣ್ಣಿಗೆ ಬೆಲೆ ದೊರೆಯುವುದಿಲ್ಲ. ಇದು ಸಹ ನಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಬಹಳಷ್ಟು ರೈತರು ಕಳಪೆ ಬೀಜದ ಕಾರಣ ಕೈಸುಟ್ಟುಕೊಂಡಿದ್ದಾರೆ’ ಎಂದರು.

‘ರಾಯಚೂರು, ಮುಂಬೈಗೆ ಟೊಮೆಟೊ ಕಳುಹಿಸುತ್ತೇವೆ. ಒಳ್ಳೆಯ ಹಣ್ಣಿಗೆ ಒಳ್ಳೆಯ ಬೆಲೆ ಇದೆ. ಕೋಲಾರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೆಟೊ ಬಿತ್ತನೆ ಬೀಜದ ಸಮಸ್ಯೆ ಈ ಬಾರಿ ಎದುರಾಗಿದೆ. ಅದೇ ನಾಟಿ ಬೀಜಕ್ಕೆ ಸಮಸ್ಯೆ ಎದುರಾಗಿಲ್ಲ. ಹೈಬ್ರಿಡ್ ತಳಿ ಬೀಜಗಳು ಉತ್ತಮವಾಗಿಲ್ಲ. ರೋಸ್ ಟೊಮೆಟೊವನ್ನು ನಾವು ಖರೀದಿಸುವುದಿಲ್ಲ’ ಎಂದು ವ್ಯಾಪಾರಿ ಗೋಪಿ ಹೇಳುವರು.

‘ರೋಸ್ ಟೊಮೆಟೊವನ್ನು ದೂರದ ಪ್ರದೇಶಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಎರಡು ಮೂರು ದಿನಗಳ ಕಾಲ ವಾಹನಗಳಲ್ಲಿ ಅವು ಇರುವುದಿಲ್ಲಈ ಇಂತಹ ಹಣ್ಣನ್ನು ನಮ್ಮ ಬಳಿಗೆ ತಂದರೂ ನಾವು ಖರೀದಿಸುವುದಿಲ್ಲ’ ಎಂದು ಎನ್‌ಆರ್‌ಎಂ ಟೊಮೆಟೊ ಅಂಗಡಿ ಮಾಲೀಕರಾದ ಗೋಪಿ ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT