ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರಿನಲ್ಲಿ ಒಣಹುಲ್ಲು ಘಟಕಕ್ಕೆ ಚಿಂತನೆ

Published 10 ನವೆಂಬರ್ 2023, 7:44 IST
Last Updated 10 ನವೆಂಬರ್ 2023, 7:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಚಿಮುಲ್ ಅಧ್ಯಕ್ಷರು ಮತ್ತು ನಿರ್ದೇಶಕರು ಇತ್ತೀಚೆಗೆ ವಿದೇಶ ಪ್ರವಾಸವನ್ನು ಕೈಗೊಂಡಿದ್ದರು. ಈ ಪ್ರವಾಸದ ಫಲ ಎನ್ನುವ ರೀತಿಯಲ್ಲಿ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದ ಕೋಚಿಮುಲ್‌ನ ಶಿತಲೀಕರಣ ಘಟಕದಲ್ಲಿ ‘ಒಣಹುಲ್ಲು ಘಟಕ’ ನಿರ್ಮಾಣಕ್ಕೆ ಕೋಚಿಮುಲ್ ಆಲೋಚಿಸುತ್ತಿದೆ. 

ಸ್ವಿಟ್ಜರ್‌ಲೆಂಡ್‌ ಪ್ರವಾಸ ಕೈಗೊಂಡಿದ್ದ ಕೋಚಿಮುಲ್ ನಿರ್ದೇಶಕರು ಅಲ್ಲಿ ನಿರ್ಮಿಸಿರುವ ಒಣಹುಲ್ಲು ಘಟಕವನ್ನು ವೀಕ್ಷಿಸಿದ್ದರು. ಇಂತಹ ಒಂದು ಘಟಕವನ್ನು ಅನುಷ್ಠಾನಗೊಳಿಸುವ ಬಗ್ಗೆಯೂ ಚಿಂತಿಸಿದ್ದರು. ಈ ಘಟಕವನ್ನು ಗೌರಿಬಿದನೂರಿನಲ್ಲಿ ರೂಪಿಸಬೇಕು ಎನ್ನುವ ಚಿಂತನೆ ಕೋಚಿಮುಲ್‌ಗೆ ಇದೆ ಎಂದು ಒಕ್ಕೂಟದ ಮೂಲಗಳು ತಿಳಿಸುತ್ತವೆ. 

ಇನ್ನೂ ಇದು ಆಲೋಚನೆಯ ರೂಪದಲ್ಲಿ ಇದೆ. ತಂತ್ರಜ್ಞಾನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದು ಇನ್ನೂ ಆರಂಭಿಕ ಹಂತ. ಪರಿಣತರನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಯಾವ ರೀತಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಬೇಕು ಎನ್ನುವ ಬಗ್ಗೆ ತಂತ್ರಜ್ಞರು ಪರಿಶೀಲಿಸುವರು ಎಂದು ‘ಪ್ರಜಾವಾಣಿ’ಗೆ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ತಿಳಿಸಿದ್ದಾರೆ. 

ಒಣಹುಲ್ಲನ್ನು ಪದರ ಪದರವಾಗಿ ಈ ಘಟಕದಲ್ಲಿ ರೂಪಿಸಲಾಗುತ್ತದೆ. ಈ ಹುಲ್ಲು ದೀರ್ಘಾವಧಿಯವರೆಗೆ ತಾಜಾತನವನ್ನು ಕಾಯ್ದುಕೊಂಡಿರುತ್ತದೆ. ಗೌರಿಬಿದನೂರಿನ ಬೆಂಗಳೂರು ರಸ್ತೆಯಲ್ಲಿರುವ ಶಿತಲೀಕರಣ ಘಟಕವು ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಇದೆ. ಇದು ಒಣ ಹುಲ್ಲು ಘಟಕ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎನ್ನುವ ಭಾವನೆ ನಿರ್ದೇಶಕರಲ್ಲಿ ಇದೆ.

ಹಾಲಿನ ಪ್ಯಾಕೆಟ್ ಘಟಕ: ಚಿಕ್ಕಬಳ್ಳಾಪುರದ ನಂದಿಕ್ರಾಸ್‌ನ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಈಗಾಗಲೇ ಕೋಚಿಮುಲ್ ಆಲೋಚಿಸಿದೆ. ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣವಾದರೆ ಕೋಚಿಮುಲ್ ವಿಭಜನೆ ಮತ್ತು ಚಿಮುಲ್ ರಚನೆಗೆ ಬಲ ಬರಲಿದೆ ಎನ್ನುವ ವಿಶ್ವಾಸವು ಜಿಲ್ಲೆಯ ಕೋಚಿಮುಲ್ ನಿರ್ದೇಶಕರದ್ದಾಗಿದೆ. 

ಇಂತಹ ಸಮಯದಲ್ಲಿಯೇ ಗೌರಿಬಿದನೂರಿನಲ್ಲಿ ಒಣಹುಲ್ಲು ಘಟಕ ನಿರ್ಮಾಣದಿಂದ ಜಿಲ್ಲೆಯಲ್ಲಿ ಹಾಲು ಒಕ್ಕೂಟದ ಚಟುವಟಿಕೆಗಳು ಸಹ ವಿಸ್ತಾರವಾದಂತೆ ಆಗುತ್ತದೆ. 

ಕೋಚಿಮುಲ್ ನಿರ್ದೇಶಕರು ಬರದ ಸಮಯದಲ್ಲಿ ವಿದೇಶ ಪ್ರವಾಸ ನಡೆಸಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. ವಿದೇಶ ಪ್ರವಾಸದಲ್ಲಿ ನಿರ್ದೇಶಕರು ಗಮನಿಸಿದ ಅಂಶಗಳು ಏನು ಅವು ಅವಳಿ ಜಿಲ್ಲೆಯಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬರುತ್ತವೆ ಎನ್ನುವ ಕುತೂಹಲ ಹೈನುಗಾರರದ್ದಾಗಿದೆ. 

ರೈತರಿಗೆ ಅನುಕೂಲ
ರಾಜ್ಯದಲ್ಲಿ ಯಾವ ಹಾಲು ಒಕ್ಕೂಟಗಳು ಇಂತಹ ಒಣಮೇವಿನ ಘಟಕಗಳನ್ನು ಹೊಂದಿಲ್ಲ. ಕೋಚಿಮುಲ್ ಈ ದಿಕ್ಕಿನಲ್ಲಿ ಆಲೋಚಿಸುತ್ತಿದೆ. ಈ ಘಟಕ ನಿರ್ಮಾಣದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ತಿಳಿಸಿದರು. ಗೌರಿಬಿದನೂರಿನ ಶಿತಲೀಕರಣ ಘಟಕವು ಈಗ ಬಾಗಿಲು ಮುಚ್ಚಿದೆ. ಅಲ್ಲಿ ಉತ್ತಮ ಜಾಗವೂ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT