ಶನಿವಾರ, ಏಪ್ರಿಲ್ 1, 2023
32 °C
ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪಕ್ಷದ ಮುಖಂಡರ ಪ್ರತಿಪಾದನೆ

ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಕಳೆದ 75 ವರ್ಷದಿಂದ ಅಲ್ಪಸಂಖ್ಯಾತರ ಮತ ಪಡೆದಿರುವ ಕಾಂಗ್ರೆಸ್ ಅಧಿಕಾರ ಅನುಭವಿಸಿದೆ ಹೊರತು ಅಲ್ಪಂಸಂಖ್ಯಾತರ ನೈಜ ಅಭಿವೃದ್ಧಿಗೆ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು‌

ನಗರದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಿಜೆಪಿ ಕೋಮುವಾದಿ ಎಂದು ಆರೋಪಿಸುತ್ತಲೇ ಅಲ್ಪಸಂಖ್ಯಾತರ ಮತ ಪಡೆದಿರುವ ಕಾಂಗ್ರೆಸ್ ದುರುದ್ಧೇಶದಿಂದ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಅವರನ್ನು ಬಳಸಿಕೊಂಡು, ನಿರ್ಲಕ್ಷ್ಯ ಮಾಡಿದೆ. ಆದರೆ ಅವರ ಹೆಸರಿನಲ್ಲಿ ಇವರು ದೊಡ್ಡವರಾಗಿ, ಸರ್ಕಾರಗಳನ್ನು ಮಾಡಿದ್ದಾರೆ ಎಂದರು.

ದೀರ್ಘ ಕಾಲದ ಯೋಜನೆಗಳ ಮೂಲಕ ಅಲ್ಪಸಂಖ್ಯಾತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಾಶ್ವತ ಯೋಜನೆಗಳನ್ನು ಬಿಜೆಪಿ ನೀಡುತ್ತಿದೆ ಎಂದು ಹೇಳಿದರು.

‘ನಗರ ವ್ಯಾಪ್ತಿಯಲ್ಲಿ ನೀಡುತ್ತಿರುವ ಐದು ಸಾವಿರ ನಿವೇಶನಗಳಲ್ಲಿ ಅಲ್ಪಸಂಖ್ಯಾತರಿಗೆ ಎರಡು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನೀಡಲಾಗುತ್ತಿದೆ. ಇಲ್ಲಿರುವ ಕಾಂಗ್ರೆಸ್ ನಗರಸಭಾ ಸದಸ್ಯರು ನಿವೇಶನ, ಮನೆ ನೀಡಿದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು. ಇದೇ ತಿಂಗಳಲ್ಲಿ ನಿವೇಶನ ಹಕ್ಕು ಪತ್ರ ವಿತರಿಸಲಾಗುತ್ತದೆ. ಎಲ್ಲ ಯೋಜನೆಗಳಲ್ಲಿ ಮಾನದಂಡ ಪಾಲಿಸಲಾಗುತ್ತಿದ್ದು, ನಿಜವಾದ ಬಡವರಿಗೆ ಸರ್ಕಾರದ ಯೋಜನೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ’ ಎಂದರು.

‘ನಮ್ಮ ಸರ್ಕಾರ ಮತ್ತು ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಕೇವಲ ಮತ ಓಲೈಕೆಗಾಗಿ ರಾಜಕಾರಣ ಮಾಡುವುದಿಲ್ಲ. ಅಲ್ಪಸಂಖ್ಯಾತರನ್ನು ಇತರ ಸಮುದಾಯಗಳ ಜೊತೆಗೆ ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗುತ್ತಿದೆ’ ಎಂದರು.

ಕಾಂಗ್ರೆಸ್ ನವರು ಬಿಜೆಪಿಯನ್ನು ಕೋಮುವಾದಿ ಎಂದು ಆರೋಪಿಸುತ್ತಾರೆ. ಹಾಗಾದರೆ ಶಿವಸೇನೆ ಕೋಮುವಾದಿ ಪಕ್ಷವಲ್ಲವೇ? ಇವರ ಜೊತೆ ಮಹಾರಾಷ್ಟ್ರದಲ್ಲಿ ಹೇಗೆ ಸರ್ಕಾರ ಮಾಡಿದರು. ಅದೇ ರೀತಿ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಬಿಹಾರದಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮಾಡಿದರು ಎಂದು ಪ್ರಶ್ನಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಇಮ್ತಿಯಾಜ್, ಮಿಜಾಮಿಲ್, ಜಾಫರ್, ಪೆರಿಕಲ್ ಮಂಜುನಾಥ್, ಫಯಾಜ್, ಸಾದಿಕ್, ಇಸಾಕ್, ಕೃಷ್ಣಮೂರ್ತಿ, ಜಿಯಾವುಲ್ಲಾ, ಶಕೀಲ್, ಸಲೀಂ, ಆಸೀಪ್ ಉಪಸ್ಥಿತರಿದ್ದರು.

‘ಸ್ವಾಭಿಮಾನ ಬಿಟ್ಟು ಮುನಿಯಪ್ಪ ಕಾಂಗ್ರೆಸ್‌ನಲ್ಲಿ ಇದ್ದಾರೆ’

‘ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ರಾಜಕೀಯವಾಗಿ ಎಂದೋ ಕೊಂದಿದ್ದಾರೆ. ಅವರು ರಾಜಕೀಯವಾಗಿ ಎಷ್ಟು ಬಳಲಿದ್ದಾರೆ ಎಂಬುದು ಗೊತ್ತಿದೆ. ಆದರೆ ಅವರು ಸ್ವಾಭಿಮಾನ ಬಿಟ್ಟು ಇನ್ನೂ ಆ ಪಕ್ಷದಲ್ಲಿದ್ದಾರೆ. ನಮ್ಮಂತವರಾಗಿದ್ದರೆ ಒಂದು ದಿನವೂ ಇರುತ್ತಿರಲಿಲ್ಲ’ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು