ಶುಕ್ರವಾರ, ಡಿಸೆಂಬರ್ 6, 2019
20 °C

ಸೇವಾ ನಿರತ ತಜ್ಞ ವೈದ್ಯ ಮಳ್ಳೂರಿನ ಡಾ.ಪುವ್ವಾಡ ಸಂದೀಪ್

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕಳೆದ ತಿಂಗಳು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ (ಯೂರಾಲಜಿ) ತಜ್ಞ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ರೋಗಿಯೊಬ್ಬರ ರೋಗಪೀಡಿತ ೭.೨ ಕೆ.ಜಿ ಗಾತ್ರದ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಹೊರತೆಗೆದರು. ವಿಶ್ವದ ಅತಿದೊಡ್ಡ ಕಿಡ್ನಿ ಇದು ಎಂದು ಗಿನ್ನಿಸ್ ದಾಖಲೆ ಸೇರಲಿದೆ.

“ರೆಟ್ರೊಪೆರಿಟೋನಿಯಲ್ ನೆಫ್ರೆಕ್ಟೊಮಿ” ಶಸ್ತ್ರಚಿಕಿತ್ಸೆ ಮೂಲಕ ರೋಗಗ್ರಸ್ತ ಕಿಡ್ನಿಯನ್ನು ತೆಗೆದು ಹಾಕಿದವರು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಯೂರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಖ್ಯಾತ ಮೂತ್ರ ಶಾಸ್ತ್ರಜ್ಞ ಡಾ.ಪುವ್ವಾಡ ಸಂದೀಪ್ ಮತ್ತು ತಂಡದವರು.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಮೂಲದವರಾದ ಡಾ.ಪುವ್ವಾಡ ಸಂದೀಪ್, ಪ್ರತಿ ಭಾನುವಾರ ಮಳ್ಳೂರಿನ ತಮ್ಮ ಮನೆಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ, ಔಷಧಿ ನೀಡುತ್ತಾರೆ. ಮಳ್ಳೂರು ಸೇರಿದಂತೆ ತಾಲ್ಲೂಕಿನ ಸುಮಾರು ೬೦೦ ಮಂದಿಗೆ ತಮ್ಮ ಕುಟುಂಬದ ಪುವ್ವಾಡ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆ ಮೂಲಕ ಶಸ್ತ್ರಚಿಕಿತ್ಸೆ ಮಾಡಿದಿದ್ದಾರೆ. ಮಳ್ಳೂರಿನಲ್ಲಿ ತಮ್ಮ ಅಜ್ಜಿ ತಾತ ನೆನಪಿನಲ್ಲಿ ಸ್ಥಾಪಿಸಿರುವ ಮಲ್ಲಶೆಟ್ಟಿ ಗೌರಮ್ಮ ಉಚಿತ ಆರೋಗ್ಯ ಕೇಂದ್ರದ ಮೂಲಕ ಭಾನುವಾರದಂದು ಗ್ರಾಮೀಣರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಲ್ಲದೆ, ಆಗಿಂದಾಗ್ಗೆ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುತ್ತಾರೆ.

“ನನ್ನ ಅಜ್ಜಿ ಆಸ್ಪತ್ರೆಯಲ್ಲಿ ಶುಶ್ರೂಶಕಿಯಾಗಿದ್ದರು. ಹಲವಾರು ಮಂದಿಗೆ ಆಕೆ ಸಹಾಯ ಮಾಡಿದ್ದನ್ನು ನೋಡಿದ್ದೇನೆ. ನನ್ನ ಅಜ್ಜ ಮಲ್ಲಶೆಟ್ಟಪ್ಪ ಪೋಸ್ಟ್ ಮಾಸ್ಟರ್ ಆಗಿದ್ದರು. ಅವರೂ ಸಹ ತಮ್ಮ ಜ್ಞಾನವನ್ನು ಇತರರ ಸಹಾಯಕ್ಕೆ ಬಳಸುತ್ತಿದ್ದರು. ನನ್ನ ಮಾವ ಸೋಮಶೇಖರ್ ಅವರು ಏರ್ ಇಂಡಿಯಾದಲ್ಲಿ ವ್ಯವಸ್ಥಾಪಕರಾಗಿದ್ದು, ನಮ್ಮ ಹಳ್ಳಿಯ ಹಲವಾರು ಯುವಕರಿಗೆ ವಿಮಾನನಿಲ್ದಾಣದಲ್ಲಿ ಉದ್ಯೋಗ ಕೊಡಿಸಿದ್ದರು. ಇವರೆಲ್ಲರ ನಿಸ್ವಾರ್ಥಸೇವೆಯನ್ನು ಚಿಕ್ಕಂದಿನಿಂದ ಕಂಡಿದ್ದ ನನಗೂ ಸಹ ನನ್ನ ವಿದ್ಯೆ ನಮ್ಮ ಹಳ್ಳಿಯ ಜನಕ್ಕೆ, ಕಷ್ಟದಲ್ಲಿರುವವರಿಗೆ, ಬಡವರಿಗೆ ಅನುಕೂಲವಾಗಬೇಕೆಂಬ ತುಡಿತವಿದೆ. ಅದಕ್ಕಾಗಿಯೇ ನಮ್ಮ ಕುಟುಂಬದ ಪುವ್ವಾಡ ಫೌಂಡೇಷನ್ ಮೂಲಕ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದೇವೆ. ನನ್ನ ಪತ್ನಿ ಡಾ.ಪ್ರಿಯಾಂಕ, ತಮ್ಮ ಡಾ.ಸತ್ಯವಂಶಿಕೃಷ್ಣ (ಮೂಳೆ ತಜ್ಞ) ಮತ್ತು ಅವನ ಪತ್ನಿ ಡಾ.ವಿಷ್ಮ ಪ್ರಭು ಎಲ್ಲರೂ ತಜ್ಞ ವೈದ್ಯರೇ ಆಗಿದ್ದು, ಈ ಸೇವಾಕಾರ್ಯದಲ್ಲಿ ಜೊತೆಗೂಡುತ್ತೇವೆ. ಹಲವು ವಿದ್ಯಾರ್ಥಿಗಳಿಗೆ ಓದಲು ನೆರವು ನೀಡುತ್ತಿದ್ದೇವೆ” ಎಂದು ಡಾ.ಪುವ್ವಾಡ ಸಂದೀಪ್ ತಿಳಿಸಿದರು.

ಶ್ವಾನ ಮತ್ತು ಪಕ್ಷಿಪ್ರೇಮಿ:  ಡಾ.ಪುವ್ವಾಡ ಸಂದೀಪ್ ಅವರು ತಮ್ಮ ಮಳ್ಳೂರಿನ ಮನೆಯಲ್ಲಿ ಅಪರೂಪದ ನಾಯಿಗಳನ್ನು ಸಾಕಿದ್ದಾರೆ. ಸೈಬೀರಿಯನ್ ಹಸ್ಕಿ, ಶಿಟ್ಜು, ಮಾಲ್ಟೀಜ್, ಬುಲ್ ಟೆರಿಯರ್, ಲ್ಯಾಬ್ರೆಡಾರ್, ಸ್ಪ್ರಿಂಗರ್ ಸ್ಪೇನಿಯಲ್, ಪಗ್ ಮುಂತಾದ ತಳಿಗಳ ನಾಯಿಗಳಿವೆ. ತಮ್ಮ ನಾಯಿಗಳನ್ನು ಸಮರ್ಪಕವಾಗಿ ತರಬೇತಿ ನೀಡಿದ್ದಾರೆ. ಸುಮಾರು ೨೦ ದೇಶಗಳ ಸ್ಪರ್ಧೆಗಳಲ್ಲಿ ಈ ನಾಯಿಗಳು ಪ್ರಶಸ್ತಿ ಪಾರಿತೋಷಕಗಳನ್ನು ಪಡೆದಿವೆ. ಇವರ ಬಳಿಯಿರುವ ಲ್ಯಾಬ್ರೆಡಾರ್ ರಿಟ್ರೀವರ್ ಹತ್ತು ದೇಶಗಳಲ್ಲಿ ಚಾಂಪಿಯನ್ ಆಗಿದೆ. ಬುಲ್ ಟೆರಿಯರ್ ಮೂರು ದೇಶಗಳಲ್ಲಿ ಚಾಂಪಿಯನ್ ಮತ್ತು ವರ್ಲ್ಡ್ ಡಾಗ್ ಶೋ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಶಿಟ್ಜು, ಐದು ದೇಶಗಳಲ್ಲಿ ಚಾಂಪಿಯನ್ ಪಟ್ಟ ಪಡೆದಿದೆ ಮತ್ತು ಮಾಲ್ಟೀಜ್ ಎರಡು ದೇಶಗಳಲ್ಲಿನ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದೆ.

ಇವರ ಸಾಕು ಪ್ರಾಣಿಯಾಗಿ ಮಾರ್ಮೋಸೆಟ್ ಕೋತಿ, ಗಾಲಾ ಕುಕೋಟೊ, ಮಕಾವ್, ಆಫ್ರಿಕನ್ ಗ್ರೇ ಪ್ಯಾರೆಟ್, ಸನ್ ಕೆನ್ಯೂರ್ ಮೊದಲಾದ ಪಕ್ಷಿ ಪ್ರಬೇಧಗಳು ಇವರಲ್ಲಿವೆ.

ಅನಾಥಮಕ್ಕಳು : ಐವರು ಅನಾಥ ಮಕ್ಕಳನ್ನು ತಮ್ಮೊಂದಿಗೇ ಇರಿಸಿಕೊಂಡಿದ್ದಾರೆ ಡಾ.ಪುವ್ವಾಡ ಸಂದೀಪ್. ಆ ಮಕ್ಕಳಿಗಾಗಿಯೇ ಊಟ, ವಸತಿ, ವಿದ್ಯಾಭ್ಯಾಸಕ್ಕೆ ಎಲ್ಲಾ ಸವಲತ್ತುಗಳನ್ನೂ ಮಾಡಿಕೊಟ್ಟಿದ್ದಾರೆ. ತಮ್ಮ ತಂದೆ ವೀರಕುಮಾರ್ ಮತ್ತು ತಾಯಿ ಕಲಾವತಿ ಅವರ ಜೊತೆಗೂಡಿ ಮನೆಯ ಪಕ್ಕದಲ್ಲಿಯೇ ಶ್ರೀ ಅಭಯ ವೀರಾಂಜನೇಯ ಮತ್ತು ವಿದ್ಯಾ ಗಣಪತಿ ದೇವಸ್ಥಾನವನ್ನು ಕಟ್ಟಿದ್ದಾರೆ.

**
“ತುಂಬಾ ಓದಿಕೊಂಡವರು, ತಜ್ಞ ವೈದ್ಯರು ನಗರಗಳನ್ನು ಇಲ್ಲವೇ ವಿದೇಶಗಳಲ್ಲಿ ಹೋಗಿ ನೆಲೆಸಿಬಿಡುತ್ತಾರೆ. ಹಳ್ಳಿಗಳಲ್ಲಿ ಸೇವೆ ಮಾಡುವ ಮನಸ್ಸಿರುವವರು ವಿರಳ. ಡಾ.ಪುವ್ವಾಡ ಸಂದೀಪ್ ಅವರನ್ನು ನಾನು ಚಿಕ್ಕವಯಸ್ಸಿನಿಂದಲೂ ನೋಡಿದ್ದೇನೆ. ಅವರಿಗೆ ಹಳ್ಳಿಯ ಬಗ್ಗೆ, ಕೃಷಿಯ ಬಗ್ಗೆ ಆಸಕ್ತಿ ಹೆಚ್ಚು. ಅವರು ನಮ್ಮ ಹಳ್ಳಿಯಲ್ಲಿ ಹೃದಯ, ಕಣ್ಣು ಮುಂತಾದ ವಿಶೇಷ ತಜ್ಞ ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ಶಿಬಿರಗಳನ್ನು ಆಗಿಂದಾಗ್ಗೆ ನಡೆಸುವರು. ನೂರಾರು ಮಂದಿಗೆ ಬಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪ್ರತಿ ಭಾನುವಾರ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ನಮ್ಮ ಮಳ್ಳೂರಿನ, ತಾಲ್ಲೂಕಿನ ಮತ್ತು ಜಿಲ್ಲೆಯ ಹೆಮ್ಮೆ ಇವರು”
-ಅಮರ್, ಮಳ್ಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು