ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಕೋವಿಡ್ ಮುಕ್ತ

ಕೋವಿಡ್-19 ತಡೆಗೆ ಸಂಬಂಧಿಸಿದ ಮುಂಜಾಗ್ರತಾ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಆಶಾಭಾವನೆ
Last Updated 15 ಜೂನ್ 2020, 14:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋವಿಡ್‌ ಪ್ರಕರಣಗಳ ನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದು, ಶೀಘ್ರದಲ್ಲಿಯೇ ಜಿಲ್ಲೆ ಕೋವಿಡ್‌ ಮುಕ್ತವಾಗಲಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಎಲ್ಲ ಮೇಲಿದೆ’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್-19 ತಡೆಗೆ ಸಂಬಂಧಿಸಿದ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಒಟ್ಟು 152 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮೂರು ಜನರು ಮೃತಪಟ್ಟಿದ್ದಾರೆ. 147 ಸೋಂಕಿತರು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮಾತ್ರ ಸದ್ಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ತಹಶೀಲ್ದಾರರು ಜಿಲ್ಲೆಯಾದ್ಯಂತ ಇರುವ ಕ್ಲಿನಿಕ್‌ಗಳು ಮತ್ತು ಔಷಧಿ ಮಳಿಗೆಗಳಲ್ಲಿ ಯಾವುದೇ ವ್ಯಕ್ತಿಯು ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಮುಂತಾದವುಗಳಿಗೆ ಮಾತ್ರೆಗಳನ್ನು ತೆಗೆದುಕೊಂಡರೆ ಅಂತಹವರ ಮಾಹಿತಿ ಪಡೆದು ತಕ್ಷಣವೇ ತಪಾಸಣೆಗೆ ಒಳಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಮತ್ತಷ್ಟು ಕಾರ್ಯಪಡೆಗಳನ್ನು ರಚಿಸುವ ಮೂಲಕ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಕೊರೊನಾ ಸೋಂಕಿನ ಸುಳಿವು ಸಿಗದೆ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಸೋಂಕಿತರು ಕಂಡುಬಂದಲ್ಲಿ ತಕ್ಷಣ ಅವರ ಗೌಪ್ಯ ಸ್ಥಳಕ್ಕೆ ವರ್ಗಾಯಿಸಿ ಅಗತ್ಯ ಚಿಕಿತ್ಸೆಗೆ ಏರ್ಪಾಡು ಮಾಡಬೇಕು’ ಎಂದು ಹೇಳಿದರು.

‘ಇತ್ತೀಚೆಗೆ ಜಿಲ್ಲಾ ಆಸ್ಪತ್ರೆಗೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳು ಬಂದಿದ್ದು, ಪ್ರಸ್ತುತ ನಮ್ಮಲ್ಲಿಯೇ ಕೋವಿಡ್‌ ಬೇಗ ಪತ್ತೆ ಹಚ್ಚಬಹುದಾಗಿದೆ. ಸೋಂಕಿತರನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಸೋಂಕು ಸಮುದಾಯದಲ್ಲಿ ಹರಡುವುದು ತಡೆಗಟ್ಟಲು ಸಹಕಾರಿಯಾಗತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿಂ.ಯೋಗೇಶ್‍ಗೌಡ, ಹಂಗಾಮಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು, ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT