ಬುಧವಾರ, ಜೂನ್ 29, 2022
27 °C
ಸಮತಾ ಸೈನಿಕ ದಳದಿಂದ ಶೀಘ್ರ ಸಹಿ ಸಂಗ್ರಹ ಚಳವಳಿ; ಜಿಲ್ಲಾ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ

ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹ, ಶೀಘ್ರ ಸಹಿ ಸಂಗ್ರಹ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನಾಡಗೀತೆಯನ್ನು ತಿರುಚಿ ಅವಮಾನ ಮಾಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಮನುವಾದವನ್ನು ತುಂಬಿದ್ದಾರೆ’ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಸಮತಾ ಸೈನಿಕ ದಳದ ಮುಖಂಡರು ಆಗ್ರಹಿಸಿದರು. 

ಇಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿದ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ‘ಬಿಜೆಪಿ ಸರ್ಕಾರ ಶಿಕ್ಷಣವನ್ನು ಕೇಸರಿಮಯಗೊಳಿಸಲು ಹೊರಟಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರ ಈ ಮಟ್ಟಿನ ವಿವಾದ ಆಗಿರುವುದು ಇದೇ ಮೊದಲು’ ಎಂದು ಹೇಳಿದರು. 

ಬಿಜೆಪಿ ನಡೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದಾರೆ. ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಗೆ ಕೋಮುಗಲಭೆ, ಜಾತಿ ವಿಚಾರ ಮುಗಿಯಿತು. ಈಗ ಮಕ್ಕಳ ವಿಚಾರದಲ್ಲಿಯೂ ವಿಷ ಉಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು ಈ ಸಮಿತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸದಂತೆ ಸಮತಾ ಸೈನಿಕ ದಳವು ರಾಜ್ಯ ಮಟ್ಟದಲ್ಲಿ ಸಹಿ ಸಂಗ್ರಹ ಆಂದೋಲನವನ್ನು ಶೀಘ್ರದಲ್ಲಿಯೇ ನಡೆಸಲಿದೆ ಎಂದು ಹೇಳಿದರು. 

ರಾಜ್ಯ ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾಗಿ ಆಡಳಿತವನ್ನು ನೀಡಬೇಕು. ಆದರೆ ಇವರು ಮನುವಾದದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಮನುವಾದದ ಮೂಲಕ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ದೂರಿದರು.

ಪಿಎಸ್‌ಐ ಹಗರಣದ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆಗೆ ಮುಂದಾಗಿದೆ. ಇದರಿಂದ ಪ್ರತಿಭಾವಂತ ಮತ್ತು ಪರಿಶ್ರಮದಿಂದ ವ್ಯಾಸಂಗ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. 32 ಮಂದಿ ಈ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ತನಿಖಾ ಅಧಿಕಾರಿಗಳು ಹೇಳುತ್ತಿದ್ದಾರೆ. ಮರು ಪರೀಕ್ಷೆಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗಲಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಸರಿ ಇದಿದ್ದರೆ ಈ ಅಕ್ರಮ ನಡೆಯುತ್ತಿರಲಿಲ್ಲ. ಸರ್ಕಾರದ ತಪ್ಪಿಗೆ ವಿದ್ಯಾರ್ಥಿಗಳು ಬಲಿ ಆಗುತ್ತಿದ್ದಾರೆ. ಮರು ಪರೀಕ್ಷೆಯಿಂದ ಬಹಳಷ್ಟು ಅಭ್ಯರ್ಥಿಗಳ ಮಾನಸಿಕ ಸ್ಥೈರ್ಯ ಕುಗ್ಗಿದೆ ಎಂದರು. 

ಮರು ಪರೀಕ್ಷೆ ಬೇಡ ಎಂದು ಮುಖ್ಯಮಂತ್ರಿಗೆ ಮನವಿ ನೀಡಿದ್ದೇವೆ. ಮೇ 28ರಂದು‌ ಅಭ್ಯರ್ಥಿಗಳ ಜತೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ವಕೀಲ ಮುನಿರಾಜು ಮಾತನಾಡಿ, ಬಹುಜನ ಸಾಹಿತ್ಯ ಮತ್ತು ಭೋಜನ ಸಾಹಿತ್ಯಕ್ಕೂ ವ್ಯತ್ಯಾಸವಿದೆ. ರೋಹಿತ್ ಚಕ್ರತೀರ್ಥ ಅವರಿಗೆ ಈ ನೆಲದ ಸಾಹಿತ್ಯ ಮತ್ತು ಪರಂಪರೆಯ ಅರಿವು ಇಲ್ಲ. ನಾಡಗೀತೆಯನ್ನು ವಿಕೃತಗೊಳಿಸಿರುವುದು ಈ ನೆಲಕ್ಕೆ ಮಾಡಿದ ಅಪಮಾನ. ಇವರ ವಿರುದ್ಧ ಸ್ವಯಂ ಪ್ರೇರಿತವಾಗಿ ಸರ್ಕಾರ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಮತಾ ಸೈನಿಕ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಅಶ್ವತ್ಥಪ್ಪ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಶಿವಕುಮಾರ್, ಗಂಗಾಧರ್, ಹರಿಪ್ರಸಾದ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು