ಗುರುವಾರ , ಮಾರ್ಚ್ 23, 2023
32 °C
ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಪ್ರತಿಭಟನೆ

ಸದಾಶಿವ ವರದಿ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಅನುಮೋದಿಸಿ, ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ವಿಜಯ ನರಸಿಂಹ, ‘ಒಳಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರ್ಕರಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಆದ್ದರಿಂದ ರಾಜ್ಯ ಸರ್ಕಾರ ಸದಾಶಿವ ಆಯೋಗ ವರದಿ ಅನುಷ್ಠಾನದ ಮೂಲಕ ರಾಜ್ಯದಲ್ಲೂ ಒಳಮೀಸಲಾತಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನೇಕ ವರ್ಷಗಳಾಗಿವೆ. ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ರಾಜಕೀಯ ಒತ್ತಡಕ್ಕೆ ಮಣಿದು ವರದಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಈ ಹಿಂದೆ ತಿಳಿಸಿದ್ದರು. ಕೊಟ್ಟ ಮಾತಿನಂತೆ ಅವರು ಈಗ ವರದಿ ಜಾರಿಗೆ ತರಲು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ವಿ.ಅಮರ್ ಮಾತನಾಡಿ, ‘ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ, ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಮಾಡದಿದ್ದರೆ ಅದಕ್ಕೆ ಸೂಕ್ತ ಕಾರಣ ತಿಳಿಸಬೇಕು. ಸಮಾಜದಲ್ಲಿ ಇವತ್ತು ಮಾದಿಗರಿಗೂ ಸಮಾನತೆ ದೊರೆಯಬೇಕಾಗಿದೆ. ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದಲಾದರೂ ಸದಾಶಿವ ಆಯೋಗದ ವರದಿ ಜಾರಿಯಾಗಲೇಬೇಕು’ ಎಂದು ಒತ್ತಾಯಿಸಿದರು.

‘ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಕೆಲ ಜನಪ್ರತಿನಿಧಿಗಳು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೆಪ್ಟೆಂಬರ್‌ನಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸಬೇಕು’ ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ತಿಪ್ಪೇನಹಳ್ಳಿ ನಾರಾಯಣ್ ಮಾತನಾಡಿ, ‘ರಾಜ್ಯದಲ್ಲಿ ಮಾದಿಗರನ್ನು ರಾಜಕಾರಣಿಗಳು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಮಾದಿಗ ಸಮುದಾಯ ಇವತ್ತು ಹೀನಾಯ ಸ್ಥಿತಿ ತಲುಪಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಏಳಿಗೆಗೆ ಮುಂದಾಗುತ್ತಿಲ್ಲ. ಇಂದಿಗೂ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಾದಿಗರಿಗೆ ವಂಚನೆಯಾಗುತ್ತಲೇ ಇದೆ’ ಎಂದು ಆರೋಪಿಸಿದರು.

ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಕೆ.ವಿ ವೆಂಕಟೇಶ್, ಎಂ.ಜಿ.ಕಿರಣ್‍ಕುಮಾರ್, ಗೊರಮಡಗು ನಾರಾಯಣಸ್ವಾಮಿ, ನವೀನ್, ಚಲಪತಿ, ಚಂದ್ರಪ್ಪ, ಮುನಿರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು