ಶನಿವಾರ, ಜನವರಿ 18, 2020
19 °C
ರಕ್ತ ಚಂದನ ಮತ್ತು ಶ್ರೀಗಂಧ ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ 24 ವಾಹನಗಳ ವಶ, ಮಾಲೀಕರ ಪತ್ತೆಗಾಗಿ ಪ್ರಯತ್ನಿಸಿ ಸೋತ ಅರಣ್ಯ ಇಲಾಖೆ ಅಧಿಕಾರಿಗಳು

ಚಿಕ್ಕಬಳ್ಳಾಪುರ: ತುಕ್ಕು ಹಿಡಿಯುತ್ತಿರುವ ಜಪ್ತಿ ವಾಹನಗಳು

ಜರುಗಹಳ್ಳಿ ರಾಮಾಂಜಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಕ್ತ ಚಂದನ ಮತ್ತು ಶ್ರೀಗಂಧ ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳು ಕಳೆದ ಆರು ವರ್ಷಗಳಿಂದ ವಿಲೇವಾರಿಯಾಗದೆ ನಗರ ಹೊರವಲಯದ ಸೂಲಾಲಪ್ಪ ದಿನ್ನೆಯಲ್ಲಿರುವ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿದು ಅನುಪಯುಕ್ತಗೊಳ್ಳುತ್ತಿವೆ.

ಅರಣ್ಯ ಸಂಪತ್ತಿನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದ್ವಿಚಕ್ರ ವಾಹನಗಳು ಸೇರಿದಂತೆ ಲಾರಿ, ಟೆಂಪೊ, ಆಟೊ, ಮಿನಿ ಟೆಂಪೊ ಮತ್ತು ಟಾಟಾ ಸುಮೊ, ಕ್ವಾಲಿಸ್, ಮಾರುತಿ ಸ್ವಿಫ್ಟ್‌, ಇಂಡಿಕಾ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಕೆಲ ವರ್ಷಗಳಿಂದ ವಶಕ್ಕೆ ಪಡೆದ ವಾಹನಗಳನ್ನು ದಂಡ ಪಾವತಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸುವುದಾಗಲಿ, ಹರಾಜಿನ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ನಡೆದಿಲ್ಲ ಎನ್ನಲಾಗಿದೆ.

ಜಪ್ತಿ ಮಾಡಿದ ವಾಹನಗಳನ್ನು ಹರಾಜು ಮಾಡುವುದಕ್ಕೆ ನ್ಯಾಯಾಲಯ ಅನುಮತಿ ಪಡೆಯಬೇಕು. ಇಂಥ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ತಪಾಸಣೆ ನಡೆಸಿ ವಾಹನ ಸ್ಥಿತಿ, ಸಾಮರ್ಥ್ಯ ಹಾಗೂ ಅದರ ಮೌಲ್ಯ ನಿರ್ಧರಿಸಬೇಕು. ಇದೆಲ್ಲ ಮುಗಿದ ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ಬಹಿರಂಗ ಹರಾಜು ನಡೆಸಿ ಹೆಚ್ಚಿನ ಬಿಡ್ ಮಾಡಿದವರಿಗೆ ವಾಹನಗಳನ್ನು ಹಸ್ತಾಂತರಿಸಬೇಕು. ಆದರೆ, ಈ ಬಗ್ಗೆ ಯಾರೂ ಆಸಕ್ತಿ ವಹಿಸದ ಕಾರಣ ವಾಹನಗಳು ಇಟ್ಟಲ್ಲಿಯೇ ಹಾಳಾಗುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.

ಸದ್ಯ ಅರಣ್ಯ ಇಲಾಖೆ ವಶದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 11 ಕಾರು, 8 ಲಾರಿ, 1 ಟೆಂಪೊ, 4 ಮಿನಿ ಟೆಂಪೊಗಳು ಸೇರಿದಂತೆ 24ಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಜಪ್ತಿ ಮಾಡಿದ ವಾಹನಗಳನ್ನು ಹಿಂಪಡೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಕೆಲ ವಾಹನಗಳಿಗೆ ನೋಂದಣಿ ಇಲ್ಲ. ಮಾಲಿಕರೇ ಪತ್ತೆಯಾಗುತ್ತಿಲ್ಲ’ ಎನ್ನುತ್ತಾರೆ.

ಈ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರನ್ನು ವಿಚಾರಿಸಿದರೆ, ‘ನಮ್ಮಲ್ಲಿ 31 ಪ್ರಕರಣಗಳಲ್ಲಿ ವಿವಿಧ ಬಗೆಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಪೈಕಿ ಸುಮಾರು 27 ವಾಹನಗಳು ನೆರೆಯ ಆಂಧ್ರಪ್ರದೇಶಕ್ಕೆ ಸೇರಿವೆ. ಆ ವಾಹನಗಳ ಮಾಲಿಕರನ್ನು ಹುಡುಕುವುದೇ ತುಂಬಾ ಕಷ್ಟವಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಕೂಡ ಕೊಟ್ಟಿದ್ದೇವೆ. ಕೆಲ ಮಾಲೀಕರನ್ನು ಪತ್ತೆ ಮಾಡಿದರೂ ಅವರು ವಾಹನ ನನ್ನದಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಜಪ್ತಿ ವಾಹನಗಳ ವಿಲೇವಾರಿ ಕಾರ್ಯ ವಿಳಂಬವಾಗುತ್ತಿದೆ’ ಎಂದು ಹೇಳಿದರು.

‘ವಾಹನಗಳು ಹಲವು ವರ್ಷಗಳಿಂದ ಚಲಿಸದೆ ನಿಂತರೆ, ತುಕ್ಕು ಹಿಡಿಯುತ್ತವೆ. ಅನಾಥವಾಗಿ ಬಿದ್ದ ವಾಹನಗಳಲ್ಲಿ ದಿನ ಕಳೆದಂತೆ ಒಂದೊಂದೇ ಬಿಡಿ ಭಾಗಗಳು ಕಣ್ಮರೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಯಾರಿಗೂ ಲಾಭವಿಲ್ಲ. ಬದಲು ಜಪ್ತಿ ವಾಹನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿದರೆ ಅರಣ್ಯ ಇಲಾಖೆ ಅಲ್ಪ ಆದಾಯವಾದರೂ ಬರುತ್ತದೆ. ಹಾಗಾಗಿ, ತಕ್ಷಣವೇ ಜಪ್ತಿ ವಾಹನಗಳನ್ನು ಹರಾಜು ಹಾಕುವ ಮೂಲಕ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ನಂದಿ ನಿವಾಸಿ ಪುರುಷೋತ್ತಮ್ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು